ಬೈಲಹೊಂಗಲ: ಸೊಗಲ ಸೋಮೇಶ್ವರನ ಕ್ಷೇತ್ರದಲ್ಲಿ ಸಂಕ್ರಮಣದ ಅಂಗವಾಗಿ ಬುಧವಾರ ಪ್ರಕೃತಿದತ್ತವಾದ ಎರಡು ಧುಮುಕುತ್ತಿರುವ ಜಲಪಾತದಲ್ಲಿ ಎಳ್ಳು, ಅರಿಶಿನ ಮೈಗೆ ಹಚ್ಚಿಕೊಂಡು ಸ್ನಾನ ಮಾಡಿದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಬಾಳೆಯ ದಿಂಡಿನ ತೆಪ್ಪವನ್ನು ಕಬ್ಬು, ತೆಂಗು, ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ವಾದ್ಯಮೇಳಗಳಿಂದ ಸೋಮೇಶ್ವರನ ದೇವಸ್ಥಾನದಲ್ಲಿದ್ದ ಬೆಳ್ಳಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ತೆಪ್ಪದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸಂಜೆ ಹೊಸೂರ ಗುರುಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಬೈಲಹೊಂಗಲ-ಹೊಸೂರ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ಗುರುಬಸವ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರ ಜಯಘೋಷಗಳ ಮಧ್ಯ ವಿಜೃಂಭಣೆಯಿಂದ ತೆಪ್ಪೋ ತ್ಸವ ನಡೆಯಿತು.
ಅಪಾರ ಜನಸ್ತೋಮ: ಗೋವಾ, ಮಹಾರಾಷ್ಟ್ರ, ಕೇರಳ, ಹೈದ್ರಾಬಾದ, ಕರ್ನಾಟಕದ ವಿವಿಧ ಭಾಗದಿಂದ ಬೆಳಗ್ಗೆಯಿಂದಲೇ ಬೈಕ್, ಚಕ್ಕಡಿ, ಟ್ರ್ಯಾಕ್ಟರ್, ಖಾಸಗಿ ವಾಹನಗಳ ಮುಖಾಂತರ ಸಾವಿರಾರು ಭಕ್ತರು ಆಗಮಿಸುವ ದೃಶ್ಯ ಸಾಮಾನ್ಯವಾಗಿತ್ತು. ಸೊಗಲಕ್ಷೇತ್ರದ ಆಗಮಿಸಿದ ಭಕ್ತರು ಪುಣ್ಯ ಸ್ನಾನ ಮಾಡಿ, ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ಸಿಹಿ ಅಡುಗೆ, ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಶೇಂಗಾ, ಗುರೆಳ್ಳ ಚಟ್ನಿ, ಬಾನ, ಮೊಸರನ್ನ, ಗಜರಿ ಚಟ್ನಿ, ಸಿಹಿ ಮಾದೇಲಿ, ವಿವಿಧ ಭಕ್ಷ ಭೋಜನ ಸವಿದು ಮಕರ ಸಂಕ್ರಮಣ ಸಂಭ್ರಮದಿಂದ ಆಚರಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್: ಸವದತ್ತಿ ಸಿಪಿಐ ಮಂಜುನಾಥ ನಡುವಿನಮನಿ, ಮುರಗೋಡ ಪಿಎಸ್‌ಐ ಪ್ರವೀಣ ಗಂಗೋಳಿ, ಐವರು ಎಎಸ್‌ಐ ಹಾಗೂ 40
ಪೊಲೀಸ್ ಸಿಬ್ಬಂದಿ, ಹೋಮಗಾರ್ಡ್ಸ್ ನೇತೃತ್ವದಲ್ಲಿ ತೆಪ್ಪೋತ್ಸವಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.