ಗದಗ: ಅಭಿವೃದ್ಧಿ ಹೆಸರಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಹೀಗಾಗಿ ವಿಕಾಸ್ ಎಂಬ ಶಬ್ದವನ್ನು ಕೇಳುತ್ತಿದ್ದಂತೆ ಆದಿವಾಸಿ ಜನರು ಬೆಚ್ಚಿ ಬೀಳುವಂತಾಗಿದೆ ಎಂದು ಮಧ್ಯ ಪ್ರದೇಶದ ಜಾಗೃತ ಆದಿವಾಸಿ ದಲಿತ ಸಂಘಟನೆಯ ಮಾಧುರಿ ಕಳವಳ ವ್ಯಕ್ತಪಡಿಸಿದರು.
ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದರಿಂದ ಅವರ ಸಂಸ್ಕೃತಿ, ಜೀವನ ಶೈಲಿ ನಾಶವಾಗುತ್ತದೆ. ಇವತ್ತಿಗೂ ಎಷ್ಟೋ ಆದಿವಾಸಿಗಳು ತಮ್ಮ ಜಿಲ್ಲಾ ಕೇಂದ್ರಗಳನ್ನು ಕಂಡಿಲ್ಲ. ಅಂಥವರನ್ನು ಬೀದಿಗೆ ತಳ್ಳುವುದರಿಂದ ತುತ್ತಿನ ಚೀಲಕ್ಕಾಗಿ ಬೆಂಗಳೂರು, ದೆಹಲಿ, ಮುಂಬೈಗಳಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುವಂತಾಗುತ್ತದೆ. ತಮ್ಮ ಪರಂಪರಾಗತ ನೆಲೆಯಿಂದ ಹೊರಬಿದ್ದ ಆದಿವಾಸಿಗಳು ನಗರಗಳಲ್ಲಿ ನಿತ್ಯ ಸತ್ತು ಬದುಕುತ್ತಿದ್ದಾರೆ ಎಂದು ಅವರ ಬದುಕಿನ ಕರಾಳತೆಯನ್ನು ಬಿಚ್ಚಿಟ್ಟರು.
ಇಂತಹ ಸಂದರ್ಭದಲ್ಲಿ ಸಂಘ ಪರಿವಾರ ತನ್ನ ಕುತಂತ್ರದಿಂದ ಆದಿವಾಸಿಗಳ ಮೇಲೆ ಹಿಂದುತ್ವವನ್ನು ಹೇರಲು ಪ್ರಯತ್ನಿಸುತ್ತಿದೆ. ಆದಿವಾಸಿಗಳ ನಡುವೆ ದುರ್ಗಾಮಾತೆಯನ್ನು ತಂದು ದಾರಿ ತಪ್ಪಿಸುತ್ತಿದೆ. ಆದಿವಾಸಿಗಳಿಗೆ ನೆಲ, ಜಲ, ಅರಣ್ಯವೇ ದೇವರು. ಅವರು ಮಾನವೀಯ ಗುಣಗಳ, ಪ್ರಕೃತಿ ಸ್ನೇಹಿ ಸಂಸ್ಕೃತಿಯ ಮೇಲೆ ಹಿಂದೂತ್ವದ ಮಾನವ ವಿರೋಧಿ ಸಂಸ್ಕೃತಿಯನ್ನು ಹೇರಲಾಗುತ್ತಿದೆ.
ಮತ್ತೂಂದೆಡೆ ಈ ದೇಶದ ಖನಿಜ ಸಂಪತ್ತನ್ನು ಖಾಸಗಿಯವರಿಗೆ ಲೂಟಿ ಮಾಡಲು ಅವಕಾಶ ಕೊಟ್ಟು ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ಅದ್ಯಾವ ಅರ್ಥದಲ್ಲಿ ಅಭಿವೃದ್ಧಿ ಎನ್ನಲು ಸಾಧ್ಯ ಎಂದು ಮಾಧುರಿ ಮಾರ್ಮಿಕವಾಗಿ ಪ್ರಶ್ನಿಸಿದರು. ಕುಮುದಾ ಸುಶೀಲಪ್ಪ, ಕಾವೇರಿ ಎಚ್.ಎಂ. ಉಪಸ್ಥಿತರಿದ್ದರು.
Advertisement
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಮೇ ಸಾಹಿತ್ಯ ಮೇಳದಲ್ಲಿ ಅಭಿವೃದ್ಧಿ ಮತ್ತು ಆದಿವಾಸಿಗಳು ಕುರಿತ ವಿಚಾರ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ಅವರು, ಈಗಾಗಲೇ ಮಧ್ಯಪ್ರದೇಶ, ಛತ್ತೀಸಗಡ, ಜಾರ್ಖಂಡ ಮತ್ತು ಒರಿಸಾದಲ್ಲಿ ಅಭಿವೃದ್ಧಿ ಹೆಸರಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ಅದಾನಿ, ಅಂಬಾನಿಯಂತವರ ಕೈಗೀಡುತ್ತಿದ್ದಾರೆ. ಆದಿವಾಸಿಗಳು, ಬಡವರು ನೆಲೆ ಕಳೆದುಕೊಳ್ಳುತ್ತಿದ್ದಾರೆ. ಮೋದಿ ಅವರು ಹಗಲಿರುಳು ಪಠಿಸುವ ‘ಸಬ್ ಕಾ ಸಾಥ್- ಸಬ್ ಕಾ ವಿಕಾಸ್’ ಇದೇನಾ ಎಂದು ಹರಿಹಾಯ್ದರು.
Related Articles
Advertisement