Advertisement

ಧಾರ್ಮಿಕ ಕೈಂಕರ್ಯಗಳಿಂದ ಸ್ವಸ್ಥ ಸಮಾಜ ನಿರ್ಮಾಣ

04:13 PM Dec 02, 2018 | |

ಬ್ಯಾಡಗಿ: ಧಾರ್ಮಿಕ ಕೈಂಕರ್ಯಗಳನ್ನು ಕೈಗೊಳ್ಳುವುದರಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಅದರಲ್ಲೂ ರಾಜಕಾರಣದ ಸೋಂಕಿನಿಂದ ದೂರವಿದ್ದರೇ ಇನ್ನಷ್ಟು ಉತ್ತಮ. ಜಾತಿಗೊಂದು ಜಾತ್ರೆ ಬೇಡ, ಎಲ್ಲ ಸಮುದಾಯಗಳನ್ನು ಒಂದುಗೂಡಿಸುವ ಕೆಲಸ ಜಾತ್ರೆಗಳಿಂದಾಗಬೇಕಾಗಿದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಡಿ.4ರಿಂದ ಆರಂಭವಾಗಲಿರುವ ಪಟ್ಟಣದ ದಾನಮ್ಮದೇವಿ ಜಾತ್ರಾ ಮಹೋತ್ಸವ ಮುನ್ನ ಪ್ರವಚನ ಆರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪುರಾಣ ಪ್ರಸಿದ್ಧವಾದ ಶರಣರು, ದಾರ್ಶನಿಕರು ಸೇರಿದಂತೆ ದೇವರ ಹೆಸರಿನಲ್ಲಿ ಜಾತ್ರೆಗಳನ್ನು ನಡೆಸುವುದು ಸಾಮಾನ್ಯ. ಈ ಹಿಂದೆ ಅವುಗಳು ಎಲ್ಲ ಧರ್ಮ ಸಮುದಾಯದವರನ್ನು ಒಂದುಗೂಡಿಸುವ ಕೆಲಸ ಮಾಡುತ್ತಾ ಬಂದಿವೆಯಾದರೂ ಇತ್ತೀಚಿನ ದಿನಗಳಲ್ಲಿ ಮನುಷ್ಯನಲ್ಲಿರುವ ಸ್ವಾರ್ಥ ಗುಣದಿಂದ ಒಂದೇ ಸಮುದಾಯಕ್ಕೆ ಸೀಮಿತಗೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.

ಶರಣರು ದಾರ್ಶನಿಕರು ಹಾಗೂ ದೇವರ ಹೆಸರಿನಲ್ಲಿ ಜಾತ್ರೆಗಳು ಮೊದಲಿನಿಂದಲೂ ನಡೆಯುತ್ತಾ ಬಂದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಜಾತ್ರೆಗಳು ರಾಜಕಾರಣ ಒಳಸುಳಿಗೆ ಸಿಲುಕಿ ನಲಗುತ್ತಿವೆ. ಯಾವುದೇ ಕಾರಣಕ್ಕೂ ಪ್ರಸಿದ್ಧ ಜಾತ್ರೆಗಳ ಹೆಸರಿಗೆ ಕಳಂಕ ತರುವಂತಹ ಕೆಲಸ ಯಾರಿಂದಲೂ ಆಗದಿರಲಿ ಎಂದು ಆಶಿಸಿದ ಶ್ರೀಗಳು, ಭಕ್ತರು ಹಾಗೂ ಸಾರ್ವಜನಿಕರು ಎಲ್ಲರೂ ಸೇರಿ ಜಾತ್ರೆಯ ವೈಭವವನ್ನು ಇನ್ನಷ್ಟು ಹೆಚ್ಚಿಸುವಂತೆ ಕರೆ ನೀಡಿದರು.

ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಶರಣೆ ದಾನಮ್ಮದೇವಿ ಬದುಕು ಬಹಳಷ್ಟು ಆದರ್ಶವಾಗಿದ್ದು, ನಮಗೆಲ್ಲರಿಗೂ ಅನುಕರಣೀಯ. ಸಾರ್ವಜನಿಕರಲ್ಲಿ ಭಕ್ತಿ ಪರಂಪರೆ ಹೆಚ್ಚಿಸಿದ ಕೀರ್ತಿ ಶರಣೆ ದಾನಮ್ಮಗೆ ಸಲ್ಲುತ್ತದೆ. ದೈವಿ ಸ್ವರೂಪಳಾದ ದಾನಮ್ಮದೇವಿಯು ತನ್ನ ಜೀವನದುದ್ದಕ್ಕೂ ಇನ್ನೊಬ್ಬರ ಏಳ್ಗೆಗಾಗಿ ಶ್ರಮಿಸಿದ ಆಕೆ ದೇವರ ಸಮಾನವಾಗಿದ್ದಾಳೆ. ಕಳೆದ ಏಳೆಂಟು ವರ್ಷಗಳಲ್ಲಿ ನಿರ್ಮಿತವಾದ ದೇವಸ್ಥಾನಕ್ಕೆ ಜಾತ್ರೆ ಪ್ರಾರಂಭಿಸಿರುವ ಕಾರ್ಯ ಶ್ಲಾಘನೀಯ ಎಂದರು.

ಮುಖಂಡ ಅಡಿವೆಪ್ಪಜ್ಜ ಎಲಿ ಮಾತನಾಡಿ, ಜನರ ಸಹಕಾರವಿದ್ದರೇ ಎಂತಹ ಕೆಲಸವನ್ನು ಸುಲಭವಾಗಿ ನಡೆಸಬಹುದು ಎಂಬುದಕ್ಕೆ ಕೆಲವೇ ವರ್ಷದ ಹಿಂದಷ್ಟೇ ಅರಂಭವಾದ ದಾನಮ್ಮದೇವಿ ಜಾತ್ರೆಯೇ ಸಾಕ್ಷಿಯಾಗಿದೆ. ವರ್ಷದಿಂದ ವರ್ಷಕ್ಕೆ ಜಾತ್ರೆಗೆ ಸೇರುತ್ತಿರುವ ಭಕ್ತರ ಸಂಖ್ಯೆ ಇಮ್ಮಡಿಗೊಳ್ಳುತ್ತಿದೆ. ದಾನೇಶ್ವರಿ ಸಮಿತಿಯ ಸರ್ವ ಸದಸ್ಯರ ನಿಸ್ವಾರ್ಥ ಸೇವೆಯೇ ಪ್ರಮುಖ ಕಾರಣವಾಗಿದ್ದರೇ, ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತ ಸಮೂಹ ಸೇರುತ್ತಿರುವುದೇ ಉದಾಹರಣೆಯಾಗಿದೆ ಎಂದರು. ಸಮಿತಿ ಅಧ್ಯಕ್ಷೆ ಮಹೇಶ್ವರಿ ಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಡಾ.ಎಸ್‌.ಎನ್‌. ನಿಡಗುಂದಿ, ಚಂದ್ರಶೇಖರ ಅಂಗಡಿ ಎಂ.ಬಿ. ಹುಚ್ಚಗೊಂಡರ, ಸುಧಿಧೀರ ಹವಳದ, ವೀರಭದ್ರಗೌಡ ಹೊಮ್ಮರಡಿ, ಶಿವಯೋಗೆಪ್ಪ ಶೆಟ್ಟರ, ಬಸವರಾಜ ಹಂಜಿ, ಎಂ.ಎಲ್‌.ಕಿರಣಕುಮಾರ ಇತರರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next