Advertisement

ನಿರೀಕ್ಷೆಗೂ ಮೀರಿದ ಮತಗಳಿಂದ ಬಿ.ವೈ. ರಾಘವೇಂದ್ರ ಗೆಲುವು

09:08 PM May 24, 2019 | Sriram |

ಶಿವಮೊಗ್ಗ: ಮೋದಿ ಅಲೆ, ಸಂಘಟನೆ ಶಕ್ತಿಯಿಂದ ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಜಯ ಗಳಿಸಿದ್ದಾರೆ. ಒಂದೂವರೆ ಲಕ್ಷದ ಮತಗಳ ಅಂತರದಿಂದ ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿಗೆ ನಿರೀಕ್ಷೆಗೂ ಮೀರಿ ಮತಗಳು ಬಂದಿವೆ.

Advertisement

ಉಪ ಚುನಾವಣೆಯಲ್ಲಿ ಮೋದಿ ಅಲೆ, ಹಿಂದುತ್ವದ ಯಾವುದೇ ವಿಷಯಗಳು ಇಲ್ಲದ ವೇಳೆಯೂ 52 ಸಾವಿರ ಮತಗಳ ಅಂತರದ ಗೆಲುವು ಸಿಕ್ಕಿತ್ತು. ಕಡಿಮೆ ಮತಗಳು ಲಭಿಸಿದ ಬೂತ್‌ಗಳ ಮೇಲೆ ಹೆಚ್ಚು ನಿಗಾವಹಿಸಿದ ಪರಿಣಾಮ ಮತ್ತೂಂದು ದಾಖಲೆಯ ಗೆಲುವು ಸಾಧಿಸಲು ಸಾಧ್ಯವಾಗಿದೆ. ಉಪ ಚುನಾವಣೆಯಲ್ಲಿ ಸೋಲಿನ ಅಂತರವನ್ನು ತಗ್ಗಿಸಿಕೊಂಡು ಗೆಲುವಿನ ಕನಸು ಕಾಣುತ್ತಿದ್ದ ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಆಘಾತಕಾರಿ ಸೋಲು ಅನುಭವಿಸಿದ್ದಾರೆ.
ಮತ ಎಣಿಕೆಯಲ್ಲಿ ಆರಂಭದಿಂದಲೂ ಮುನ್ನಡೆ ಗಳಿಸಿದ ರಾಘವೇಂದ್ರ ಅವರು ಅಂತಿಮವಾಗಿ 2,23,360 ಮತಗಳಿಂದ ಜಯಭೇರಿ ಬಾರಿಸಿದರು. ರಾಘವೇಂದ್ರ 7,29,872 ಲಕ್ಷ ಮತ ಗಳಿಸಿದರೆ, ಮಧು ಬಂಗಾರಪ್ಪ 5,06,512 ಲಕ್ಷ ಮತಗಳನ್ನು ಪಡೆದರು.

ಪರಾಜಿತ ಅಭ್ಯರ್ಥಿಗಳು ಗಳಿಸಿದ ಮತಗಳಲ್ಲೂ ಮಧು ಗಳಿಸಿದ ಮತಗಳೂ ಹೊಸ ದಾಖಲೆಯಾಗಿವೆ. ಈ ಹಿಂದೆ 2009ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರು ರಾಘವೇಂದ್ರ ಅವರ ಎದುರು 4.29 ಲಕ್ಷ ಮತಗಳನ್ನು ಗಳಿಸಿದ್ದರು. ಮಧು ಅವರು ತಮ್ಮ ತಂದೆಯವರಿಗಿಂತ 80 ಸಾವಿರ ಅಧಿಕ ಮತ ಪಡೆದುಕೊಂಡಿದ್ದಾರೆ.

ಎರಡನೇ ದೊಡ್ಡ ಗೆಲುವು
ಈವರೆಗೆ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ದಾಖಲೆ ಅಂತರ ದಿಂದ ಗೆಲುವು ಸಾಧಿಸಿರುವುದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ. 2014ರ ಚುನಾವಣೆಯಲ್ಲಿ ಅವರು 3.62 ಲಕ್ಷ ಮತಗಳ ಅಂತರದಿಂದ ವಿಜಯ ಗಳಿಸಿದ್ದು ಸಾರ್ವಕಾಲಿಕ ದಾಖಲೆಯಾಗಿತ್ತು. ಈಗ ಎರಡನೇ ದೊಡ್ಡ ಗೆಲುವು ರಾಘವೇಂದ್ರ ಅವರ ಪಾಲಾಗಿದೆ. ರಾಘವೇಂದ್ರ ಅವರು ಗಳಿಸಿದ 7 ಲಕ್ಷ ಮತಗಳು ಸಹ ಹೊಸ ದಾಖಲೆ ನಿರ್ಮಿಸಿದೆ. 2014ರ ಚುನಾವಣೆಯಲ್ಲಿ ಅವರ ತಂದೆ ಯಡಿಯೂರಪ್ಪ 6.06 ಲಕ್ಷ ಮತ ಗಳಿಸಿದ್ದು ದಾಖಲೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next