Advertisement

ಪ್ರವಾಸೋದ್ಯಮ ತಾಣವಾಗುತ್ತಿದೆ ಬೈಂದೂರು

11:02 PM Jan 19, 2020 | Sriram |

ಪ್ರವಾಸೋದ್ಯಮಕ್ಕೆ ವ್ಯಾಪಕ ಅವಕಾಶವಿರುವ ಬೈಂದೂರು ತಾಲೂಕಿನಲ್ಲಿ ವಿವಿಧ ಸ್ಥಳಗಳಲ್ಲಿ ಮೂಲಸೌಕರ್ಯ ವೃದ್ಧಿ, ಪ್ರವಾಸಿಗರಿಗೆ ಸಂಪೂರ್ಣ ಮಾಹಿತಿ ನೀಡುವ ಕೆಲಸಗಳು ಅಗತ್ಯ ಆಗಬೇಕು.

Advertisement

ಬೈಂದೂರು: ಅತಿ ಸುಂದರ ಕಡಲತಡಿಯನ್ನು ಹೊಂದಿರುವ ಬೈಂದೂರು ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ಹಲವು ತಾಣಗಳಿದ್ದು, ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುವುದನ್ನು ಎದುರು ನೋಡುತ್ತಿವೆ.

ಒಂದು ಬದಿಯಲ್ಲಿ ಪಶ್ಚಿಮ ಘಟ್ಟಗಳ ಸಾಲು, ಇನ್ನೊಂದು ಬದಿ ಕಡಲ ಕಿನಾರೆ ಬೈಂದೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕಾರಣವಾಗಿದೆ. ಪ್ರವಾಸಿಗರ ಭೇಟಿಯನ್ನು ಉತ್ತೇಜಿಸಲು ಹಲವು ಮೂಲಸೌಕರ್ಯ ಯೋಜನೆಗಳು, ಪ್ರವಾಸಿಗರನ್ನು ಸೆಳೆಯುವ ಕಾರ್ಯಕ್ರಮಗಳು ಜಾರಿಯಾಗಬೇಕಿವೆ.

ಸೋಮೇಶ್ವರ ಬೀಚ್‌ಗೆ 5 ಕೋ. ರೂ.
ಬೈಂದೂರು ತಾಲೂಕಿನಲ್ಲಿ ಧಾರ್ಮಿಕ ಕೇಂದ್ರಗಳು, ಬೀಚ್‌, ಪರಿಸರ ವೀಕ್ಷಣೆ, ಚಾರಣ ಎಲ್ಲದಕ್ಕೂ ಅವಕಾಶವಿದ್ದು ಹಲವು ಬೇಡಿಕೆಗಳನ್ನು ಹೊಂದಿದೆ. ಪಡುವರಿ ಗ್ರಾ.ಪಂ. ವ್ಯಾಪ್ತಿಯ ಸೋಮೇಶ್ವರ ಕಡಲ ಕಿನಾರೆ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಐದು ಕೋಟಿ ರೂ. ಮಂಜೂರಾಗಿದೆ. ಪಾರ್ಕಿಂಗ್‌, ಮಡಿಕಲ್‌ ಸಂಪರ್ಕ ಸೇತುವೆ, ರೋಪ್‌ ವೇ, ಪ್ರವಾಸಿಗರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಶೌಚಾಲಯ, ಬೋಟಿಂಗ್‌ ಅಗತ್ಯ ವ್ಯವಸ್ಥೆ, ವಾಕ್‌ ವೇ, ಪಾರ್ಕಿಂಗ್‌ ಸೌಲಭ್ಯ ಇರಲಿದೆ. ರಸ್ತೆ ಸುಧಾರಣೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಟೆಂಟ್‌ ಹೌಸ್‌, ಸ್ವಾಗತ ಗೋಪುರ ನಿರ್ಮಾಣ ಕೂಡ ಆಗಲಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ.

