Advertisement

ಬೈಂದೂರು ಉಪ ನೋಂದಣಾಧಿಕಾರಿ ಕಚೇರಿ: ಹತ್ತು ದಿನಗಳಿಂದ ನೋಂದಣಿ ಪ್ರಕ್ರಿಯೆ ಸ್ಥಗಿತ

10:30 PM Nov 05, 2019 | mahesh |

ಬೈಂದೂರು: ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ ಉಪ ನೋಂದಣಾಧಿಕಾರಿಗಳ ಕಚೆೇರಿ ಯಲ್ಲಿ ಕಳೆದ 10 ದಿನಗಳಿಂದ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಒಂದೆರಡು ದಿನಗಳಲ್ಲಿ ಸರಿಪಡಿಸ ಲಾಗುತ್ತದೆ ಎಂಬ ನಂಬಿಕೆಯಿಂದ ನೋಂದಣಿಗೆ ಬಂದ ಜನರು ನಿರಾಶರಾಗುವಂತಾಗಿದೆ. ಮಾತ್ರವಲ್ಲದೆ 21 ಗ್ರಾಮಗಳ ಭೂ ವ್ಯವಹಾರ ಸ್ಥಗಿತಗೊಂಡಿದೆ.

Advertisement

ಕಾರಣಗಳೇನು?
ಬೈಂದೂರು ತಾಲೂಕು ವ್ಯಾಪ್ತಿಯ ನೋಂದಣಿ ಮತ್ತು ವಿವಾಹ ನೋಂದಣಿಗೆ ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿ ಯನ್ನು ಅವಲಂಬಿಸ ಬೇಕಿದೆ. ರಥಬೀದಿ ಜಂಕ್ಷನ್‌ನಲ್ಲಿರುವ ಈ ಕಟ್ಟಡ ಅತ್ಯಂತ ಹಳೆಯದಾಗಿರುವ ಜತೆಗೆ ಸ್ಥಳಾವಕಾಶದ ಕೊರತೆ ಕೂಡ ಎದ್ದು ಕಾಣುತ್ತಿದೆ. ಪ್ರತಿದಿನ ನೋಂದಾವಣೆಯಾಗಿರುವ ದಾಖಲೆಗಳು ಸಿ.ಡಿ.ಯಲ್ಲಿ ದಾಖಲಾಗಬೇಕಾಗುತ್ತದೆ. ಕಳೆದ 10 ದಿನಗಳ ಹಿಂದಿನ ಸರ್ವರ್‌ ಸಮಸ್ಯೆಯಿಂದ ಒಂದು ಭೂ ದಾಖಲೆ ಸಿ.ಡಿ.ಯಲ್ಲಿ ದಾಖಲಾಗಿರುವುದರಿಂದ ನೋಂದಾವಣಿ ಪ್ರಕ್ರಿಯೆ ಸಾಫ್ಟ್ವೇರ್‌ ಸ್ಥಗಿತಗೊಂಡಿದೆ. ಹೀಗಾಗಿ ಯಾವುದೇ ನೋಂದಣಿ ಪ್ರಕ್ರಿಯೆ ನಡೆಯುತ್ತಿಲ್ಲ. ಕೇವಲ ಬೈಂದೂರು ಉಪ ನೋಂದಣಾಧಿಕಾರಿಗಳ ಕಚೆೇರಿಯಲ್ಲಿ ಮಾತ್ರ ಈ ಸಮಸ್ಯೆಯಿದೆ. ಇದರ ನಡುವೆ ರಾಜ್ಯದಲ್ಲಿ ನೋಂದಾವಣಿ ಇಲಾಖೆಯಲ್ಲಿ ನಡೆದ ಬಹುಕೋಟಿ ಹಗರಣ ಪರಿಣಾಮ ಕೂಡ ಅಲ್ಲಗಳೆಯುವಂತಿಲ್ಲ. ಈಗಾಗಲೇ ಬೈಂದೂರು ಸಮಸ್ಯೆ ಕುರಿತಂತೆ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ.ರಾಜ್ಯದ ನೋಂದಾವಣಿ ಪ್ರಕ್ರಿಯೆ ಸಾಫ್ಟ್ವೇರ್‌ಗಳನ್ನು ಪುಣೆಯಲ್ಲಿರುವ ಕಂಪೆನಿ ನಿರ್ವಹಿಸುತ್ತಿದೆ.ಸಾರ್ವಜನಿಕರಿಗೆ ಮಾತ್ರ ಸಮಸ್ಯೆಯಾಗಿ ಕಾಡುತ್ತಿದೆ.

