Advertisement

ಬೈಲಾ ತಿದ್ದುಪಡಿ ತೀರ್ಪು: 27ಕ್ಕೆ ತೀರ್ಮಾನ

06:00 AM Aug 23, 2018 | Team Udayavani |

ಬೆಂಗಳೂರು:ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಬೈಲಾಗೆ ತಿದ್ದುಪಡಿ ಮಾಡಿರುವ ವಿಚಾರವಾಗಿ ಸಹಕಾರ ಸಂಘಗಳ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳು ನೀಡಿರುವ ತೀರ್ಪಿನ ಸಂಬಂಧ ಮೇಲ್ಮನವಿ ಸಲ್ಲಿಸುವ ಸಂಬಂಧ ಆ.27 ರಂದು ತೀರ್ಮಾನಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ಹೇಳಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಪಿನ ಸಂಬಂಧ ಮೇಲ್ಮನವಿ ಸಲ್ಲಿಸುವ ಕುರಿತಂತೆ ಆ.27ರಂದು ನಡೆಯುವ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಹಿರಿಯ ಕಾನೂನು ತಜ್ಞರ ಸಲಹೆ ಪಡೆದು ಬೈಲಾಗೆ ತಿದ್ದುಪಡಿ ತರಲಾಗಿತ್ತು. ಉಡುಪಿಯ ಕೋಟಾದಲ್ಲಿ ನಡೆದ ಕಸಾಪದ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ತಿದ್ದುಪಡಿ  ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಈ ಬಗ್ಗೆ ವಿಚಾರಣೆ ನಡೆಸಿರುವ ಸಹಕಾರ ಸಂಘಗಳ ಉಪನಿಬಂಧಕರು ಆ ಸಭೆಯಲ್ಲಿ ಮಾಡಲಾಗಿದ್ದ 14 ತಿದ್ದುಪಡಿಗಳಲ್ಲಿ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಮೀಸಲಾತಿ, ಅಧಿಕಾರವಧಿ 3ರಿಂದ 5ವಿಸ್ತರಣೆ ಸೇರಿದಂತೆ 4 ತಿದ್ದುಪಡಿ ತಿರಸ್ಕರಿಸಿ ಉಳಿದ ತಿದ್ದುಪಡಿಗೆ ಅನುಮೋದನೆ ನೀಡಿದ್ದಾರೆ. ಹೀಗಾಗಿ ಆದೇಶ ನಮ್ಮ ಪರಿವಾಗಿಯೇ ಇದೆ ಎಂದು ಸ್ಪಷ್ಟಪಡಿಸಿದರು.

ನಾನು ಅಧಿಕಾರಕ್ಕೆ ಅಂಟಿಕೊಂಡ ವ್ಯಕ್ತಿಯಲ್ಲ. ನನ್ನ 19 ತಿಂಗಳ ಆಡಳಿತಾವಧಿಯಲ್ಲಿ ಜನಮೆಚ್ಚುವ ಕೆಲಸ ಮಾಡಿದ್ದೇನೆ. ಹಳೆಗನ್ನಡ ಸಾಹಿತ್ಯ ಸಮ್ಮೇಳನ, ಹೊರನಾಡು ಕನ್ನಡ ಸಾಹಿತ್ಯ ಸಮ್ಮೇಳನ, ಪುಸ್ತಕಗಳ ಡಿಜಿಟಲೀಕರಣ, ಶತಮಾನೋತ್ಸವ ಭವನ ಸೇರಿದಂತೆ ಅನೇಕ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದೇನೆ. ಮುಂದೆಯೂ ಉತ್ತಮ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಕೊಡಗಿನ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ಕಸಾಪ ಸಿಬ್ಬಂದಿ ಒಂದುದಿನದ ವೇತನ ನೀಡಲು ಮುಂದಾಗಿದ್ದು ತಾವು ಕೂಡ 10ಸಾವಿರ ರೂ. ನೀಡುವುದಾಗಿ ಹೇಳಿದರು.

ಕಸಾಪ ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಚಂದ್ರಶೇಖರ ಕಂಬಾರ, ಗೋ.ರು. ಚನ್ನಬಸಪ್ಪ, ಡಾ. ಗುರುಲಿಂಗ ಕಾಪಸೆ, ಡಾ. ವೀಣಾ ಶಾಂತೇಶ್ವರ, ಪಂಚಾಕ್ಷರಿ ಹಿರೇಮಠ, ಡಾ.ಜಿ.ಎಸ್‌. ಆಮೂರ್‌, ಎಚ್‌.ಎಸ್‌. ವೆಂಕಟೇಶಮೂರ್ತಿ ಸೇರಿದಂತೆ ಹತ್ತು ಮಂದಿ ಸಾಹಿತಿಗಳ ಹೆಸರು ಬಂದಿವೆ. ಆದರೆ ಅಂತಿಮವಾಗಿ ಕಾರ್ಯಕಾರಿ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next