Advertisement

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

11:42 PM Nov 11, 2024 | Team Udayavani |

ರಾಮನಗರ: ಎಚ್‌.ಡಿ. ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದ್ದೇ ನಾನು. ಇದೀಗ ನಾನು 2 ಬಾರಿ ಮುಖ್ಯಮಂತ್ರಿಯಾದೆ ಎಂದು ಅವರಿಗೆ ಹೊಟ್ಟೆಹುರಿ. ನನಗೆ ಸೊಕ್ಕು, ಅಹಂ ಎನ್ನುತ್ತಿದ್ದಾರೆ. ಸರಕಾರವನ್ನು ಕಿತ್ತೂಗೆಯುತ್ತೇನೆ ಎನ್ನುತ್ತಿದ್ದಾರೆ. ದೇವೇಗೌಡರೇ ಇದು ನಿಮ್ಮ ಪಾಳೆಗಾರಿಕೆಯಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

Advertisement

ಸೋಮವಾರ ಚನ್ನಪಟ್ಟಣ ಉಪಚುನಾವಣೆಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ನಾನು ಮತ್ತು ಜಾಲಪ್ಪ ಇಲ್ಲದೇ ಹೋಗಿದ್ದರೆ 1994ರಲ್ಲಿ ನೀವು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ದೇವೇಗೌಡರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ರಾಷ್ಟ್ರೀಯ ಅಧ್ಯಕ್ಷರಾದ ಎಸ್‌.ಆರ್‌. ಬೊಮ್ಮಾಯಿ ಸಿದ್ಧರಿರಲಿಲ್ಲ. ಏಕೆಂದರೆ ಇವರು ಬೊಮ್ಮಾಯಿ ಸರಕಾರವನ್ನು ಕೆಡವಿದ್ದರು. ಆದರೂ ಆ ಸಂದರ್ಭದಲ್ಲಿ ನಾವೆಲ್ಲಾ ಒಟ್ಟಾಗಿ ದೇವೇಗೌಡರ ಪರ ನಿಂತೆವು. ನೀವು ಸುಳ್ಳು ಹೇಳಬಹುದು. ಆದರೆ ಇತಿಹಾಸವನ್ನು ತಿರುಚಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ವಿರುದ್ಧ ಹರಿಹಾಯ್ದರು.

ಮೊಮ್ಮಗನ ಗೆಲ್ಲಿಸಲು ಕಣ್ಣೀರು
ಮೊಮ್ಮಗನಿಗಾಗಿ ಒಂದು ವಾರದಿಂದ ಚನ್ನಪಟ್ಟಣದಲ್ಲೇ ಇದ್ದಾರೆ. ಜೆಡಿಎಸ್‌ ಅಥವಾ ಬಿಜೆಪಿಯಿಂದ ಬೇರೆ ಯಾರಾದರೂ ನಿಂತಿದ್ದರೆ ದೇವೇಗೌಡರು ಹೀಗೆ ವಾರಗಟ್ಟಲೆ ಚನ್ನಪಟ್ಟಣದಲ್ಲಿ ಮತ ಕೇಳುತ್ತಿದ್ದರಾ, ಎನ್‌ಡಿಎ ಅಭ್ಯರ್ಥಿಯಾಗಿ ಯೋಗೇಶ್ವರ್‌ ಸ್ಪರ್ಧಿಸಿದ್ದರೆ ಪ್ರಚಾರಕ್ಕೆ ಬರುತ್ತಿದ್ದರಾ ಎಂದು ಪ್ರಶ್ನಿಸಿದ ಸಿಎಂ, ಅತ್ಯಾಚಾರಕ್ಕೆ ಒಳಗಾದ ಹಾಸನದ ಹೆಣ್ಣುಮಕ್ಕಳ ಪರವಾಗಿ ಪಾಪ ದೇವೇಗೌಡರಿಗೆ ಕಣ್ಣೀರೇ ಬರಲಿಲ್ಲ ಎಂದು ಕುಟುಕಿದರು.


ನೀವು ದೇಶ ಬಿಟ್ಟಿರಾ?
ಇಂದು ನಾವು ಮೋದಿ ಜತೆ ಮಾತನಾಡಿ ಮೇಕೆದಾಟಿಗೆ ಅನುಮತಿ ಕೊಡಿಸುತ್ತೇವೆ. ಅವರು ಡಿಎಂಕೆ ಒಪ್ಪಿಸಲಿ ಎಂದು ದೇವೇಗೌಡರು ಹೇಳುತ್ತಿದ್ದಾರೆ. 2019ರಲ್ಲಿ ಮೋದಿ ದೊಡ್ಡ ಸುಳ್ಳುಗಾರ ಎಂದು ಕುಮಾರಸ್ವಾಮಿ ಹೇಳಿದ್ದರು. ಮೋದಿ ಮತ್ತೆ ಪ್ರಧಾನಿಯಾದರೆ ನಾನು ದೇಶದಲ್ಲಿ ಇರುವುದೇ ಇಲ್ಲ ಎಂದಿದ್ದರು. ಮೋದಿ ಪ್ರಧಾನಿಯಾದ ಬಳಿಕ ಇವರು ದೇಶ ಬಿಟ್ಟರಾ? ಸಂದರ್ಭಕ್ಕೆ ತಕ್ಕಂತೆ ಬದಲಾಗುವುದು ಅವರಿಗೆ ರೂಢಿಗತವಾಗಿ ಬಂದಿದೆ ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

ಗ್ಯಾರಂಟಿಗೆ ನಾನೇ ಗ್ಯಾರಂಟಿ
ಉಪಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ಗ್ಯಾರಂಟಿ ನಿಲ್ಲಿಸುತ್ತಾರೆಂದು ದೇವೇಗೌಡರು ಹೇಳಿದ್ದಾರೆ. ಸಿದ್ದರಾಮಯ್ಯ ಕೊಟ್ಟಮಾತು ತಪ್ಪುವುದಿಲ್ಲ, 2028ರ ವರೆಗೂ ಗ್ಯಾರಂಟಿ ನಿಲ್ಲಿಸೋಲ್ಲ. ಅದಕ್ಕೆ ನಾನೇ ಗ್ಯಾರಂಟಿ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next