Advertisement

By Election: ನಿಖಿಲ್‌ ಸ್ಪರ್ಧೆಗೆ ಒತ್ತಡ: ಜಯಮುತ್ತು ಕಣಕ್ಕೆ?

03:48 AM Oct 22, 2024 | Team Udayavani |

ಬೆಂಗಳೂರು: ಚನ್ನ ಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಸ್ಪರ್ಧೆಗೆ ಕಾರ್ಯಕರ್ತರ ಒತ್ತಡ ಹೆಚ್ಚಾಗಿದ್ದರೂ ಈ ಹಿಂದೆ ಕೇಳಿಬಂದಿದ್ದಂತೆ ಜಯಮುತ್ತು ಅವರೇ ಜೆಡಿಎಸ್‌ನಿಂದ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.

Advertisement

ಮಂಗಳವಾರ ಕೇಂದ್ರ ಸಚಿವರೂ ಆಗಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿ ರುವ ಚನ್ನಪಟ್ಟಣ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಈ ಕುರಿತ ನಿರ್ಣಯ ಹೊರಬೀಳುವ ನಿರೀಕ್ಷೆ ಇದೆ. ಸೋಮವಾರ ಎಚ್‌.ಡಿ. ದೇವೇಗೌಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕುಮಾರ ಸ್ವಾಮಿ ಹಾಗೂ ನಿಖಿಲ್‌ ಕುಮಾರಸ್ವಾಮಿ ಸುದೀರ್ಘ‌ ಚರ್ಚೆ ನಡೆಸಿದ್ದು, ಯೋಗೇಶ್ವರ್‌ ನಡೆ ಬಗ್ಗೆ ಬಿಜೆಪಿ ವರಿಷ್ಠರ ಗಮನಕ್ಕೆ ತರಲು ನಿರ್ಧಾರವಾಗಿದೆ.

ಶಿಗ್ಗಾವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಜೆಡಿಎಸ್‌ ತಕರಾರು ಮಾಡಿಲ್ಲ. ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸ್ವಾತಂತ್ರ್ಯವನ್ನು ಬಿಜೆಪಿಯ ವರಿಷ್ಠರು ಕುಮಾರಸ್ವಾಮಿಗೆ ಕೊಟ್ಟರೂ ಯೋಗೇಶ್ವರ್‌ ಹಾಗೂ ರಾಜ್ಯ ಬಿಜೆಪಿಯ ಕೆಲವು ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧಿಸುವಂತೆ ಯೋಗೇಶ್ವರ್‌ಗೆ ಅವಕಾಶ ಕೊಟ್ಟರೂ ತಿರಸ್ಕರಿಸಿದ ಬಗ್ಗೆ ಚರ್ಚೆಯಾಗಿದೆ.

ನಿಖಿಲ್‌ ಸ್ಪರ್ಧೆ ಈಗ ಬೇಕೇ?
ಎಲ್ಲಕ್ಕಿಂತ ಮಿಗಿಲಾಗಿ ಬಹುತೇಕ ಕಾರ್ಯಕರ್ತರು ನಿಖಿಲ್‌ ಅವರನ್ನೇ ಸ್ಪರ್ಧೆಗಿಳಿಸುವಂತೆ ಒತ್ತಡ ಹಾಕುತ್ತಿದ್ದು, ಇದಕ್ಕೆ ನಿಖೀಲ್‌ ಒಪ್ಪುತ್ತಿಲ್ಲ ಎನ್ನುವುದನ್ನೂ ಗಮನಕ್ಕೆ ತರಲಾಯಿತು. ಕುಟುಂಬ ರಾಜಕಾರಣದ ಆರೋಪ ಎದುರಿಸಬೇಕಾಗುತ್ತದೆ. ಅದರ ಬದಲು ಜಯಮುತ್ತು ಅಥವಾ ಪ್ರಸನ್ನ ಅವರಿಗೆ ಟಿಕೆಟ್‌ ಕೊಡುವುದು ಒಳಿತು. ಸಾರ್ವತ್ರಿಕ ಚುನಾವಣೆಯಲ್ಲಿ ನಿಖಿಲ್‌ ಸ್ಪರ್ಧಿಸುವುದು ಸೂಕ್ತ ಎಂಬ ಚರ್ಚೆಗಳು ಪರಸ್ಪರ ನಡೆದಿವೆ.

“ಪಕ್ಷದ ಕಾರ್ಯಕರ್ತನಾಗಿ ರಾಜ್ಯಾದ್ಯಂತ ಓಡಾಡುತ್ತಿದ್ದೇನೆ. ಸಂಘಟನೆಗಾಗಿ ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್‌ ವಿರುದ್ಧ ಗೆಲ್ಲಬೇಕಷ್ಟೇ. ನಾನು ಎಂದೂ ಆಕಾಂಕ್ಷಿ ಎಂದಿಲ್ಲ. ಕಾರ್ಯಕರ್ತರಲ್ಲಿ ಅಂತಹ ಭಾವನೆ ಇರಬಹುದು. ಎರಡೂ ಪಕ್ಷದವರು ಸೇರಿ ತೀರ್ಮಾನಿಸಬೇಕು ಎಂಬುದು ನನ್ನ ನಿಲುವು. ವೈಯಕ್ತಿಕ ವಾಗಿ ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ. ವೈಯಕ್ತಿಕ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೊರಹಾಕಲಾಗದು. ಎಲ್ಲ ಸಾಧಕ- ಬಾಧಕ ಅಳೆದು ತೂಗಿ ಚರ್ಚಿಸಬೇಕಿದೆ.’ -ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ

Advertisement

ಹಿಂದೆ ಸರಿಯುತ್ತಿರುವುದೇಕೆ ನಿಖಿಲ್‌?
ಪ್ರತೀ ಬಾರಿ ಕುಟುಂಬದವರಿಗೆ ಮಣೆ ಹಾಕಲಾಗುತ್ತದೆ ಆರೋಪದಿಂದ ಮುಕ್ತಿ

ಕಾರ್ಯಕರ್ತರಿಗೆ ಬಿಟ್ಟುಕೊಟ್ಟರೆ ಮಾತ್ರ ಈ ಆಪಾದನೆಯಿಂದ ವಿಮುಕ್ತಿ ಸಾಧ್ಯ

ಸೋತ ಪುತ್ರನಿಗೆ ಗೆಲುವಿನ ಮೆಟ್ಟಿಲು ಹತ್ತಿಸಲು ತಂದೆ ತಿಣುಕಾಡುತ್ತಿದ್ದಾರೆ ಎಂಬ ಭಾವನೆ ಬರಬಾರದು

ನಿಖಿಲ್‌ ಅವರನ್ನು ಸ್ಪರ್ಧೆಗಿಳಿಸಲು ಕುಮಾರಸ್ವಾಮಿ ಸಾಹಸ ಎನ್ನುವ ಸಿ.ಪಿ. ಯೋಗೇಶ್ವರ್‌ ಆರೋಪ ಸುಳ್ಳಾಗಿಸುವುದು

Advertisement

Udayavani is now on Telegram. Click here to join our channel and stay updated with the latest news.

Next