ಬೈಲಹೊಂಗಲ: ಸರ್ಕಾರ ಯರಗಟ್ಟಿ ತಾಲೂಕಾ ಕೇಂದ್ರವನ್ನು ಮಾಡುವಾಗ ನನ್ನನ್ನು ಸಂಪರ್ಕಿಸದೇ ನಿರ್ಧಾರ ತೆಗೆದುಕೊಂಡಿದೆ. ಮುರಗೋಡ ಹೋಬಳಿಯನ್ನು ತಾಲೂಕಾ ಕೇಂದ್ರವನ್ನಾಗಿ ಮಾಡಲು ನಿಮ್ಮ ಜೊತೆ ನಿರಂತರವಾಗಿ ಹೋರಾಟಕ್ಕೆ ಸಿದ್ಧ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಸಮೀಪದ ಮುರಗೋಡ ಪಟ್ಟಣದ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಬೈಲಹೊಂಗಲ ಉಪವಿಭಾಗಾ ಧಿಕಾರಿ, ಸವದತ್ತಿ ತಹಶೀಲ್ದಾರ ಮತ್ತು ಈ ಭಾಗದ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸವದತ್ತಿ ತಾಲೂಕಿನ ಯರಗಟ್ಟಿಯನ್ನು ತಾಲೂಕಾ ಕೇಂದ್ರವನ್ನಾಗಿ ಮಾಡಿರುವ ಸರ್ಕಾರದ ನಿರ್ಧಾರ ಖಂಡಿಸಿ, ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರಕ್ಕೆ ಮುರಗೋಡ ಹೋಬಳಿಯ ಎಲ್ಲ ಗ್ರಾಮಗಳ ಸೇರ್ಪಡೆ ಮಾಡಲು ಆಗ್ರಹಿಸಿ ಶಾಸಕರು, ಜನಪ್ರತಿನಿ ಧಿಗಳು ಮತ್ತು ಮುಖಂಡರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಮುರಗೋಡ ಸೂಕ್ತ ಸ್ಥಳವಾಗಿದ್ದು ನಿಮ್ಮಲ್ಲರ ಅಭಿಪ್ರಾಯದಂತೆ ತಾಲೂಕು ಘೋಷಣೆ ಮರು ಪರಿಶಿಲನೆಗೆ ಆಗ್ರಹಿಸುವುದಾಗಿ ಹೇಳಿದರು.
ಎಪಿಎಂಸಿ ಸದಸ್ಯ ಎಫ್.ಎಸ್. ಸಿದ್ದನಗೌಡರ ಮಾತನಾಡಿ, ಮುರಗೋಡ ಪಟ್ಟಣವು ಐತಿಹಾಸಿಕ ಪರಂಪರೆ ಹೊಂದಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ಸುತ್ತಲಿನ 52 ಹಳ್ಳಿಗಳಿಗೆ ಕೇಂದ್ರವಾಗಿತ್ತು. ಇಂದೂ ಕೂಡಾ ತಾಲೂಕಾ ಸ್ಥಾನವಾಗಲು ಎಲ್ಲ ಅರ್ಹತೆ ಹೊಂದಿದ್ದರೂ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಹೊಸದಾಗಿ ಘೋಷಿಸಿದ 12 ತಾಲೂಕುಗಳಲ್ಲಿ ಮುರಗೋಡ ಬಿಟ್ಟು ಹೋಗಿರುವುದನ್ನು ಬಿಜೆಪಿ ಸರ್ಕಾರ ಮರು ಪರಿಶೀಲಿಸಿ ತಾಲೂಕಾ ಕೇಂದ್ರವಾಗಿ ಮಾಡಬೇಕೆಂದು ಆಗ್ರಹಿಸಿದರು.
