ದಾವಣಗೆರೆ: ರಾಜ್ಯ ಸರ್ಕಾರ ಕಾನೂನು ಬಾಹಿರ ಚಟುವಟಿಕೆ ನಡೆಸಿದವರಿಗೆ ರಿಲೀಫ್ ಕೊಟ್ಟಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಇಲಾಖೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ದೂರಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಕೇಸ್ ವಾಪಸ್ ಪಡೆದ ವಿಚಾರ ನೋಡಿದರೆ ರಾಜ್ಯ ಸರ್ಕಾರ ಗಲಭೆಕೋರರಿಗೆ ರಕ್ಷಣೆ ಕೊಡುತ್ತಿದೆ. ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.
ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡುತ್ತಿರುವ ಮಾದರಿಯಲ್ಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಹ ಚನ್ನಪಟ್ಟಣದಲ್ಲಿ ಯಾರೇ ಅಭ್ಯರ್ಥಿ ಯಾದರೂ ನಾನೇ ಎನ್ ಡಿಎ ಅಭ್ಯರ್ಥಿ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.
ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ದೂರು ದಾಖಲಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಅವರು ದೂರು ದಾಖಲು ಮಾಡಿದ್ದಾರೆ. ಅದಕ್ಕೆ ನಾನು ನ್ಯಾಯಾಲಯದಲ್ಲಿ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.
3-4 ಸಾವಿರ ಪುಟಗಳಷ್ಟು ಚಾರ್ಜ್ ಶೀಟ್ ಹಾಕುತ್ತಾರೆ. 12 ವರ್ಷದಿಂದ ನನ್ನ ಮೇಲೆ ಕೇಸ್ ಹಾಗೆ ಉಳಿಸಿಕೊಂಡಿದ್ದಾರೆ. ಈಗ ನನ್ನ ಮೇಲೆ ಕೇಸ್ ಹಾಕಿದ್ದಾರೆ ನ್ಯಾಯಾಲಯದಲ್ಲಿ ಎಲ್ಲ ಚರ್ಚೆ ಆಗಲಿ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ತಾಜ್ ವೆಸ್ಟೆಂಡ್ ನಲ್ಲಿ ಅಧಿಕಾರ ನಡೆಸಿದ ಕುರಿತು ಬಾಲಕೃಷ್ಣ ಹೇಳಿರುವ ಬಗ್ಗೆ ನಾನು ಮಾತನಾಡುವುದಿಲ್ಲ. ಬಾಲಕೃಷ್ಣ ಅವರ ಹಿನ್ನೆಲೆ ಎಂಬುದು ಏನೂ ಎಂಬುದು ಗೊತ್ತಿದೆ ಎಂದರು.
600 ಕೋಟಿ ಕೆಲಸ ಮಾಡದೆ ಬಿಲ್ ಮಾಡಿದ್ದಾರೆ ಅಂತ ಮಹದೇವಪ್ಪ ಅವರು ಮಾತನಾಡಿದ್ದರು. ಸದನ ಸಮಿತಿ ರಚಿಸಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಈಗ ಅವರೇ ಅವರನ್ನು ಜೊತೆಗಿಟ್ಟುಕೊಂಡು ಓಡಾಡುತ್ತಾ ಇದ್ದಾರೆ. 2018 ರಲ್ಲಿ ಯಾರಾದ್ರೂ ಫೈಲ್ ಹಿಡಿದುಕೊಂಡು ಬಂದಿದ್ದರಾ. ನಾನು ಏನಾದರೂ ಸಹಿಗೆ ಕಮಿಷನ್ ತೆಗೆದುಕೊಂಡಿದ್ದರೆ ಈಗ ಅವರದೆ ಸರ್ಕಾರ ಇದೆ. ಅದರ ಬಗ್ಗೆ ತನಿಖೆ ನಡೆಸಲಿ. ಯಾರೋ ತೀಟೆಗೆ ಏನಾದರೂ ಮಾತನಾಡಿದರೆ ಅದಕ್ಕೆಲ್ಲ ನಾನೂ ಉತ್ತರ ಕೊಡಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಕಾಟನ್, ಆಯಿಲ್ ಇಂಡಸ್ಟ್ರಿ ಇತ್ತು. ಆಧುನಿಕತೆ ಬೆಳೆದಂತೆ ನಶಿಸಿ ಹೋಗುತ್ತಾ ಇದೆ. ದಾವಣಗೆರೆಯಲ್ಲಿ ಕೈಗಾರಿಕೆಗೆ ಏನು ಮಾಡಬೇಕು ಎಂಬುದರ ಬಗ್ಗೆ ಕೇಂದ್ರದಲ್ಲಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.