ಆಗಬೇಕಾದ್ದೇನು?
ಸೋಮೇಶ್ವರಕ್ಕೆ ನಿತ್ಯ ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ ರಸ್ತೆ ಕಿರಿದಾಗಿದೆ. ದೊಂಬೆ ರಸ್ತೆಯ ಮೂಲಕ ಬರುವ ವಾಹನಗಳಿಗೆ ಸೋಮೇಶ್ವರ ಕ್ರಾಸ್‌ನಲ್ಲಿ ತಿರುವು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಅರಣ್ಯ ಇಲಾಖೆ ವ್ಯಾಪ್ತಿಯ ಈ ಜಾಗವನ್ನು ಸುಗಮ ವಾಹನ ಸಂಚಾರಕ್ಕಾಗಿ ಅನುವುಗೊಳಿಸಬೇಕಾಗಿದೆ. ಕಳೆದ ಬಾರಿ ಶೌಚಾಲಯ, ಸ್ನಾನ ಗೃಹ ನಿರ್ಮಾಣವಾಗಿದ್ದು ನಿರ್ವಹಣೆಯ ಕೊರತೆ ಇದೆ. ಪಾರ್ಕಿಂಗ್‌ ವ್ಯವಸ್ಥೆ ಸುಧಾರಿಸಬೇಕಾಗಿದೆ. ಹೊಟೇಲ್‌ ಸೇರಿದಂತೆ ಮೂಲ ಸೌಕರ್ಯ ಹೆಚ್ಚಬೇಕಾಗಿದೆ. ಇದರೊಂದಿಗೆ ಇತರ ಪ್ರವಾಸಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ, ಮಾಹಿತಿ ಕೇಂದ್ರ, ಸ್ಥಳೀಯ ಆಹಾರ-ವಿಹಾರಗಳ ಪರಿಚಯವನ್ನೂ ಮಾಡಿಸಬೇಕಿದೆ.

Advertisement

ಪರಿಸರ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಬೈಂದೂರಿನಲ್ಲಿ ದೊಡ್ಡ ಕೈಗಾರಿಕೆಗಳ ಸ್ಥಾಪನೆ ಸಾಧ್ಯವಿಲ್ಲ. ಆದರೆ ಇಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವನ್ನು ತೆರೆದಿಟ್ಟಿದೆ. ಇದರಿಂದ ಸ್ಥಳೀಯರು ಉದ್ಯಮವನ್ನೂ ನಡೆಸಬಹುದಾಗಿದ್ದು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ಸಿಗಲಿದೆ.

ತ್ರಾಸಿ-ಮರವಂತೆ ಅಭಿವೃದ್ಧಿ
ತ್ರಾಸಿ ಮರವಂತೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಒಳಪಡುವ 13 ಎಕರೆ ಪ್ರದೇಶವಿದ್ದು ಸೂಕ್ತ ನೀಲನಕ್ಷೆ ಹಾಕಿಕೊಂಡರೆ ಅತ್ಯುತ್ತಮ ತಾಣವನ್ನಾಗಿ ರೂಪಿಸಬಹುದಾಗಿದೆ. ಪ್ರವಾಸಿ ಮಾಹಿತಿ ಕೇಂದ್ರ, ಗಿಡಗಳನ್ನು ನೆಡುವುದು, ಪಾರ್ಕಿಂಗ್‌, ಶೆಲ್ಟರ್‌ ನಿರ್ಮಾಣ, ಇಂಟರ್‌ಲಾಕ್‌ ಅಳವಡಿಕೆ, ವಾಚ್‌ ಟವರ್‌, ನದಿಯಲ್ಲಿ ಬೋಟ್‌ ಹೌಸ್‌, ಪ್ರವಾಸಿ ಬೋಟ್‌ ಸೇರಿದಂತೆ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಸ್ವದೇಶ್‌ ದರ್ಶನ್‌ ಯೋಜನೆ ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗಿದೆ. ರೆಸಾರ್ಟ್‌, ಹೋಮ್‌ಸ್ಟೇ ನಿರ್ಮಿಸುವವರಿಗೆ ಉತ್ತೇಜನವನ್ನೂ ನೀಡಲಾಗುತ್ತದೆ. ಬೈಂದೂರಿನಲ್ಲಿ 200 ಟ್ಯಾಕ್ಸಿಗಳಿದ್ದು ಪ್ರವಾಸೋದ್ಯಮ ತರಬೇತಿ ನೀಡಲಾಗುತ್ತಿದೆ.

ಪ್ರವಾಸೋದ್ಯಮ
ಪ್ರವಾಸಿತಾಣಗಳಲ್ಲಿ ಸೌಕರ್ಯಗಳೊಂದಿಗೆ ಸ್ವತ್ಛತೆಯೂ ಗರಿಷ್ಠಮಟ್ಟದಲ್ಲಿದ್ದಾಗಲೇ ಹೆಚ್ಚು ಸಂಖ್ಯೆಯ ಪ್ರವಾಸಿಗರನ್ನು ಸೆಳೆಯಲು ಸಾಧ್ಯ.

ಪ್ರವಾಸಿಗರನ್ನು ಸೆಳೆಯಲು ಯತ್ನ
ಸೋಮೇಶ್ವರ ಪ್ರವಾಸೋದ್ಯಮ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರಾಗಿದೆ. ಕೆ.ಆರ್‌.ಡಿ.ಎಲ್‌.ರವರಿಗೆ ಅಂದಾಜು ವೆಚ್ಚದ ಬಗ್ಗೆ ರೂಪುರೇಷೆ ತಯಾರಿಸಲೂ ತಿಳಿಸಲಾಗಿದೆ. ನಾಲ್ಕೈದು ದಿನದಲ್ಲಿ ಸಂಪೂರ್ಣ ಯೋಜನೆ ಅಂತಿಮಗೊಳಿಸಲಾಗುತ್ತದೆ. ಟೆಂಟ್‌ ಹೌಸ್‌, ಬೋಟಿಂಗ್‌ ಸೇರಿದಂತೆ ಪ್ರವಾಸಿಗರನ್ನು ಸೆಳೆಯುವ ಅಂಶಗಳು ಇರಲಿವೆ.
-ಚಂದ್ರಶೇಖರ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಉಡುಪಿ.

