ಬ್ಯಾಡಗಿ: ಆಣೂರು ಕೆರೆ ನೀರು ತುಂಬಿಸದೇ ಇದ್ದಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದ ಆಣೂರು ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿ ಯಾವುದೇ ಫಲಪ್ರದ ಕಾಣದೇ ಮರಳಬೇಕಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ಈ ಯೋಜನೆಯಡಿ ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಇನ್ನೇನು ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ಆಗುವುದಷ್ಟೇ ಬಾಕಿ ಉಳಿದಿದ್ದು, ಹಣಕಾಸು ಇಲಾಖೆ ಅನುಮತಿಯೊಂದಿಗೆ ಕೆಲಸ ಪ್ರಾರಂಭಿಸಲಾಗುವುದು, ನೂರಾರು ಕೋಟಿ ಯೋಜನೆಯೊಂದನ್ನು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಂತದಲ್ಲಿ ನನ್ನನ್ನೂ ಸೇರಿದಂತೆ ಯಾರೊಬ್ಬರೂ ಭರವಸೆ ನೀಡಲು ಸಾಧ್ಯವಿಲ್ಲ ಎಂದರು.
ಕೇವಲ ಚುನಾವಣೆ ಬಹಿಷ್ಕಾರವೊಂದೇ ಎಲ್ಲದಕ್ಕೂ ಅಂತಿಮ ಪರಿಹಾರವಲ್ಲ. ಗ್ರಾಮಸ್ಥರು ಕೂಡಲೇ ತಮ್ಮ ನಿರ್ಧಾರ ಬದಲಿಸಿ ಚುನಾವಣೆ ಬಹಿಷ್ಕಾರ ಹಾಕುವ ಬದಲು ಮತದಾನ ಪ್ರಕ್ರಿಯೆಯಲ್ಲಿ ತಾವೆಲ್ಲರೂ ಪಾಲ್ಗೊಂಡು 100ರಷ್ಟು ಮತದಾನ ಮಾಡುವ ಮೂಲಕ ತಮ್ಮ ಮನವಿ ಸರ್ಕಾರಕ್ಕೆ ತಲುಪುವಂತೆ ಮಾಡಿ ಎಂದರು.
ಸಂತೋಷ್ ಬಡ್ಡಿಯವರ ಮಾತನಾಡಿ, ಈಗಾಗಲೇ ಈ ಯೋಜನೆಗೆ 212 ಕೋಟಿ ರೂ. ಮಂಜೂರಾಗಿರುವುದಾಗಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಸುಳ್ಳು ಹೇಳಿದ್ದು ಸಾಕು. ಇದೀಗ ತಾವು ಡಿಪಿಆರ್ ಆಗಿದೆ ಎಂದು ಹೇಳುವ ಮೂಲಕ ಗ್ರಾಮಸ್ಥರನ್ನು ದಾರಿ ತಪ್ಪಿಸುವ ಕೆಲಸ ದಯವಿಟ್ಟು ಮಾಡಬೇಡಿ. ಈ ವರೆಗೂ ಯುಟಿಪಿ ಅ ಧಿಕಾರಿಗಳಿಂದ 0.923 ಟಿಎಂಸಿ ನೀರು ಬಳಕೆ ಮಾಡುವ ಕುರಿತು ಅನುಮತಿ ಕೇಳಲಾಗಿದೆ. ನದಿ ನೀರು ಬಳಕೆ ಮತ್ತು ಹಂಚಿಕೆ ನಿಯಮಾವಳಿಗಳ ಪ್ರಕಾರ ಯಾವ ತಿಂಗಳಿನಲ್ಲಿ ನೀರು ಬಳಸಬಹುದು? ಎಷ್ಟು ಅಡಿ ನೀರು ಎತ್ತರ ಬಂದ ಮೇಲೆ ಬಳಕೆ ಮಾಡಬೇಕು? ತುಂಗಾಭದ್ರಾದಿಂದ ಕುಡಿಯುವ ನೀರು ಉದ್ದೇಶಕ್ಕಾಗಿ ಅನುಮತಿ ಪಡೆಯಲಾಗಿದೆಯೇ? ನೀರಾವರಿ ಉದ್ದೇಶಕ್ಕಾಗಿ ಕೇಳಲಾಗುತ್ತಿದೆಯೇ? ಎಷ್ಟು ವ್ಯಾಸದ ಪೈಪ್‌ಲೈನ್ ಬಳಕೆ ಮಾಡಲಾಗುತ್ತಿದೆ? ಎಷ್ಟು ಆಳಕ್ಕೆ ಪೈಪ್ ಹಾಕಲಾಗುತ್ತಿದೆ? ಎಂದೆಲ್ಲ ಹಲವು ಪ್ರಶ್ನೆಗಳ ಮಳೆಯನ್ನೇ ಸುರಿಸಿದರು.
