Advertisement

By Poll: ಚನ್ನಪಟ್ಟಣ ಕ್ಷೇತ್ರಕ್ಕೆ ವಾರದೊಳಗೆ ಅಭ್ಯರ್ಥಿ ಘೋಷಣೆ: ಎಚ್‌.ಡಿ.ಕುಮಾರಸ್ವಾಮಿ

09:38 PM Oct 14, 2024 | Team Udayavani |

ಹಾಸನ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ದೆಹಲಿಯಲ್ಲಿ ಬಿಜೆಪಿ ವರಿಷ್ಠರೊಂದಿಗೆ ಚರ್ಚಿಸಿ ಇನ್ನೊಂದು ವಾರದಲ್ಲಿ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದು ರಾಜ್ಯ ಜೆಡಿಎಸ್‌ ಅಧ್ಯಕ್ಷ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

Advertisement

ಜಿಲ್ಲೆಯ ಅರಕಲಗೂಡು ತಾಲೂಕಿನ ಬಿದರಕ್ಕ ಗ್ರಾಮದಲ್ಲಿ ಕೊಳಲು ಶ್ರೀಗೋಪಾಲಕೃಷ್ಣ ದೇವಸ್ಥಾನ ಉದ್ಘಾಟನಾ ಸಮಾರಂಭ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನು 2-3 ದಿನಗಳಲ್ಲಿ ಚುನಾವಣೆ ಆಯೋಗ ಉಪ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಲಿದೆ. ಬಿಜೆಪಿ-ಜೆಡಿಎಸ್‌ ನಾಯಕರು ದೆಹಲಿಯಲ್ಲಿ ಚರ್ಚೆ ಮಾಡಿ ಅಭ್ಯರ್ಥಿ ಘೋಷಣೆ ಮಾಡ್ತೀವಿ. ಜೆಡಿಎಸ್‌ ಅಥವಾ ಬಿಜೆಪಿ ಅಭ್ಯರ್ಥಿ ಎಂಬ ಪ್ರಶ್ನೆಯಿಲ್ಲ. ಎನ್‌ಡಿಎ ಅಭ್ಯರ್ಥಿ ಚುನಾವಣಾ ಕಣದಲ್ಲಿರುತ್ತಾರೆ ಎಂದು ಸ್ಪಷ್ಟಪಡಿಸಿದರು.

ಡಿ.ಕೆ.ಶಿವಕುಮಾರ್‌  ಅಭ್ಯರ್ಥಿ ಆದ ಮೇಲೆ ನಾನು ಅಭ್ಯರ್ಥಿ ಆಗಲೇಬೇಕಲ್ಲ. ಆದ್ದರಿಂದ ನಾನೇ ಅಭ್ಯರ್ಥಿ ಅಂಥ ಹೇಳಿದ್ದೀನಿ. ಹಲವು ಹೆಸರುಗಳಿವೆ. ಈಗಾಗಲೇ ಕ್ಷೇತ್ರದ ಮತದಾರರು, ಕಾರ್ಯಕರ್ತರ ಪ್ರತಿಕ್ರಿಯೆ, ಭಾವನೆಗಳ ತಿಳಿದುಕೊಂಡಿದ್ದೇನೆ. ಬಿಜೆಪಿಯ ದೆಹಲಿಯ ನಾಯಕರ ಜೊತೆ ಚರ್ಚೆ ಮಾಡಿ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದರು.

ಸಿಎಂಗೆ ಯಾರಾದರೂ ಬಂದು ತಥಾಸ್ತು ಎಂದಿದ್ದಾರಾ?
ರಾಜ್ಯದ ಜನತೆ ಆಶೀರ್ವಾದ ಇದುವರೆಗೂ ನನ್ನನ್ನು ಏನು ಮಾಡಲು ಆಗಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, ರಾಜ್ಯದ ಜನರ ಸಂಪೂರ್ಣ ಆಶೀರ್ವಾದ ಇದೆ ಎಂದು ಯಾರಾದರೂ ಬಂದು ತಥಾಸ್ತು ಅಂದಿದ್ದಾರಾ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಟಾಂಗ್‌ ನೀಡಿದರು.

ರಾಜಕೀಯದಲ್ಲಿ ಪರ, ವಿರೋಧಗಳು ಇದ್ದೇ ಇರುತ್ತವೆ. ದೊಡ್ಡಮಟ್ಟದಿಂದ ಸಣ್ಣಮಟ್ಟದವರೆಗೆ ಪರ-ವಿರೋಧಗಳು ನಡೆಯುತ್ತಲೇ ಇರುತ್ತವೆ. ಸಂಪೂರ್ಣವಾಗಿ ಯಾರಿಗೂ ಜನರ ಆಶೀರ್ವಾದ ದೊರಕಲ್ಲ. ರಾಜಕಾರಣ ಅಂದ ಮೇಲೆ ಅದು ದೊರಕೋದು ಇಲ್ಲ ಎಂದರು.

Advertisement

ರಾಜ್ಯದ ಜನತೆ ಆಶೀರ್ವಾದಕ್ಕಿಂತ ಮುಖ್ಯವಾಗಿ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಕೆಲವು ನಿರ್ಧಾರಗಳನ್ನು ಮಾಡುವಾಗ ಕಾನೂನು ಬಾಹಿರವಾದಂಥ ತೀರ್ಮಾನಗಳು, ಸರ್ಕಾರದ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳುವುದು ಸಲ್ಲದು ಎಂದರು.

ಹಾಸನ ಜೆಡಿಎಸ್‌ನ ಭದ್ರಕೋಟೆ, ಅಲ್ಲಾಡಿಸಲಾಗದು
ಹಾಸನ ಜಿಲ್ಲೆ ಜೆಡಿಎಸ್‌ ಭದ್ರಕೋಟೆ. ಯಾರು ಏನೇ ಮಾಡಿದರೂ ಅದನ್ನು ಅಲ್ಲಾಡಿಸಲು ಆಗದು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಗುಡುಗಿದರು.

ಹೊಳೆನರಸೀಪುರದಲ್ಲಿ ಮಾತನಾಡಿ, ಇಲ್ಲಿ ಜೆಡಿಎಸ್‌ ಅನ್ನು ಮತ್ತಷ್ಟು ಬಲಗೊಳಿಸಲು ಮುಂದಿನ ದಿನಗಳಲ್ಲಿ ಏನೇನು ಕ್ರಮ ಕೈಗೊಳ್ಳಬೇಕೋ ಅವನ್ನೆಲ್ಲ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತೇವೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ ಬೃಹತ್‌ ಸಮಾವೇಶ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ- 75ರ ಶಿರಾಡಿ ಘಾಟಿಯಲ್ಲಿ ರಸ್ತೆ ಪೂರ್ಣ ಹಾಳಾಗಿದ್ದು, ಕೇಂದ್ರದ ಸಾರಿಗೆ ಸಚಿವರ ಗಮನಕ್ಕೆ ತಂದಿದ್ದೇನೆ ಎಂದರು. ಅಧಿಕಾರವಿರುವಾಗ ಜಿಲ್ಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ತುಡಿತವಿದೆ. ಅದನ್ನು ಈಡೇರಿಸುವ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next