ವ್ಯವಸ್ಥಿತ ಯೋಜನೆ
ಸೋಮೇಶ್ವರ ಜಾಗತಿಕಮಟ್ಟದಲ್ಲಿ ಗುರುತಿಸುವಂತಹ ಪ್ರವಾಸಿ ಸ್ಥಳ. ಇದರ ಅಭಿವೃದ್ಧಿಗೆ ಕಳೆದ ಹಲವು ಸಮಯದಿಂದ ಪ್ರಯತ್ನಿಸಲಾಗುತ್ತಿದ್ದು 5 ಕೋಟಿ ರೂ. ಅನುದಾನದಲ್ಲಿ ಪ್ರಥಮ ಹಂತದಲ್ಲಿ ವ್ಯವಸ್ಥಿತವಾಗಿ ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ.
-ಸದಾಶಿವ ಡಿ., ಉಪಾಧ್ಯಕ್ಷರು. ಗ್ರಾ.ಪಂ. ಪಡುವರಿ

ಪ್ರಮುಖ ಪ್ರವಾಸಿ ಸ್ಥಳಗಳು
ಸೋಮೇಶ್ವರ ಕಡಲ ತೀರ
ಆನೆಝರಿ
ಒತ್ತಿನೆಣೆ ಕ್ಷಿತಿಜ ನೇಸರಧಾಮ
ಜೋಗೂರು ಜಂಗ್ಲಿಫೀರ್‌ ಪಿಕ್‌ನಿಕ್‌
ಕೊಸಳ್ಳಿ ಜಲಪಾತ
ಕೊಲ್ಲೂರು ದೇಗುಲ
ಮರವಂತೆ
ಕಳುಹಿತ್ಲು ಸಮುದ್ರ ಕಿನಾರೆ
ಬೈಂದೂರು ಚರ್ಚ್‌ಗುಡ್ಡ
ಕೊಡಚಾದ್ರಿ

ಕೊಲ್ಲೂರು ಯಾತ್ರಾರ್ಥಿಗಳಿಗೆ ಸೌಕರ್ಯ
ಕೊಲ್ಲೂರಿಗೆ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ದೇಗುಲ, ಶಂಕರಪೀಠ, ಕೊಡಚಾದ್ರಿಗಳು ಭಕ್ತರು, ಚಾರಣಿಗರನ್ನು ಕೈಬೀಸಿ ಕರೆಯುವ ಸ್ಥಳ. ನಿತ್ಯ ಕೇರಳ, ತಮಿಳನಾಡು ಸೇರಿದಂತೆ ಹತ್ತು ಸಾವಿರಕ್ಕೂ ಅಧಿಕ ಪ್ರವಾಸಿಗರು ಕೊಲ್ಲೂರಿಗೆ ಆಗಮಿಸುತ್ತಾರೆ. ಕೊಲ್ಲೂರಿಗೆ ತೆರಳುವವರು ಬೈಂದೂರುವರೆಗೆ ರೈಲುಗಳಲ್ಲಿ ಬಂದು ಬಳಿಕ ವಾಹನಗಳಲ್ಲಿ ಹೋಗುತ್ತಾರೆ. ಆದ್ದರಿಂದ ಬೈಂದೂರು ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಬೇಕು. ಕೊಲ್ಲೂರು ಅಭಯಾರಣ್ಯ ವ್ಯಾಪ್ತಿಯಲ್ಲಿರುವುದರಿಂದ ವಸತಿ ಸೌಕರ್ಯವೂ ಸೀಮಿತ. ಆದ್ದರಿಂದ ಬೈಂದೂರಿನಲ್ಲೇ ಹೆಚ್ಚಿನ ವ್ಯವಸ್ಥೆಗಳು ಆಗಬೇಕು. ಕೊಲ್ಲೂರು-ಬೈಂದೂರು ರಸ್ತೆ ಮಾದರಿಯಾಗಿ ರೂಪುಗೊಳ್ಳಬೇಕಿದೆ. ಸಾರಿಗೆ ವ್ಯವಸ್ಥೆ, ಮಾಹಿತಿ ಕೇಂದ್ರಗಳು, ಯಾತ್ರಿಗಳ ಸೌಕರ್ಯ ಹೆಚ್ಚಾಗಬೇಕಿದೆ.

– ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next