Advertisement

ಜನತಾ ಕೋರ್ಟ್‌ನಲ್ಲಿ ಅನರ್ಹರ ಪರೀಕ್ಷೆ

12:56 AM Dec 05, 2019 | Team Udayavani |

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಮತದಾನ ನಡೆಯಲಿದೆ. ಸುಪ್ರೀಂಕೋರ್ಟ್‌ನಿಂದ “ಅನರ್ಹರು’ ಎಂದು ಹೇಳಿಸಿಕೊಂಡು, “ಜನತಾ ನ್ಯಾಯಾಲಯದಲ್ಲಿ’ ತಮ್ಮ ಅರ್ಹತೆಯನ್ನು ಪರೀಕ್ಷೆಗೊಳಪಡಿಸಿರುವ 13 ಮಂದಿ ಅನರ್ಹ ಶಾಸಕರು ಸೇರಿದಂತೆ 165 ರಣಕಲಿಗಳ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ.

Advertisement

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಪತನಕ್ಕೆ ಮುಂದಾಳತ್ವ ವಹಿಸಿಕೊಂಡಿದ್ದವರು ಎನ್ನಲಾದ ರಮೇಶ್‌ ಜಾರಕಿಹೊಳಿ, ಎಚ್‌. ವಿಶ್ವನಾಥ್‌ ಸೇರಿದಂತೆ 13 ಮಂದಿ ಅನರ್ಹ ಶಾಸಕರನ್ನು ಒಳಗೊಂಡಂತೆ ಕಾಂಗ್ರೆಸ್‌ ಹಾಗೂ ಬಿಜೆಪಿಯ ತಲಾ 15 ಹಾಗೂ ಜೆಡಿಎಸ್‌ನ 12 ಅಭ್ಯರ್ಥಿಗಳು ಸೇರಿದಂತೆ ಒಟ್ಟು 165 ಹುರಿಯಾಳುಗಳ ರಾಜಕೀಯ ಭವಿಷ್ಯವನ್ನು 37.82 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ. ಗೋಕಾಕ್‌, ಹಿರೇಕೆರೂರು, ವಿಜಯನಗರ, ಯಶವಂತಪುರ, ಕೆ.ಆರ್‌. ಪುರಂ, ಹೊಸಕೋಟೆ, ಹುಣಸೂರು ಸೇರಿದಂತೆ 15 ಕ್ಷೇತ್ರಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 6ಗಂಟೆ ವರೆಗೆ ಮತದಾನ ನಡೆಯಲಿದ್ದು, ಒಟ್ಟು 4,185 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 884 ಮತಗಟ್ಟೆಗಳನ್ನು ಸೂಕ್ಷ್ಮಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಇಲ್ಲಿ ಕಾನೂನು-ಸುವ್ಯವಸ್ಥೆ ಹಾಗೂ
ಚುನಾವಣಾ ನೀತಿ ಸಂಹಿತೆ ಜಾರಿ ದೃಷ್ಟಿಯಿಂದ ವಿಶೇಷ ವ್ಯವಸ್ಥೆ ಮಾಡಿದೆ.

ಮತದಾನ ಮಾಡಬೇಕಿರುವ 37.82 ಲಕ್ಷ ಮತದಾರರ ಪೈಕಿ 19.25 ಲಕ್ಷ ಪುರುಷರು, 18.52 ಲಕ್ಷ ಮಹಿಳೆಯರು, 414 ಇತರರು, 79 ಸಾವಿರ ಯುವ ಮತದಾರರು, 4,711 ಸರ್ವಿಸ್‌
ಮತದಾರರು, 24, 744 ವಿಕಲಚೇತನ ಮತದಾರರು ಇದ್ದಾರೆ. ಗೋಕಾಕ್‌ ಮತ್ತು ವಿಜಯನಗರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗೋಕಾಕ್‌ನಲ್ಲಿ 1.20 ಲಕ್ಷ ಪುರುಷ ಮತದಾರರು ಇದ್ದರೆ, ಮಹಿಳಾ ಮತದಾರರ ಸಂಖ್ಯೆ 1.23 ಲಕ್ಷ
ಇದೆ. ಅದೇ ರೀತಿ, ವಿಜಯನಗರ ಕ್ಷೇತ್ರದಲ್ಲಿ 1.16 ಲಕ್ಷ ಪುರುಷರು, 1.20 ಲಕ್ಷ ಮಹಿಳೆಯರು ಇದ್ದಾರೆ.
ಚಿಕ್ಕಬಳ್ಳಾಪುರದಲ್ಲಿ 99 ಸಾವಿರ ಪುರುಷರು 1 ಲಕ್ಷ ಮಹಿಳಾ ಮತದಾರರು ಇದ್ದಾರೆ.

