Advertisement

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

01:37 AM Nov 09, 2024 | Team Udayavani |

ರಾಮನಗರ: ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲಿ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಮೇಕೆದಾಟು ಅಣೆಕಟ್ಟು ಯೋಜನೆ ಸದ್ದು ಮಾಡುತ್ತಿದೆ.

Advertisement

ಒಂದೆಡೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲು ಜೆಡಿಎಸ್‌ಗೆ ಏಕೆ ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್‌ ನಾಯಕರು ಕೆಣಕುತ್ತಿದ್ದರೆ, ಇತ್ತ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ಮೇಕೆದಾಟಿಗೆ ಅನುಮತಿ ಕೊಡಿಸಿಯೇ ಕೊನೆಯುಸಿರೆಳೆಯುತ್ತೇನೆ ಎಂದಿದ್ದಾರೆ. ಇದಕ್ಕೆ ಅವರ ಪುತ್ರ ಎಚ್‌.ಡಿ. ಕುಮಾರಸ್ವಾಮಿ ಸಾಥ್‌ ನೀಡಿದ್ದಾರೆ.

ಇನ್ನು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮೇಕೆದಾಟಿಗೆ ಅನುಮೋದನೆ ಕೊಡಿಸಿ ದರೆ 3 ವರ್ಷದಲ್ಲಿ ಅಣೆಕಟ್ಟು ಕಟ್ಟಿಸುತ್ತೇನೆ ಎಂದು ಸವಾಲು ಹಾಕಿದ್ದು, ರಂಗೇರಿರುವ ಉಪಚುನಾವಣೆ ಅಖಾಡದಲ್ಲಿ ಮೇಕೆದಾಟು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮೇಕೆದಾಟು ವಿಚಾರವಾಗಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡುವೆ ಹಲವು ವರ್ಷಗಳಿಂದ ವಾಕ್ಸಮರ ನಡೆಯುತ್ತಲೇ ಇದೆ.

ಲೋಕಸಭಾ ಚುನಾವಣೆ ಸಮಯದಲ್ಲಿ ನನಗೆ ಅಧಿಕಾರ ನೀಡಿ, ಕೇಂದ್ರ ಬಿಜೆಪಿ ನಾಯಕರ ಕೈ ಹಿಡಿದು ನಾನು ಸಹಿ ಹಾಕಿಸುತ್ತೇನೆ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು. ಇದನ್ನೇ ಮುಂದು ಮಾಡುತ್ತಿರುವ ಕೈ ನಾಯಕರು ಮೇಕೆದಾಟಿಗೆ ಇನ್ನೂ ಏಕೆ ಅನುಮೋದನೆ ಕೊಡಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇತ್ತ ಎಚ್‌.ಡಿ. ಕುಮಾರಸ್ವಾಮಿ ಮೇಕೆದಾಟಿಗಾಗಿ ಪಾದಯಾತ್ರೆ ಮಾಡಿದವರು ತಮ್ಮ ಕೈಗೆ ಪೆನ್ನು ಬಂದರೂ ಏಕೆ ಅಣೆಕಟ್ಟು ನಿರ್ಮಿಸುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಈ ವಾಕ್ಸಮರ ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲೂ ಅನುರಣಿಸಿದೆ.

ದೊಡ್ಡಗೌಡರ ಪ್ರವೇಶ
ಮೇಕೆದಾಟು ವಿವಾದಕ್ಕೆ ಸಂಬಂಧಿಸಿದಂತೆ ದೇವೇಗೌಡರು ದನಿ ಎತ್ತಿದ್ದು, ಕೊನೆಯುಸಿರು ಎಳೆವ ಮುನ್ನ ಯೋಜನೆಗೆ ಪ್ರಧಾನಿಯಿಂದ ಒಪ್ಪಿಗೆ ಕೊಡಿಸುತ್ತೇನೆ. ಮೇಕೆದಾಟು ಯೋಜನೆಯನ್ನು ಮೋದಿ ಅವರಿಂದ ಮಾತ್ರ ಪೂರ್ಣ ಮಾಡಲು ಸಾಧ್ಯ. ಆದರೆ ತಮಿಳುನಾಡಿನವರು ನಮ್ಮ ಕುತ್ತಿಗೆ ಹಿಡಿದಿದ್ದಾರೆ. ಆದರೆ ನಾನು ರಾಜ್ಯದ ನೀರಿಗಾಗಿ ನನ್ನ ಜೀವನದ ಕೊನೆ ಕ್ಷಣದವರೆಗೆ ಹೋರಾಟ ನಡೆಸುತ್ತೇನೆ ಎಂದು ಹೇಳುವ ಮೂಲಕ ಮೇಕೆದಾಟಿನ ಚರ್ಚೆಗೆ ಮತ್ತಷ್ಟು ಮಹತ್ವ ನೀಡಿದ್ದಾರೆ.

Advertisement

ನಾನು ಸಚಿವನಾಗಿ ನಾಲ್ಕೂವರೆ ತಿಂಗಳು ಆಗಿದೆ ಅಷ್ಟೇ. ನಾನು ಸುಮ್ಮನೆ ಕೂತಿಲ್ಲ. ಕೇಂದ್ರದಲ್ಲಿ ಮೂರನೇ ಬಾರಿ ಮೋದಿಯವರು ಪ್ರಧಾನಿಯಾಗಿದ್ದಾರೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇವೆ. ಕಾವೇರಿಗಾಗಿ ದೇವೇಗೌಡರು ನಡೆಸಿದ ಹೋರಾಟವನ್ನು ಕಾಂಗ್ರೆಸ್‌ ಅರ್ಥ ಮಾಡಿಕೊಳ್ಳಲಿ. – ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ಮೋದಿಯಿಂದ ಮೇಕೆದಾಟು ಸಾಧ್ಯ
ನಾನು ಪ್ರಧಾನಿ ಆಗಿದ್ದು ದೈವದ ಆಟ. ಮೇಕೆದಾಟು ಯೋಜನೆ ಮೋದಿ ಅವರಿಂದ ಮಾತ್ರ ಸಾಧ್ಯ. ನಾನು ಅವರಿಗೆ ಮನವಿ ಮಾಡುತ್ತೇನೆ. ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇನೆ. ಈಗಾಗಲೇ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಾನು ಕೊನೆಯುಸಿರೆಳೆಯುವುದರೊಳಗೆ ಮೇಕೆದಾಟಿಗೆ ಅನುಮತಿ ಕೊಡಿಸುತ್ತೇನೆ. – ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

ಎಚ್‌ಡಿಕೆ  ಏಕೆ ಅನುಮತಿ ಕೊಡಿಸಿಲ್ಲ?
ಮೇಕೆದಾಟಿಗೆ ದೇವೇಗೌಡರು ಅನುಮೋದನೆ ಕೊಡಿಸಿದರೆ ಸಂತೋಷ. ಅವರು ಪ್ರಧಾನಮಂತ್ರಿಯಿಂದ ಅನುಮೋದನೆ ಕೊಡಿಸಿದರೆ, ನಾನು 3 ವರ್ಷದಲ್ಲಿ ಅಣೆಕಟ್ಟು ನಿರ್ಮಾಣ ಕಾರ್ಯ ಪೂರ್ಣಗೊಳಿಸುತ್ತೇನೆ. ಕೈ ಹಿಡಿದು ಸಹಿ ಹಾಕಿಸುತ್ತೇನೆ ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ 6 ತಿಂಗಳಾದರೂ ಏಕೆ ಅನುಮೋದನೆ ಕೊಡಿಸಿಲ್ಲ? – ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next