Advertisement
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರು ಏಳು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಹೈಕಮಾಂಡ್ ಒಪ್ಪಿಗೆಗೆ ಕಳುಹಿಸಿದ್ದರು.
Related Articles
Advertisement
ಕಾಗವಾಡ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯಿಂದ ವಲಸೆ ಬಂದ ರಾಜು ಕಾಗೆ ಅವರಿಗೆ ಟಿಕೆಟ್ ನೀಡಲಾಗಿದೆ. ಇವರನ್ನು ಡಿ.ಕೆ. ಶಿವಕುಮಾರ್ ಅವರೇ ಕಾಂಗ್ರೆಸ್‌ಗೆ ಕರೆತಂದಿದ್ದರು. ಹೀಗಾಗಿ ಈ ಕ್ಷೇತ್ರದಲ್ಲಿ ರಾಜು ಕಾಗೆ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಕೆ.ಆರ್. ಪೇಟೆಯಲ್ಲಿ ನಿರೀಕ್ಷೆಯಂತೆಯೇ ಕೆ.ಬಿ. ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಲಾಗಿದೆ.
ತಡವಾಗಿದ್ದು ಏಕೆ?ಶಿವಾಜಿನಗರ, ಗೋಕಾಕ್ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪೈಪೋಟಿ ಮತ್ತು ಬೇರೆ ಬೇರೆ ಲೆಕ್ಕಾಚಾರ ಇದ್ದುದರಿಂದ ಪಟ್ಟಿ ಬಿಡುಗಡೆಗೆ ತಡವಾಗಿತ್ತು ಎನ್ನಲಾಗುತ್ತಿದೆ. ಗೋಕಾಕ್ ಕ್ಷೇತ್ರದಲ್ಲಿ ಲಖನ್ ಜಾರಕಿಹೊಳಿ ಬದಲು ಅಶೋಕ್ ಪೂಜಾರಿ ಅವರಿಗೆ ಟಿಕೆಟ್ ನೀಡಬೇಕು ಎಂಬುದು ಡಿ.ಕೆ. ಶಿವಕುಮಾರ್ ಮತ್ತು ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ ಒತ್ತಡ ಹೇರಿದ್ದರು. ಆದರೆ ಲಖನ್ ಜಾರಕಿಹೊಳಿಗೆ ಟಿಕೆಟ್ ಅಂತಿಮಗೊಂಡಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿ ಪ್ರಚಾರವನ್ನೂ ಆರಂಭಿಸಿದ್ದರು. ಇದು ಹೈಕಮಾಂಡ್‌ಗೆ ತಲೆನೋವು ತಂದಿತ್ತು. ಯಶವಂತಪುರಕ್ಕೆ ಇಲ್ಲ
ಎರಡನೇ ಪಟ್ಟಿ ಬಿಡುಗಡೆ ಮಾಡಿದರೂ ಯಶವಂತಪುರ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಯನ್ನು ಅಖೈರು ಮಾಡಿಲ್ಲ. ಇಲ್ಲಿ ಕಾಂಗ್ರೆಸ್‌ನಲ್ಲಿದ್ದ ಎಸ್.ಟಿ. ಸೋಮಶೇಖರ್ ಬಿಜೆಪಿಗೆ ಹೋಗಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಆಪ್ತ ರಾಜಕುಮಾರ್ ನಾಯ್ಡು ಅಥವಾ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಪುತ್ರ ಪ್ರಿಯಾಕೃಷ್ಣ ನಡುವೆ ಪೈಪೋಟಿ ಇದೆ. ಒಕ್ಕಲಿಗ ಮುಖಂಡರು ಪ್ರಿಯಾಕೃಷ್ಣ ಅವರಿಗೇ ಟಿಕೆಟ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಇದಕ್ಕೆ ಪ್ರಿಯಾಕೃಷ್ಣ ತಂದೆ ಕೃಷ್ಣಪ್ಪ ಒಪ್ಪುತ್ತಿಲ್ಲ. ಹೀಗಾಗಿ ಈ ಕ್ಷೇತ್ರವೊಂದನ್ನು ಹೈಕಮಾಂಡ್ ಬಾಕಿ ಉಳಿಸಿಕೊಂಡಿದೆ. ಉಸ್ತುವಾರಿಗಳ ನೇಮಕ
ಉಪ ಚುನಾವಣೆಗೆ ಕಾಂಗ್ರೆಸ್ ಉಸ್ತುವಾರಿಗಳನ್ನು ನಿಯೋಜಿಸಿದ್ದು, ಶಿವಾಜಿನಗರಕ್ಕೆ ಮಾಜಿ ಸಚಿವ ಯು.ಟಿ. ಖಾದರ್, ಮಹಾಲಕ್ಷ್ಮಿ ಲೇ ಔಟ್‌ಗೆ ಎಚ್.ಎಂ. ರೇವಣ್ಣ, ಗೋಕಾಕ್‌ಗೆ ಸತೀಶ ಜಾರಕಿಹೊಳಿ ಅವರಿಗೆ ಹೊಣೆ ನೀಡಲಾಗಿದೆ. ಉಳಿದಂತೆ ಯಶವಂತಪುರ- ಎಂ.ಕೃಷ್ಣಪ್ಪ, ಹುಣಸೂರು-ಡಾ.ಎಚ್.ಸಿ.ಮಹದೇವಪ್ಪ, ಕೆ.ಆರ್.ಪುರ- ಚೆಲುವರಾಯಸ್ವಾಮಿ, ಹೊಸಕೋಟೆ- ಕೃಷ್ಣ ಬೈರೇಗೌಡ, ಕೆ.ಆರ್. ಪೇಟೆ- ಕೆ.ಜೆ.ಜಾರ್ಜ್, ಕಾಗವಾಡ- ಈಶ್ವರ್ ಖಂಡ್ರೆ, ಯಲ್ಲಾಪುರ- ಆರ್.ವಿ.ದೇಶಪಾಂಡೆ, ಹಿರೆಕೇರೂರು- ಎಚ್.ಕೆ.ಪಾಟೀಲ್, ರಾಣೆ ಬೆನ್ನೂರು- ಎಸ್.ಆರ್. ಪಾಟೀಲ್, ವಿಜಯನಗರ- ಬಸವರಾಜ ರಾಯರೆಡ್ಡಿ, ಚಿಕ್ಕಬಳ್ಳಾಪುರ- ಶಿವಶಂಕರರೆಡ್ಡಿ, ಅಥಣಿ-ಎಂ.ಬಿ.ಪಾಟೀಲ್. ಪ್ರತಿ ಕ್ಷೇತ್ರಕ್ಕೆ ಮೇಲ್ಕಂಡ ನಾಯಕರ ನೇತೃತ್ವದಲ್ಲಿ 19ರಿಂದ 20 ಮಂದಿ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು ಮತ್ತು ಮಾಜಿ ಶಾಸಕ ಮತ್ತು ಸಂಸದರನ್ನು ಒಳಗೊಂಡ ತಂಡವನ್ನು ನೇಮಕ ಮಾಡಲಾಗಿದೆ.