ಈ ಭಾಗದ ಲಕ್ಷಾಂತರ ಸಾರ್ವಜನಿಕರ ಆಶಯದಂತೆ ಮುರಗೋಡ ತಾಲೂಕಿಗಾಗಿ 45 ವರ್ಷದಿಂದ ನಿರಂತರ ಹೋರಾಟ ಮಾಡಿದ್ದು, ರಾಜ್ಯ ಸರ್ಕಾರದ ಗಮನಕ್ಕೆ ಬಾರದೇ ಇರುವುದು ವಿಪರ್ಯಾಸದ ಸಂಗತಿ. ಮುರಗೋಡ ತಾಲೂಕಿಗೆ ಎಲ್ಲ ಅರ್ಹತೆ ಹೊಂದಿದ್ದರೂ ಸರ್ಕಾರ ತರಾತುರಿಯಲ್ಲಿ ಕೈಗೊಂಡ ಅವೈಜ್ಞಾನಿಕ ನಿರ್ಧಾರವನ್ನು ಉಗ್ರವಾಗಿ ಖಂಡಿಸುತ್ತೇವೆ. ಈ ಹೊಬಳಿಯ 31 ಗ್ರಾಮಗಳಲ್ಲಿ 28 ಗ್ರಾಮಗಳನ್ನು ಹತ್ತಿರದ ಬೈಲಹೊಂಗಲಕ್ಕೆ ಸೇರ್ಪಡೆ ಮಾಡಬೇಕು. ಉಳಿದ ಸುತಗಟ್ಟಿ, ಏಣಗಿ ಮತ್ತು ಹಿಟ್ಟಣಗಿ ಗ್ರಾಮಗಳನ್ನು ಸವದತ್ತಿ ಹೊಬಳಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಪಂ ಸದಸ್ಯ ಬಸವರಾಜ ಬಂಡಿವಡ್ಡರ, ಹೊಸೂರಿನ ಎಸ್.ಕೆ. ಮಳ್ಳಿಕೇರಿ, ಪ್ರದೀಪ ಪಟ್ಟಣಶೆಟ್ಟಿ, ಮಹಾಂತೇಶ ನಾಯ್ಕರ, ಶಂಕರಗೌಡ ಪಾಟೀಲ, ತಾಪಂ ಸದಸ್ಯರಾದ ಜಗದೀಶ ಬೂದಿಹಾಳ, ಸುರೇಶ ಮ್ಯಾಕಲ, ಶ್ರೀಕಾಂತ ಸುಂಕದ, ಮಹಾಂತೇಶ ಬಾಳಿಕಾಯಿ ಮಾತನಾಡಿ, ಸರ್ಕಾರ ರಚಿಸಿದ್ದ ಗದ್ದಿಗೌಡರ, ಹುಂಡೇಕಾರ, ವಾಸುದೇವ ಸಮಿತಿಗಳಲ್ಲಿ ಮುರಗೋಡ ತಾಲೂಕಿಗೆ ಅರ್ಹವೆಂದು ವರದಿ ನೀಡಿದ್ದು, ಬೌಗೋಳಿಕವಾಗಿ ಜನಸಂಖ್ಯೆ ಸಹ ಹೊಂದಿದೆ. ಈ ಬಗ್ಗೆ ಶಾಸಕರು ವಿಧಾನಸೌದಲ್ಲಿ ಚರ್ಚಿಸಬೇಕು ಎಂದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮಾತನಾಡಿ, ಜನಸಾಮಾನ್ಯರ ಅನುಕೂಲಕ್ಕಾಗಿ ಮಾಡಿಕೊಂಡ ಜನಪ್ರತಿನಿಧಿಗಳ ಸಂಪೂರ್ಣ ವರದಿಯನ್ನು ಹಾಗೂ ಮುರಗೋಡ ಹೋಬಳಿ ವ್ಯಾಪ್ತಿಯ ಗ್ರಾಪಂ ಹಾಗೂ ಸಂಘ ಸಂಸ್ಥೆಗಳು ನೀಡಿರುವ ಲಿಖೀತ ನಿರ್ಣಯಗಳನ್ನು ಮತ್ತು ಮನವಿಯನ್ನು ಸರ್ಕಾರಕ್ಕೆ ಮುಟ್ಟಿಸಲಾಗುವುದು ಎಂದರು.
ಸಾನ್ನಿಧ್ಯವನ್ನು ಮಹಾಂತ ದುರದುಂಡೇಶ್ವರ ಮಠದ ಪೀಠಾ ಧಿಕಾರಿ ನೀಲಕಂಠ ಸ್ವಾಮೀಜಿ ವಹಿಸಿದ್ದರು. ಮುರಗೋಡ ತಾಲೂಕಾ ಹೋರಾಟ ಸಮಿತಿ ಅಧ್ಯಕ್ಷೆ ಗೀತಾತಾಯಿ ದೇಸಾಯಿ, ತಾಲೂಕಾ ಹೋರಾಟ ಸಮಿತಿಯ ಮುಖಂಡ ಶಂಕರಯ್ಯ ಮಲ್ಲಯ್ಯನವರಮಠ, ಗ್ರಾಪಂ ಅಧ್ಯಕ್ಷೆ ಸಂಧ್ಯಾ ತಿವಾರಿ, ಕಮಲವ್ವ ತೊರಗಲ್ಲ, ಉಪಸ್ಥಿತರಿದ್ದರು. ಈ ವೇಳೆ ವಿವಿಧ ಗ್ರಾಮದ ಗ್ರಾ.ಪಂ ಅಧ್ಯಕ್ಷರು ಸದಸ್ಯರು ತಮ್ಮ ಬೇಡಿಕೆ ಬಗ್ಗೆ ಮನವಿ ನೀಡಿದರು.