ಮಸ್ಕಿ: ಉಪಚುನಾವಣೆ ಯಾವುದೇ ಕ್ಷಣದಲ್ಲೂ ಘೋಷಣೆ ಮುನ್ಸೂಚನೆ ಇರುವುದರಿಂದ ಪ್ರಚಾರ ಉಸ್ತುವಾರಿ ಹೊತ್ತ ಕೈ, ಕಮಲ ನಾಯಕರಿಗೆ ಈಗಿನಿಂದಲೇ ವಾಸ್ತವ್ಯಕ್ಕೆ ಮನೆ ಹುಡುಕಾಟ ಆರಂಭವಾಗಿದೆ!. ಬಿಜೆಪಿಯಲ್ಲಿ ಈ ರೀತಿ ವಾಸ್ತವ್ಯದ ಹುಡುಕಾಟ ತೀವ್ರ ಚುರುಕಾಗಿದೆ. ಈಗಾಗಲೇ ಮಸ್ಕಿ ವಿಧಾನಸಭೆ ಉಪಚುನಾವಣೆಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಹಾಗೂ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರನ್ನು ಮುಖ್ಯ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ನೇಮಕದ ಬೆನ್ನಲ್ಲೇ ಶ್ರೀರಾಮುಲು ಮೊದಲ ಸುತ್ತಿನಲ್ಲಿ ಮಸ್ಕಿಗೆ ಬಂದು ವಾಪಸ್ಸಾಗಿದ್ದು, ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ಕೋರ್ ಕಮಿಟಿಯಲ್ಲೂ ಉಸ್ತುವಾರಿ ವಹಿಸಿಕೊಂಡ ಎಲ್ಲರೂ ಮಸ್ಕಿಯತ್ತ ಮುಖ ಮಾಡಿ ಎನ್ನುವ ಸೂಚನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿಗರು ಉಸ್ತುವಾರಿಗಳಿಗಾಗಿ ಮನೆ ಶೋಧ ನಡೆಸಿದ್ದಾರೆ. ಬಿ. ಶ್ರೀರಾಮುಲು ಅವರಿಗೆ ಮಸ್ಕಿ-ಸಿಂಧನೂರು ರಸ್ತೆ ಮಾರ್ಗದ ಪಗಡದಿನ್ನಿ ಕ್ಯಾಂಪ್ ಅಥವಾ ಸಿಂಧನೂರಿನಲ್ಲೇ ಮನೆಯೊಂದರಲ್ಲಿ ವಾಸ್ತವ್ಯಕ್ಕೆ ಚಿಂತನೆ ನಡೆದಿದೆ. ಇನ್ನು ಬಿ.ವೈ. ವಿಜಯೇಂದ್ರ ಅವರಿಗೆ ಮಸ್ಕಿ ಪಟ್ಟಣದ ಹೊರ ವಲಯದಲ್ಲಿರುವ ವೈದ್ಯರೊಬ್ಬರ ತೋಟದ ಮನೆಯೇ ವಾಸ್ತವ್ಯಕ್ಕೆ ನೀಡಲು ಬಿಜೆಪಿ ಮುಖಂಡರು ಚಿಂತನೆ ನಡೆಸಿದ್ದಾರೆ.
ಹೋಟೆಲ್ ಬುಕ್: ಇನ್ನು ಇದು ಮಾತ್ರವಲ್ಲದೇ ಸಹ ಉಸ್ತುವಾರಿಗಳಾಗಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರಾದ ರಾಜುಗೌಡ, ಡಾ| ಶಿವರಾಜ ಪಾಟೀಲ್‌ರಿಗೂ ಸಿಂಧನೂರಿನ ಖಾಸಗಿಯ ಪ್ರತಿಷ್ಠಿತ ಹೋಟೆಲ್‌ನಲ್ಲಿ ರೂಂ ವ್ಯವಸ್ಥೆ ಮಾಡಲು ಬಿಜೆಪಿ ಮುಖಂಡರು ಅಣಿಯಾಗಿದ್ದಾರೆ. ಇದಕ್ಕಾಗಿ ಸಿಂಧನೂರಿನಲ್ಲಿರುವ ಸ್ಟಾರ್ ಹೋಟೆಲ್‌ವೊಂದರಲ್ಲಿ 30ಕ್ಕೂ ಹೆಚ್ಚು ರೂಂಗಳನ್ನು ಈಗಾಗಲೇ ಬಿಜೆಪಿ ಬುಕ್ಕಿಂಗ್ ಮಾಡಿದೆ ಎನ್ನುತ್ತವೆ ಮೂಲಗಳು. ಇದರ ಜತೆಗೆ ಹೆಚ್ಚುವರಿಯಾಗಿ ಬರುವ ಮಂತ್ರಿಗಳು, ಶಾಸಕರು, ಮಾಜಿ ಶಾಸಕರಿಗೆ ಮಸ್ಕಿ ಪಟ್ಟಣದಲ್ಲಿಯೇ ಸುಸಜ್ಜಿತ ಮನೆಗಳನ್ನು ಬಾಡಿಗೆ ಪಡೆಯುವ ಕಾರ್ಯವೂ ನಡೆದಿದೆ.