ಆದರೆ, ಜಿಲ್ಲಾ ಧಿಕಾರಿಗಳು ಮಾತ್ರ ಇದ್ಯಾವುದಕ್ಕೂ ಸಮರ್ಪಕ ಉತ್ತರ ನೀಡಲಿಲ್ಲ. ಬದಲಾಗಿ ನಿಮ್ಮವನಾಗಿ ನನ್ನ ಪ್ರಯತ್ನ ಮಾಡುವೆ ಎಂದಷ್ಟೇ ಹೇಳಿದರು. ಗ್ರಾಮದ ಮಂಜುನಾಥ ಮಾತನಾಡಿ, ಕುಡಿಯುವ ನೀರಿಗಾಗಿ ಇಡೀ ಕುಟುಂಬವೇ ಮೂರು ಕಿಮೀ ಚಲಿಸಬೇಕಾಗಿದೆ. ನೀರಿಲ್ಲದೇ ಗ್ರಾಮದ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಯೋಜನೆ ಸ್ಥಗಿತಗೊಳಿಸಲಾಗಿದೆ. ತಮ್ಮ ನಿರ್ದೇಶನದಂತೆ 600 ಅಡಿಗಿಂತ ಹೆಚ್ಚು ಕೊರೆಯುವಂತಿಲ್ಲ. ಆದರೆ, ಸಾವಿರ ಅಡಿಗಳಷ್ಟು ಆಳಕ್ಕೆ ಕೊರೆದರೂ ನೀರು ಸಿಗುತ್ತಿಲ್ಲ, ಹಣ ಕೊಟ್ಟರೂ ಸಿಗದ ವಸ್ತು ನೀರು ಎನ್ನುವಂತಾಗಿದೆ. ನಮ್ಮ ಅಳಲನ್ನು ಯಾರ ಬಳಿ ತೋಡಿಕೊಳ್ಳಬೇಕು? ನಾವ್ಯಾರು
ಸಾಲಮನ್ನಾ ಕೇಳುತ್ತಿಲ್ಲ; ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವಂಥವರೂ ನಾವಲ್ಲ. ಒಂದು ವೇಳೆ ಆತ್ಮಹತ್ಯೆ ಎಂದಾದರೆ ಅದು ಕುಡಿಯುವ ನೀರಿಗಾಗಿಯೇ ಎಂದು ಎಚ್ಚರಿಸಿದರು.
ಬಸಪ್ಪ ಎಲಿ ಮಾತನಾಡಿ, ‘ಚುನಾವಣೆ ಬಹಿಷ್ಕಾರ’ ಎಂಬ ಪದ ಜಿಲ್ಲಾಡಳಿತಕ್ಕೆ ಸಾಕಷ್ಟು ಮುಜುಗರ ತಂದುಕೊಡುತ್ತಿದೆ ಎಂತಾದರೆ ಅದಕ್ಕೆ ಸಹಕಾರ ನೀಡುತ್ತೇವೆ. ಚುನಾವಣಾ ಸಿಬ್ಬಂದಿಗೆ ನಾವು ತೊಂದರೆ ಕೊಡುವುದಿಲ್ಲ. ಆದರೆ, ನಮ್ಮನ್ನು ಮತ ಹಾಕುವಂತೆ ಕರೆಯಬೇಡಿ. ಮತದಾನದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾಗಿದೆ. ಏ. 23 ಮಧ್ಯಾಹ್ನ 3 ಗಂಟೆಯ ಒಳಗೆ ಯಾವುದಾದರೊಂದು ಆದೇಶ ನೀಡಿದ್ದೇ ಆದಲ್ಲಿ ಉಳಿದ ಎರಡು ತಾಸುಗಳಲ್ಲಿ ಗ್ರಾಮದ ಎಲ್ಲರೂ ಮತದಾನ ಮಾಡುತ್ತೇವೆ ಎಂದರು.
ಬಳಿಕ ಅಧಿಕಾರಿಗಳ ತಂಡ ಆಣೂರು ಕೆರೆ ಭಾಗಕ್ಕೆ ತೆರಳಿ ವೀಕ್ಷಣೆ ನಡೆಸಿದರು. ಜಿಪಂ ಸಿಇಒ ಕೆ.ಲೀಲಾವತಿ, ಎಸ್ಪಿ ಪರುಶರಾಮ, ಡಿವೈಎಸ್‌ಪಿ ಕುಮಾರಪ್ಪ, ತಹಶೀಲ್ದಾರ್ ಗುರುಬಸವರಾಜ್, ಸಿಪಿಐ ಭಾಗ್ಯವತಿ, ಪಿಎಸ್‌ಐ ಮಹಾಂತೇಶ್, ಟಿಇಒ ಪರುಶರಾಮ ಪೂಜಾರ, ಪಿಡಿಒ ಲತಾ ತಬರಡ್ಡಿ ಹಾಗೂ ನಾಗರಾಜ ಹೆಡಿಯಾಲ, ಕಂದಾಯ ಇಲಾಖೆ ಎನ್.ಎಂ. ಹುಚ್ಚೇರ, ಗುಂಡಪ್ಪ ಹಾಗೂ ಅಧಿಕಾರಿಗಳಿದ್ದರು.