ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ಆಕ್ಟೋಬರ್ 21ರಂದು ಉಪಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಶನಿವಾರ ಘೋಷಿಸಿದ ಬೆನ್ನಲ್ಲೇ ಅನರ್ಹ ಶಾಸಕರಿಗೆ ರಾಜ್ಯ ಚುನಾವಣಾ ಆಯೋಗ ದೊಡ್ಡ ಶಾಕ್ ನೀಡಿದೆ.
ಉಪಚುನಾವಣೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಸ್ಪೀಕರ್ ರೂಲಿಂಗ್ ನೀಡಿದ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅನರ್ಹ ಶಾಸಕರ ಜತೆ ಸಿಎಂ ಸಭೆ:
ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡುತ್ತಿದ್ದಂತೆಯೇ ಇಕ್ಕಟ್ಟಿಗೆ ಸಿಲುಕಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅನರ್ಹ ಶಾಸಕರ ಜತೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರನ್ನು ಕರೆಯಿಸಿಕೊಂಡಿರುವ ಯಡಿಯೂರಪ್ಪ ಕಾನೂನಾತ್ಮಕ ಅಂಶಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.