Advertisement

ಬೈಯಪ್ಪನಹಳ್ಳಿ -ವೈಟ್‌ಫೀಲ್ಡ್‌ಗೆ 25 ನಿಮಿಷ

11:29 AM Aug 18, 2017 | Team Udayavani |

ಬೆಂಗಳೂರು: ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಟ್ರಾಫಿಕ್‌ ಸಮಸ್ಯೆ ನಿವಾರಿಸಲು ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ನಡುವೆ ನೈರುತ್ಯ ರೈಲ್ವೆಯು “ಡೆಮು’ ರೈಲು ಸೇವೆ ಆರಂಭಿಸಿದೆ. 

Advertisement

ನಗರದ ಬೈಯಪ್ಪನಹಳ್ಳಿಯಲ್ಲಿ ಬೆಳಿಗ್ಗೆ 11ಕ್ಕೆ ಈ ರೈಲು ಸೇವೆಗೆ ಚಾಲನೆ ದೊರೆಯಲಿದೆ. ಈ ಮಾರ್ಗ ಸಬ್‌ಅರ್ಬನ್‌ ರೈಲು ವ್ಯವಸ್ಥೆಯ ಒಂದು ಭಾಗವಾಗಿದ್ದು, ನಿತ್ಯ ಮೂರು ರೈಲುಗಳು “ಪೀಕ್‌ ಅವರ್‌’ (ಸಂಚಾರದಟ್ಟಣೆ ಸಮಯ)ನಲ್ಲಿ ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. 

ಹೊಸ ಡೆಮು (ಡೀಸೆಲ್‌ ಎಲೆಕ್ಟ್ರಿಕಲ್‌ ಮಲ್ಟಿಪಲ್‌ ಯೂನಿಟ್‌) ರೈಲಿನಲ್ಲಿ ಎಂಟು ಬೋಗಿಗಳಿದ್ದು, ಏಕಕಾಲದಲ್ಲಿ 2,412 ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 804 ಆಸನ ವ್ಯವಸ್ಥೆ ಇದೆ. ಈ ಸೇವೆಯಿಂದ 12 ಕಿ.ಮೀ. ಅಂತರವನ್ನು ಪ್ರಯಾಣಿಕರು ಕೇವಲ 25 ನಿಮಿಷಗಳಲ್ಲಿ ಕ್ರಮಿಸಬಹುದು. 

10 ಸಾವಿರ ಜನರಿಗೆ ಅನುಕೂಲ
ಈ ರೈಲು ಸೇವೆಯಿಂದ ವೈಟ್‌ಫೀಲ್ಡ್‌, ಹೂಡಿ, ಬಂಗಾರಪೇಟೆ, ಮಾಲೂರು ಸೇರಿದಂತೆ ವಿವಿಧೆಡೆಯಿಂದ ನಗರಕ್ಕೆ ಆಗಮಿಸುವ ಹಾಗೂ ನಗರದಿಂದ ಹೊರಗೆ ಹೋಗುವವರಿಗೆ ಸಾಕಷ್ಟು ಅನುಕೂಲ ಆಗಲಿದೆ. ಸಮೀಕ್ಷೆ ಪ್ರಕಾರ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ಮಾರ್ಗದಲ್ಲಿ ನಿತ್ಯ ಹತ್ತು ಸಾವಿರಕ್ಕೂ ಅಧಿಕ ಜನ ಸಂಚರಿಸುತ್ತಾರೆ ಎಂದು ಪ್ರಜಾ ಸಂಸ್ಥೆಯ ಸಂಜೀವ್‌ ದ್ಯಾಮಣ್ಣವರ ತಿಳಿಸಿದ್ದಾರೆ.  

ಈಗಾಗಲೇ 3 ರೈಲು ಸೇವೆ ಲಭ್ಯ
ಈಗಾಗಲೇ ಈ ಮಾರ್ಗದಲ್ಲಿ ನಿತ್ಯ ಬೆಳಿಗ್ಗೆ 8.45, 8.35 ಹಾಗೂ 9 ಗಂಟೆಗೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ವೈಟ್‌ಫೀಲ್ಡ್‌, ಬಂಗಾರಪೇಟೆ, ಮಾರಿಕುಪ್ಪಂ ಮಾರ್ಗವಾಗಿ ಮೂರು ರೈಲುಗಳು ಸಂಚರಿಸುತ್ತಿವೆ. ಇದಕ್ಕೆ ಪೂರಕವಾಗಿ ಈಗ ನಿರ್ದಿಷ್ಟ ಮಾರ್ಗದಲ್ಲಿ ವಿಶೇಷ “ಡೆಮು’ ಸೇವೆ ಸೇರ್ಪಡೆಗೊಂಡಿದೆ.

