Advertisement

ವರ್ಷಾಂತ್ಯದೊಳಗೆ ಪ್ರಾಂಶುಪಾಲರ ಖಾಲಿ ಹುದ್ದೆ ಭರ್ತಿ: ತನ್ವೀರ್‌ ಸೇಠ್

02:30 AM Jul 13, 2017 | Team Udayavani |

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಈ ವರ್ಷಾಂತ್ಯದೊಳಗೆ ಭರ್ತಿ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಹೇಳಿದರು. ಬುಧವಾರ ಶಿಕ್ಷಕರ ಸದನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 1203 ಪಿಯು ಕಾಲೇಜುಗಳಲ್ಲಿ ಖಾಲಿ ಇದ್ದ 806 ಪ್ರಾಂಶುಪಾಲರ ಹುದ್ದೆಗಳಲ್ಲಿ 400 ಹುದ್ದೆಯನ್ನು ಈಗಾಗಲೇ ಭರ್ತಿ ಮಾಡಿಕೊಂಡಿದ್ದೇವೆ. ಉಳಿದ 400 ಹುದ್ದೆಯನ್ನು ಈ ವರ್ಷದ ಅಂತ್ಯದೊಳಗೆ ಭರ್ತಿ ಮಾಡಿಕೊಳ್ಳಲಾಗುವುದು. 124 ಉಪನ್ಯಾಸಕರಿಗೆ ಪ್ರಾಂಶುಪಾಲರಾಗಿ ಬಡ್ತಿ ನೀಡಲಾಗಿದೆ. 371ಜೆ ಅಡಿಯಲ್ಲಿ 49 ಉಪನ್ಯಾಸಕರಿಗೆ ಬಡ್ತಿ ನೀಡಲಾಗಿದೆ.

Advertisement

ಪ್ರಾಂಶುಪಾಲರಿಗೆ ವೇತನ ಶ್ರೇಣಿ ನಿಗದಿ ಪಡಿಸಿ, ನೇರ ನೇಮಕಾತಿಯನ್ನು ಕೆಪಿಎಸ್‌ಸಿ ಮೂಲಕ ಮಾಡಿಕೊಳ್ಳಲಿದ್ದೇವೆ.
ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗಾಗಿ 7ನೇ ವೇತನ ಆಯೋಗದ ಪರಿಷ್ಕರಣೆ ಸಂದರ್ಭದಲ್ಲಿ ನಿಬಂಧನೆಗೆ(ಟರ್ಮ್ ಅಫ್ ರೆಫ‌ರೆನ್ಸ್‌) ಅವಕಾಶ ಇಟ್ಟಿದ್ದು, ಇಲಾಖೆಯಿಂದ ಇದಕ್ಕೆ ನೀಡಬೇಕಾದ ಸ್ಪಷ್ಟನೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿ, ಪಿಎಚ್‌ಡಿ ಹಾಗೂ ಎಂμಲ್‌ ಮಾಡಿರುವ ಉಪನ್ಯಾಸಕರಿಗೆ ಬಡ್ತಿ ನೀಡಬೇಕು. ಸೇವೆಗೆ ಸೇರಿ 4 ವರ್ಷ ಪೂರ್ಣಗೊಳಿಸಿದ ಶಿಕ್ಷಕರ ಪ್ರೊಬೆಷನರಿ ಘೋಷಣೆ ಮಾಡಬೇಕು. ಒಬ್ಬ ಉಪನ್ಯಾಸಕನಿಗೆ ವಾರಕ್ಕೆ 16 ತರಗತಿ ಇರಬೇಕು. ಇದನ್ನು ಹೆಚ್ಚಿಸುವ ಯಾವ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂಬ ಬೇಡಿಕೆಯನ್ನು ಸಚಿವರ ಮುಂದಿಟ್ಟರು.

ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ರಾಜ್ಯ ಸಹಕಾರಿ ಮಹಾಮಂಡಳಿ ಅಧ್ಯಕ್ಷ ಶೇಖರ್‌ ಗೌಡ ಮಾಲಿ ಪಾಟೀಲ್‌, ಶಿಕ್ಷಣ ತಜ್ಞ ಡಾ.ಜಿ.ರಾಮಕೃಷ್ಣ, ಸಂಘದ ಕಾರ್ಯಾಧ್ಯಕ್ಷ ಎಸ್‌.ಆರ್‌. ವೆಂಕಟೇಶ್‌, ಪ್ರಧಾನ ಕಾರ್ಯದರ್ಶಿ ಎ.ಎಚ್‌.ನಿಂಗೇಗೌಡ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next