Advertisement

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

10:25 PM Nov 04, 2024 | Team Udayavani |

ಶಿಗ್ಗಾವಿ: ಕೊರೊನಾ ಸಂದರ್ಭ ಸತ್ತ ಹೆಣಗಳ ಲೆಕ್ಕದಲ್ಲೂ ಲಂಚ ಪಡೆದು ದಾಖಲೆ ಮಾಡಿದವರು ಬಸವರಾಜ ಬೊಮ್ಮಾಯಿ. ಅವರ ಕಾಲದಲ್ಲೇ ಶೇ.40 ಕಮಿಷನ್‌ ಬಂದಿದ್ದು. ಶಿಗ್ಗಾವಿ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿರುವ ಅವರು ಈ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

Advertisement

ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಹುಲಗೂರು, ಹುರಳಿಕುಪ್ಪಿ, ಬಂಕಾಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ ಖಾನ್‌ ಪಠಾಣ್‌ ಪರ ಪ್ರಚಾರ ನಡೆಸಿ ಮಾತನಾಡಿ ಬಿಜೆಪಿ ಅಧಿಕಾರದಲ್ಲಿದ್ದಾಗ ಲೂಟಿ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ, ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಕೊಟ್ಟಿಲ್ಲ ಎಂದು ದೂರಿದರು.

ಸಿದ್ದರಾಮಯ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಡೀ ದೇಶಕ್ಕೆ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿದ್ದರು. ಆದರೆ ನಮ್ಮ ಸರ್ಕಾರ ಜಾರಿಗೆ ಬಂದ ಎಂಟೇ ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇವೆ. ರಾಜ್ಯದ ಲಕ್ಷಾಂತರ ತಾಯಂದಿರು ಗ್ಯಾರಂಟಿಗಳ ಅನುಕೂಲಗಳನ್ನು ಪ್ರತೀ ದಿನ ಪಡೆಯುತ್ತಿದ್ದಾರೆ ಎಂದರು.

ಷಡ್ಯಂತ್ರಕ್ಕೆ ಹೆದರುವ, ಬೆದರುವ ಪ್ರಶ್ನೆಯೇ ಇಲ್ಲ:
40 ವರ್ಷದಲ್ಲಿ ಸಣ್ಣ ಕಪ್ಪು ಚುಕ್ಕೆ ಕೂಡ ಇಲ್ಲದ ನನ್ನನ್ನು ಕೇವಲ ಷಡ್ಯಂತ್ರದಿಂದ ಕೆಳಗಿಳಿಸಲು ಪಿತೂರಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆಂದು ವಿಜಯೇಂದ್ರ, ಆರ್.ಅಶೋಕ, ಯತ್ನಾಳ್ ಎಲ್ಲರೂ ಬೊಬ್ಬೆ ಹೊಡೆಯುತ್ತಿದ್ದಾರೆ. ರಾಜ್ಯದ ಜನರ ನೈತಿಕ‌ ಶಕ್ತಿ ನನ್ನ ಜೊತೆಗೆ ಇರುವವರೆಗೂ ನಾನು ಬಿಜೆಪಿ ಪರಿವಾರದ ಷಡ್ಯಂತ್ರಕ್ಕೆ ಹೆದರುವ, ಬೆದರುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಐದಕ್ಕೆ ಐದೂ ವರ್ಷ ಪೂರೈಸುವುದು ಶತಸಿದ್ದ.

ವಕ್ಫ್ ಆಸ್ತಿ ಸರ್ಕಾರದ ಆಸ್ತಿ ಅಲ್ಲ. ಅದು ವಕ್ಫ್ ಬೋರ್ಡ್ ಗೆ ಸೇರಿದ ಆಸ್ತಿ. ಈ ಆಸ್ತಿ ಒತ್ತುವರಿ ಮಾಡಿದವರನ್ನು ತೆರವುಗೊಳಿಸಲು ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಅವಧಿಯಲ್ಲೂ ನೋಟಿಸ್ ನೀಡಿದ್ದಾರೆ, ಒತ್ತುವರಿ ತೆರವುಗೊಳಿಸಿದ್ದಾರೆ. ಆದರೆ ನಮ್ಮ‌ ಸರ್ಕಾರದಿಂದ ಯಾವುದೇ ರೈತರಿಗೂ ತೊಂದರೆ ಆಗುವುದಿಲ್ಲ. ನೋಟಿಸ್ ವಾಪಸ್ ಪಡೆಯಲು ಸ್ಪಷ್ಟ ನಿರ್ದೇಶನ ನೀಡಿದ್ದೇನೆ.

Advertisement

ನನಗೆ ಶಾಸಕ ಸ್ಥಾನ ಬಿಡಲು ಮುಂದಾಗಿದ್ದ ಖಾದ್ರಿ: ಸಿಎಂ
ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ನನಗೆ ತುಂಬಾ ಬೇಕಾದವರು. 1999ರಲ್ಲಿ ನನಗಾಗಿ ಶಾಸಕ ಸ್ಥಾನ ತ್ಯಜಿಸಲು ಸಿದ್ಧರಾಗಿದ್ದರು. ನಾನು ಸೋತು, ಖಾದ್ರಿ ಗೆದ್ದಿದ್ದಾಗ ಸ್ವತಃ ಖಾದ್ರಿಯವರೇ ಬಂದು ಶಾಸಕ ಸ್ಥಾನವನ್ನು ನನಗಾಗಿ ಬಿಟ್ಟು ಕೊಡಲು ಸಿದ್ಧರಾಗಿದ್ದರು. ನಮ್ಮಿಬ್ಬರ ನಡುವೆ ಅಷ್ಟು ಆತ್ಮೀಯತೆ ಇದೆ. ಹೀಗಾಗಿ ನಮ್ಮ ಮಾತಿಗೆ ಬೆಲೆ ನೀಡಿ ನಾಮಪತ್ರ ವಾಪಸ್‌ ಪಡೆದು ಪಠಾಣ್‌ ಅವರನ್ನು ಗೆಲ್ಲಿಸಲು ಟೊಂಕ ಕಟ್ಟಿ ಕೆಲಸ ಮಾಡುತ್ತಿದ್ದಾರೆ. ಖಾದ್ರಿ ಅವರಿಗೆ ಒಳ್ಳೆಯ ಸ್ಥಾನ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next