Advertisement

ಇದರಿಂದ ಮಹದೇವಪುರ ಕಡೆಗೆ ಹೋಗುವವರು ಬೆಳ್ಳಂದೂರು ರಸ್ತೆ ನಿಲ್ದಾಣದಲ್ಲಿ, ಸಜಾìಪುರ ಕಡೆಗೆ ಹೋಗುವವರು ಕಾರ್ಮೆಲ್‌ರಾಮ್‌ ನಿಲ್ದಾಣದಲ್ಲಿ ಹಾಗೂ ಎಲೆಕ್ಟ್ರಾನಿಕ್‌ ಸಿಟಿ ಕಡೆಗೆ ಹೋಗುವವರು ಹೀಲಲಿಗೆ ನಿಲ್ದಾಣದಲ್ಲಿ ಇಳಿದುಕೊಳ್ಳಬಹುದು. ಈ ಮಾರ್ಗದಲ್ಲಿ “ನಮ್ಮ ಮೆಟ್ರೋ’ ಎರಡನೇ ಹಂತದಲ್ಲಿ ರೀಚ್‌-1ರ ವಿಸ್ತರಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಪರಿಣಾಮ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಆದ್ದರಿಂದ ಉದ್ದೇಶಿತ ಮಾರ್ಗದ ನಡುವೆ ಸಬ್‌ಅರ್ಬನ್‌ ರೈಲು ಸೇವೆ ಆರಂಭಿಸುವಂತೆ ಅಲ್ಲಿನ ಕೈಗಾರಿಕೆಗಳ ಮಾಲೀಕರು ಆಗ್ರಹಿಸಿದ್ದರು. ನಂತರ ಈ ಸಂಬಂಧ ಸಂಸದ ಪಿ.ಸಿ ಮೋಹನ್‌ ಕೂಡ ರೈಲ್ವೆ ಸಚಿವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಲೋಕಸಭಾ ಅಧಿವೇಶನದಲ್ಲೂ ರೈಲಿಗಾಗಿ ಒತ್ತಾಯಿಸಿದ್ದರು.

ನಿತ್ಯ ಸಂಚರಿಸಲಿರುವ ಹೊಸ ಡೆಮು ರೈಲು ವೇಳಾಪಟ್ಟಿ ಹೀಗಿದೆ. 
ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ ಕಡೆಗೆ 
* ಬೆಳಿಗ್ಗೆ 8.25ಕ್ಕೆ ಬೈಯಪ್ಪನಹಳ್ಳಿ
* 8.30ಕ್ಕೆ ಕೆ.ಆರ್‌. ಪುರ
* 8.36ಕ್ಕೆ ಹೂಡಿ
* 8.50ಕ್ಕೆ ವೈಟ್‌ಫೀಲ್ಡ್‌

ವೈಟ್‌ಫೀಲ್ಡ್‌ನಿಂದ ಬೈಯಪ್ಪನಹಳ್ಳಿ ಕಡೆಗೆ
* ಸಂಜೆ 6.15ಕ್ಕೆ ವೈಟ್‌ಫೀಲ್ಡ್‌
* 6.21ಕ್ಕೆ ಹೂಡಿ
* 6.29ಕ್ಕೆ ಕೆ.ಆರ್‌. ಪುರ
* 6.40ಕ್ಕೆ ಬೈಯಪ್ಪನಹಳ್ಳಿ

– ನೂತನ ಡೆಮು ರೈಲಿನ ಪ್ರಯಾಣ ದರ ಇನ್ನೂ ನಿಗದಿಯಾಗಿಲ್ಲ.

7.30ಗೆ ಒಂದು ರೈಲು ವ್ಯವಸ್ಥೆ ಮಾಡಿ 
ಸಂಜೆ 7ರ ನಂತರ ಈ ಮಾರ್ಗದಲ್ಲಿ ಯಾವುದೇ ರೈಲು ಸೇವೆ ಲಭ್ಯವಿಲ್ಲ. ಹಾಗಾಗಿ, 7ರಿಂದ 7.30 ನಡುವೆ ಒಂದು ಸಬ್‌ಅರ್ಬನ್‌ ರೈಲು ಸೇವೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ರೈಲ್ವೆ ಹೋರಾಟಗಾರರಿಂದ ಕೇಳಿಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next