Advertisement

ಬೈಂದೂರು ಮೆಸ್ಕಾಂ: ಶಾಕ್‌ ಹೊಡೆಯುತ್ತಿದೆ ವಿದ್ಯುತ್‌ ಬಿಲ್‌ಗ‌ಳು

11:07 PM Aug 30, 2019 | Sriram |

ಬೈಂದೂರು: ಮಳೆಗಾಲದಲ್ಲಿ ಅಲ್ಲಲ್ಲಿ ವಿದ್ಯುತ್‌ ತಂತಿ ತಗಲಿ ಶಾಕ್‌ ಹೊಡೆಯುವುದು ಸಾಮಾನ್ಯ. ಆದರೆ ಬೈಂದೂರು ವ್ಯಾಪ್ತಿಯ ಮೆಸ್ಕಾಂ ಗ್ರಾಹಕರಿಗೆ ಈ ತಿಂಗಳಲ್ಲಿ ಬಿಲ್‌ ನೋಡಿ ಶಾಕ್‌ ಹೊಡೆದಂತಾಗಿದೆ. ಪ್ರತಿ ತಿಂಗಳು ನೂರಿನ್ನೂರು ರೂಪಾಯಿ ಪಾವತಿಸುತ್ತಿರುವ ವಿದ್ಯುತ್‌ ಗ್ರಾಹಕರಿಗೆ ಈ ಬಾರಿ ದುಪ್ಪಟ್ಟು ಬಿಲ್‌ ಬಂದಿದೆ. ಮಾತ್ರವಲ್ಲದೆ ಕೆಲವು ಗ್ರಾಹಕರಿಗೆ ಸಾವಿರಾರು ರೂಪಾಯಿ ಬಿಲ್‌ ಕಳುಹಿಸುವ ಮೂಲಕ ಮೆಸ್ಕಾಂ ಆಘಾತ ಮೂಡಿಸಿದೆ.

Advertisement

ಕಾರಣಗಳೇನು
ಮೆಸ್ಕಾಂ ಇಲಾಖೆ ಒಂದಿಲ್ಲೊಂದು ವಿಷಯಗಳಿಂದ ಸದಾ ಸುದ್ದಿಯಾಗುತ್ತಲೆ ಇದೆ. ಮಳೆ-ಗಾಳಿಯಿಂದ ನಷ್ಟ ಉಂಟಾಗಿರುವುದು ಒಂದೆಡೆಯಾದರೆ ಮಳೆ ಗಾಲದ ವಿದ್ಯುತ್‌ ವ್ಯತ್ಯಯದಿಂದ ಗ್ರಾಹಕರ ಅಸಮಾಧಾನಕ್ಕೆ ಗುರಿಯಾಗಬೇಕಾಗಿರುವುದು ಇನ್ನೊಂದೆಡೆಯಾಗಿದೆ. ಬೈಂದೂರು ವ್ಯಾಪ್ತಿಯಲ್ಲಿ ಒಟ್ಟು 40 ಸಾವಿರ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಕೆಲವು ಮನೆಗಳಲ್ಲಿ ಹಳೆಯ ಮೀಟರ್‌ ಅಳವಡಿಸಿರುವುದು, ಬಿಲ್‌ ಸರಿಯಾಗಿ ಬಾರದಿರುವ ಉದ್ದೇಶದಿಂದ ಬಿಲ್‌ ವ್ಯವಸ್ಥೆ ಸುಧಾರಿಸಲಾಗಿದೆ. ಈ ಸಂದರ್ಭದಲ್ಲಿ ಕಳೆದ ಮೂರು ತಿಂಗಳುಗಳಿಂದ ಬಿಲ್‌ ಸಂಗ್ರಾಹಕರು ಆಯಾಯ ಮನೆಗಳಿಗೆ ಅಪ್‌ಡೆಟ್‌ ಆಗದ ಕಾರಣ ಗ್ರಾಹಕರಿಗೆ ಅಂದಾಜು ಬಿಲ್‌ ನೀಡಿದ್ದರು.