ಪ್ರತಿ ತಿಂಗಳು 30 ಲಕ್ಷ ರೂ. ಆದಾಯ
ಬೈಂದೂರು ಉಪ ನೋಂದಣಿ ಕಚೇರಿಯಿಂದ ಸರಕಾರಕ್ಕೆ ಪ್ರತಿ ತಿಂಗಳು ಸರಾಸರಿ 30 ಲಕ್ಷ ರೂ.ಆದಾಯ ದೊರೆಯುತ್ತಿದೆ. ತಾಲೂಕು ಕೇಂದ್ರ ಮತ್ತು ಗ್ರಾಮೀಣ ಭಾಗವಾಗಿದ್ದರೂ ಭೂ ವ್ಯವಹಾರ ಮತ್ತು ಇತರ ನೋಂದಣಿ ಪ್ರಕ್ರಿಯೆಗಳು ಅಧಿಕವಾಗಿದೆ. ಹಳೆಯ ಕಟ್ಟಡವಾಗಿರುವ ಈ ಕಚೇರಿಯಲ್ಲಿ ಸೂಕ್ತ ಪಾರ್ಕಿಂಗ್‌ ಹಾಗೂ ಶೌಚಾಲಯ ವ್ಯವಸ್ಥೆಗಳಿಲ್ಲ. ಹೀಗಾಗಿ ಶೀಘ್ರ ಹೊಸ ಕಚೇರಿ ನಿರ್ಮಿಸಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಮಾತ್ರವಲ್ಲದೆ ನೋಂದಣಿ ಸ್ಥಗಿತಗೊಂಡಿರುವುದರಿಂದ ಜಾಗದ ವಹಿವಾಟು ಹಾಗೂ ಮದುವೆ ಮುಂತಾಮ ನೋಂದಾವಣಿ ಕೆಲಸ ಕಾರ್ಯಗಳಿಗೆ ತೊಡಕಾಗಿದೆ. ಇದಕ್ಕಾಗಿ ಬೈಂದೂರಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾದ ಬಳಿಕ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎನ್ನುವುದು ಇಲ್ಲಿನ ಅಧಿಕಾರಿ ಆನಂದ ಅವರ ಅಭಿಪ್ರಾಯವಾಗಿದೆ.

ತಾಂತ್ರಿಕ ಸಮಸ್ಯೆ
ಕಳೆದ ಹತ್ತು ದಿನಗಳಿಂದ ಬೈಂದೂರಿನಲ್ಲಿ ತಾಂತ್ರಿಕ ಕಾರಣದಿಂದ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈಗಾಗಲೇ ಇದರ ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ.ಶೀಘ್ರವಾಗಿ ಸರಿಪಡಿಸಲಾಗುತ್ತದೆ. ಕೇಂದ್ರೀಕೃತ ವ್ಯವಸ್ಥೆಯಾಗಿರುವುದರಿಂದ ಕೇಂದ್ರ ಕಚೇರಿಯಲ್ಲಿಯೇ ಸರಿಪಡಿಸಬೇಕಾಗಿದೆ. ಸರ್ವರ್‌ ಸಮಸ್ಯೆ ಹಾಗೂ ತಾಂತ್ರಿಕ ಮಾಹಿತಿ ಪಡೆದ ಐಟಿ ವಿಭಾಗ ಸಮಸ್ಯೆ ಸರಿಪಡಿಸುತ್ತದೆ.
– ರವೀಂದ್ರ ಪೂಜಾರಿ, ಜಿಲ್ಲಾ ನೋಂದಣಾಧಿಕಾರಿ

ಇಲಾಖೆ ಅಸಡ್ಡೆ
ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ ಈ ರೀತಿ ಹತ್ತು ದಿನಗಳವರೆಗೆ ನೋಂದಣಿ ಪ್ರಕ್ರಿಯೆ ತಟಸ್ಥಗೊಂಡಿದ್ದರೂ ಇಲಾಖೆ ಗಂಭೀರವಾಗಿ ಪರಿಗಣಿಸದಿರುವುದು ಆಶ್ಚರ್ಯ ತಂದಿದೆ.ಇದರಿಂದಾಗಿ ಮದುವೆ ಮುಂತಾದ ಅಗತ್ಯ ಉದ್ದೇಶಗಳಿಗೆ ಬ್ಯಾಂಕ್‌ ಸಾಲ ಸೇರಿದಂತೆ ಇತರ ಕಾರಣಗಳಿಗೆ ವಿಳಂಬವಾಗಿದೆ. ತಾಂತ್ರಿಕ ಅಂಶವನ್ನು ಶೀಘ್ರವಾಗಿ ಸರಿಪಡಿಸಬೇಕು ಹಾಗೂ ಬೈಂದೂರು ಉಪ ನೋಂದಾಣಾಧಿಕಾರಿ ಕಚೇರಿ ಇನ್ನಷ್ಟು ಉತ್ತಮ ಸೇವೆ ನೀಡುವ ವಾತಾವರಣ ನಿರ್ಮಾಣವಾಗಬೇಕಿದೆ.
– ಮಂಗೇಶ ಶ್ಯಾನುಭಾಗ್‌, ವಕೀಲರು

Advertisement

ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next