ಇಲ್ಲೂ ತಲಾಶ್: ಕೇವಲ ಬಿಜೆಪಿ ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷದಲ್ಲೂ ಈಗ ವಾಸ್ತವ್ಯದ ಚಿಂತೆ ಶುರುವಾಗಿದೆ. ಈ ಹಿಂದೆ ಚುನಾವಣೆ ಘೋಷಣೆ ವೇಳೆಗೆ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಭೋಸರಾಜು ಪಾಮನಕಲ್ಲೂರಿನಲ್ಲಿ, ಶಾಸಕ ಅಮರೇಗೌಡ ಬಯ್ನಾಪೂರ ಸಂತೆಕಲ್ಲೂರಿನಲ್ಲಿ ಹಾಗೂ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತುರುವಿಹಾಳದಲ್ಲಿ ವಾಸ್ತವ್ಯ ಹೂಡಲು ಮನೆಗಳನ್ನು ಗುರುತು ಮಾಡಲಾಗಿತ್ತು. ಈಗ ಅದೇ ಕಾರ್ಯವೇ ಮುನ್ನೆಲೆಗೆ ಬಂದಿದೆ. ಇದು ಮಾತ್ರವಲ್ಲದೇ ಚುನಾವಣೆ ಉಸ್ತುವಾರಿ ಹೊತ್ತು ಬರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಸತೀಶ ಜಾರಕಿಹೊಳಿ ಸೇರಿ ಇತರೆ ನಾಯಕರಿಗೆ ಸಿಂಧನೂರಿನಲ್ಲಿಯೇ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಲಾಗುತ್ತಿದೆ.
ಒಟ್ಟಿನಲ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆ ಸಾಧ್ಯತೆ ಹಿನ್ನೆಲೆಯಲ್ಲಿ ಈಗಿನಿಂದಲೇ ಎರಡು ಪಕ್ಷದ ಮುಖಂಡರು
ಉಳಿದುಕೊಳ್ಳಲು, ರಾಜಕೀಯ ತಂತ್ರ ನಡೆಸಲು ಸ್ಥಳಗಳನ್ನು ಈಗಲೇ ಗುರುತು ಮಾಡುತ್ತಿರುವುದು ವಿಶೇಷ.
ಸಿಂಧನೂರು ಕೇಂದ್ರ
ಮಸ್ಕಿಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಸ್ಟಾರ್ ಹೋಟೆಲ್‌ಗಳಿಲ್ಲ. ವಿಐಪಿ ಸೌಲಭ್ಯ ಹೊಂದಿದ ಲಾಡ್ಜ್ ಗಳ ಕೊರತೆಯೂ ಇರುವುದರಿಂದ ಈಗ ಮಸ್ಕಿಯಲ್ಲಿ ಬೈ ಎಲೆಕ್ಷನ್ ನಡೆದರೆ ರಾಜಕೀಯ ನಾಯಕರ ದಂಡಿಗೆ ವಾಸ್ತವ್ಯಕ್ಕೆ ಕೇಂದ್ರ ಸ್ಥಾನ ಮಾತ್ರ ಸಿಂಧನೂರು ಆಗಲಿದೆ. ಇದಕ್ಕಾಗಿಯೇ ಎರಡು ಪಕ್ಷದ ನಾಯಕರಿಗೆ ಅಲ್ಲಿನ ಸ್ಟಾರ್ ಹೋಟೆಲ್ ಗಳಲ್ಲಿ ರೂಂಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗುತ್ತಿದೆ. ಮಸ್ಕಿಯಲ್ಲಿ ಚುನಾವಣೆ ನಡೆದರೆ, ಸಿಂಧನೂರಿನಲ್ಲೂ ಈಗ ರಾಜಕೀಯ ಚಟುವಟಿಕೆಗಳು ಜೋರಾಗಿ ನಡೆಯುವುದಂತು ನಿಶ್ಚಿತ ಎನಿಸಿದೆ.
*ಮಲ್ಲಿಕಾರ್ಜುನ ಚಿಲ್ಕರಾಗಿ