ಅದೇ ಪ್ರಕಾರ ಗ್ರಾಹಕರು ಕೂಡ ಬಿಲ್‌ ಮೊತ್ತವನ್ನು ಇಲಾಖೆಗೆ ಪಾವತಿಸಿದ್ದಾರೆ. ಈ ತಿಂಗಳಲ್ಲಿ ಮೆಸ್ಕಾಂ ಆನ್‌ಲೈನ್‌ ವ್ಯವಸ್ಥೆ ಮಾಡಿದೆ. ಜತೆಗೆ ಡಿಜಿಟಲ್‌ ಮೀಟರ್‌ ಅಪ್‌ಡೇಟ್‌ ಆಗದ ಕಾರಣ ರೀಡಿಂಗ್‌ ವ್ಯತ್ಯಯ ಉಂಟಾಗಿ ಒಂದು ತಿಂಗಳ ಬಿಲ್‌ಗೆ ಮೂರು ತಿಂಗಳ ಬಿಲ್‌ ಸೇರಿಸಿ ಬಂದಿದೆ. ಹೀಗಾಗಿ ಬಿಲ್‌ ಮೊತ್ತದಲ್ಲಿ ಭಾರೀ ಬದಲಾವಣೆ ಕಂಡು ಗ್ರಾಹಕರಿಗೆ ಗಲಿಬಿಲಿ ಉಂಟಾಗಿದೆ.

ಬೈಂದೂರು ಮೆಸ್ಕಾಂ ಕಚೇರಿಯಲ್ಲಿ ಮೀಟರ್‌ ಬಿಲ್ಲಿಂಗ್‌, ಮಾಹಿತಿಗಾಗಿ ಕಚೇರಿ ವ್ಯವಸ್ಥೆಯನ್ನು ಸುಧಾ ರಿಸಲಾಗಿದೆ. ಗ್ರಾಹಕರಿಗೆ ಸಮಾಧಾನದಿಂದ ಮನದಟ್ಟು ಮಾಡುವ ಮೂಲಕ ಸಮಸ್ಯೆ ಸರಿಪಡಿಸಲಾಗುತ್ತಿದೆ. ಮಾತ್ರವಲ್ಲದೆ ಮೀಟರ್‌ ಸಮಸ್ಯೆ ಇರುವವರಿಗೆ ಅರ್ಜಿ ಪಡೆದು ಸರಿಪಡಿಸಿಕೊಡಲಾಗುತ್ತಿದೆ.

ಆತಂಕ ಬೇಡ
ಈ ತಿಂಗಳಲ್ಲಿ ಬಿಲ್‌ ವ್ಯತ್ಯಯದ ಹಲವು ದೂರುಗಳು ಗ್ರಾಹಕರಿಂದ ಬಂದಿದೆ. ಡಿಜಿಟಲ್‌ ಮೀಟರ್‌ ಅಳವಡಿಕೆ ಹಾಗೂ ಆನ್‌ಲೈನ್‌ ವ್ಯವಸ್ಥೆ ಏಕಕಾಲದಲ್ಲಿ ಜಾರಿಯಾದ ಕಾರಣ ಸ್ವಲ್ಪ ಮಟ್ಟಿನ ಗೊಂದಲ ವಾಗಿದೆ. ಆದರೆ ಗ್ರಾಹಕರು ಆತಂಕಪಡುವ ಆವಶ್ಯಕತೆಯಿಲ್ಲ. ಬಳಕೆ ಮಾಡಿದ ಯುನಿಟ್‌ಗಳಿಗೆ ಮಾತ್ರ ಹಣ ಪಾವತಿಯಾಗುತ್ತದೆ. ಹೆಚ್ಚಿಗೆ ಹಣ ಪಾವತಿಸಿದರೆ ಅವರ ಖಾತೆಯಲ್ಲಿರುತ್ತದೆ.ಈಗಾಗಲೇ ಬಹುತೇಕ ಸಮಸ್ಯೆಗಳು ಇತ್ಯರ್ಥವಾಗಿವೆ.
-ಎಂ. ಭಾಸ್ಕರ್‌, ಸಹಾಯಕ ಲೆಕ್ಕಾಧಿಕಾರಿ, ಬೈಂದೂರು ಮೆಸ್ಕಾಂ

Advertisement

ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next