ಉ.ಕ. ಭಾಗದಲ್ಲಿ ಬಿಜೆಪಿ ಹೆಚ್ಚು ಗೆಲ್ಲದಿದ್ದರೆ ಬಿಎಸ್‌ವೈಗೆ ವೈಯಕ್ತಿಕ ಹಿನ್ನಡೆ
Advertisement
ಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್ 5ಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸಿದರೆ ಸಿದ್ದರಾಮಯ್ಯ ಅವರ ವಿಪಕ್ಷ ನಾಯಕತ್ವಕ್ಕೆ ಕುತ್ತು ತರುವ ಪ್ರಯತ್ನ ನಡೆಯುತ್ತದೆಯೇ? ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲದಿದ್ದರೆ ಯಡಿಯೂರಪ್ಪ ಅವರಿಗೆ ವೈಯಕ್ತಿಕ ಹಿನ್ನಡೆ ಆಗಲಿದೆಯೇ? – ಇದು ರಾಜಕೀಯ ವಲಯದಲ್ಲಿ ಈಗ ಚಾಲ್ತಿಯಲ್ಲಿರುವ ಚರ್ಚೆ.
ಮತದಾನೋತ್ತರ ಸಮೀಕ್ಷೆಗಳು ಏನೇ ಇದ್ದರೂ ಇಬ್ಬರೂ ನಾಯಕರು ತಮ್ಮದೇ ಆದ ಲೆಕ್ಕಾಚಾರ ದಲ್ಲಿದ್ದಾರೆ. ಇಬ್ಬರಲ್ಲೂ ಆತಂಕ ಇರುವುದು ನಿಜ. ಕುಮಾರಸ್ವಾಮಿಯವರೂ ಫಲಿತಾಂಶದ ಬಗ್ಗೆ ತಮ್ಮದೇ ಲೆಕ್ಕಾಚಾರ ಹಾಕಿದ್ದು, ಏನಾಗುವುದೋ ಎಂಬ ಚಿಂತೆಯಲ್ಲಿದ್ದಾರೆ ಎನ್ನಲಾಗಿದೆ.
Related Articles
ಸಮೀಕ್ಷೆಗಳಲ್ಲಿ ಬಿಜೆಪಿ ಹೆಚ್ಚು ಸೀಟುಗಳನ್ನು ಗೆಲ್ಲುತ್ತದೆ ಎಂದಿರುವುದರಿಂದ ಯಡಿಯೂರಪ್ಪ ಅವರ ನಾಯಕತ್ವ ಅಬಾಧಿತ ಎಂದೇ ಅವರ ಆಪ್ತ ವಲಯ ಹೇಳುತ್ತಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನ ಬಂದರೆ ಮಾತ್ರ ಅವರ ಪ್ರಭಾವ ಕೆಲಸ ಮಾಡಿದೆ ಎಂದರ್ಥ ಎಂಬ ಮಾತೂ ಇದೆ.
Advertisement
ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಕಾರ್ಯಕರ್ತರ ಬಲ ಇದೆ. ಇಲ್ಲಿ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಿದಂತೆ ಉಪ ಚುನಾವಣೆಯಲ್ಲೂ ಆಗಿದೆ. ಹುಣಸೂರು, ಹೊಸಕೋಟೆ ಮತ್ತು ಕೆ.ಆರ್. ಪೇಟೆಯಲ್ಲಿ ಬಿಜೆಪಿಯ ತಳಮಟ್ಟದ ಸಂಘಟನೆ ಇಲ್ಲ. ಆದರೆ ಯಶವಂತಪುರ, ಶಿವಾಜಿನಗರ, ಮಹಾಲಕ್ಷ್ಮೀ ಲೇ ಔಟ್, ಕೆ.ಆರ್. ಪುರಗಳಲ್ಲಿ ಅದು ಹಿಂದಿನಿಂದಲೂ ಪ್ರಬಲವಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಕಡಿಮೆ ಸ್ಥಾನ ಬಂದರೆ ಬಿಎಸ್‌ವೈಗೆ ವೈಯಕ್ತಿಕ ಹಿನ್ನೆಡೆ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ಸಿದ್ದುಗೆ ಕುತ್ತುಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಪತನದ ಅನಂತರ ವಿಪಕ್ಷ ನಾಯಕ ಸ್ಥಾನ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಲವು ದಿನ ಕಾದು ಅನಂತರ ಉಪ ಚುನಾವಣೆ ಹಿನ್ನೆಲೆಯಲ್ಲಿಯೇ ಸಿದ್ದರಾಮಯ್ಯ ಅವರನ್ನು ನೇಮಿಸಿತ್ತು. ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲೂ ಸಿದ್ದರಾಮಯ್ಯ ಅವರ ಮಾತಿಗೆ ಮಣೆ ಹಾಕಿತ್ತು. ಟಿಕೆಟ್ ಹಂಚಿಕೆಯಲ್ಲೂ ಅವರೇ ಮೇಲುಗೈ ಸಾಧಿಸಿದ್ದರು. ಹೀಗಾಗಿ ಸಹಜವಾಗಿ ಈಗ ಫಲಿತಾಂಶದ ಸಂಪೂರ್ಣ ಹೊಣೆಗಾರಿಕೆ ಸಿದ್ದರಾಮಯ್ಯ ಅವರದೇ. 15 ಕ್ಷೇತ್ರಗಳಲ್ಲಿ 12 ಕಾಂಗ್ರೆಸ್‌ನವೇ. ಕನಿಷ್ಠ ಆರನ್ನಾದರೂ ಗೆಲ್ಲದಿದ್ದರೆ ಹೈಕಮಾಂಡ್ ವ್ಯತಿರಿಕ್ತ ನಿರ್ಧಾರಕ್ಕೆ ಬರಬಹುದು. ಕಾಂಗ್ರೆಸ್‌ನ ಹಿರಿಯ ನಾಯಕರು ಸಿದ್ದರಾಮಯ್ಯ ಅವರನ್ನು ವಿಪಕ್ಷ ನಾಯಕ ಸ್ಥಾನದಿಂದ ತೆಗೆಯಬೇಕು ಎಂದು ಹೈಕಮಾಂಡ್ ಮೊರೆ ಹೊಗಬಹುದು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ದಿನೇಶ್‌ಗೂ ಸಂಕಷ್ಟ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೂ ಸಂಕಷ್ಟ ಎದುರಾಗಬಹುದು. ಸಿದ್ದರಾಮಯ್ಯ ಬೆಂಬಲದಿಂದಾಗಿಯೇ ಕೆಪಿಸಿಸಿ ಅಧ್ಯಕ್ಷ ಪಟ್ಟದಲ್ಲಿ ಇರುವ ಅವರಿಗೆ, ಉಪಚುನಾವಣೆ ಫಲಿತಾಂಶ ಕೈಹಿಡಿಯದಿದ್ದರೆ ನೈತಿಕ ಕಾರಣದಿಂದ ರಾಜೀನಾಮೆ ಕೊಡಿ ಎಂಬ ಒತ್ತಡ ಹೆಚ್ಚಬಹುದು ಎನ್ನಲಾಗಿದೆ. ನಾಳೆ ಭವಿಷ್ಯ ನಿರ್ಧಾರ
15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಸೋಮವಾರ ಹೊರಬೀಳಲಿದೆ. 13 ಅನರ್ಹ ಶಾಸಕರು ಸೇರಿ 15 ಮಂದಿಯ ಭವಿಷ್ಯ ಅಂದು ನಿರ್ಧಾರವಾಗಲಿದೆ. ಮತಎಣಿಕೆಗಾಗಿ ಚುನಾವಣ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಮಧ್ಯಾಹ್ನದ ವೇಳೆಗೆ 15 ಕ್ಷೇತ್ರಗಳ ಸೋಲು-ಗೆಲುವಿನ
ವಿವರ ಹೊರಬೀಳಲಿದೆ. ಎಚ್‌ಡಿಕೆ ನಾಯಕತ್ವಕ್ಕೆ ಪೆಟ್ಟು?
ಒಕ್ಕಲಿಗ ಮತದಾರರು ಹೆಚ್ಚಿರುವ ಯಶವಂತಪುರ, ಹುಣಸೂರು, ಕೆ.ಆರ್. ಪೇಟೆ, ಚಿಕ್ಕಬಳ್ಳಾಪುರ, ಮಹಾಲಕ್ಷ್ಮೀ ಲೇ ಔಟ್ ಬಗ್ಗೆ ಜೆಡಿಎಸ್ ನಿರೀಕ್ಷೆ ಹೊಂದಿದೆ. ಡಿಕೆಶಿ ಸಹಕಾರವೂ ಸಿಕ್ಕಿರುವುದರಿಂದ ಸಮುದಾಯದ ಬೆಂಬಲ ಗೌಡರ ಕುಟುಂಬಕ್ಕೆ ಲಭಿಸುವುದೇ ಎಂಬ ಪ್ರಶ್ನೆಯಿದೆ. ಜೆಡಿಎಸ್‌ಗೆ ಗಳಿಸುವ ಮತಗಳ ಪ್ರಮಾಣವೂ ಮುಖ್ಯವಾಗಿದೆ. - ಎಸ್. ಲಕ್ಷ್ಮೀನಾರಾಯಣ