42 ಸಾವಿರ ಚುನಾವಣಾ ಸಿಬ್ಬಂದಿ: ಚುನಾವಣೆ ಹಾಗೂ ಮತದಾನ ಪ್ರಕ್ರಿಯೆಗೆ 19, 299 ಮತದಾನ ಸಿಬ್ಬಂದಿ, 1,696 ನೀತಿ ಸಂಹಿತೆ ಜಾರಿ ಸಿಬ್ಬಂದಿ, 900 ಮೈಕ್ರೋ ಅಬ್ಸರ್ವರ್‌, 11,241 ರಾಜ್ಯ ಪೊಲೀಸ್‌ ಸಿಬ್ಬಂದಿ, 2,511 ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ ಸೇರಿದಂತೆ ಚುನಾವಣಾ ಕರ್ತವ್ಯಕ್ಕೆ 42,509 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು, 320 ಚುನಾವಣಾ ನೀತಿ ಸಂಹಿತೆ ಜಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೆ, ಯಲ್ಲಾಪುರದಲ್ಲಿ ಅತಿ ಹೆಚ್ಚು 1,344
ರಾಜ್ಯ ಪೊಲೀಸ್‌ ಸಿಬ್ಬಂದಿ, ಯಶವಂತಪುರದಲ್ಲಿ ಅತಿ ಹೆಚ್ಚು 363 ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯನ್ನು
ನಿಯೋಜಿಸಲಾಗಿದೆ.

79 ಸಾವಿರ ಯುವ ಮತದಾರರು
15 ಕ್ಷೇತ್ರಗಳಲ್ಲಿ ಒಟ್ಟು 37.82 ಲಕ್ಷ ಮತದಾರರಿದ್ದು, ಈ ಪೈಕಿ 79, 714 ಯುವ ಮತದಾರರು (18 ಮತ್ತು 19 ವರ್ಷದ) ಇದ್ದಾರೆ. ಇದರಲ್ಲಿ ಅತಿ ಹೆಚ್ಚು 7,575 ಯುವ ಮತದಾರರು ಯಶವಂತಪುರ ಕ್ಷೇತ್ರದಲ್ಲಿದ್ದರೆ, ಶಿವಾಜಿನಗರದಲ್ಲಿ ಅತಿ ಕಡಿಮೆ 2,562 ಯುವ ಮತದಾರರು ಇದ್ದಾರೆ.

Advertisement

ಮತದಾನಕ್ಕೆ ಪರ್ಯಾಯ ದಾಖಲೆಗಳು
ಮತದಾರರ ಗುರುತಿನ ಚೀಟಿ (ಎಪಿಕ್‌ ಕಾರ್ಡ್‌) ಇಲ್ಲದಿದ್ದರೆ ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್‌, ಸರ್ಕಾರದ ಇಲಾಖೆಗಳು ನೀಡುವ ಸೇವಾ ಗುರುತಿನ ಚೀಟಿ, ಬ್ಯಾಂಕ್‌ ಅಥವಾ ಪೋಸ್ಟ್‌ ಆμàಸ್‌ ಪಾಸ್‌ ಬುಕ್‌, ಪ್ಯಾನ್‌ ಕಾರ್ಡ್‌, ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಡಿ ರಿಜಿಸ್ಟ್ರಾರ್‌ ಜನರಲ್‌ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ಸ್ಮಾರ್ಟ್‌ ಕಾರ್ಡ್‌, ನರೇಗಾ ಜಾಬ್‌ ಕಾರ್ಡ್‌, ಆರೋಗ್ಯ
ವಿಮಾ ಯೋಜನೆಗಳ ಸ್ಮಾರ್ಟ್‌ ಕಾರ್ಡ್‌, ಫೋಟೋಸಹಿತ ಪಿಂಚಣಿ ದಾಖಲೆ, ಶಾಸಕರು, ಸಂಸದರಿಗೆ ನೀಡಲಾಗುವ ಗುರುತಿನ ಚೀಟಿ ಮತ್ತು ಆಧಾರ್‌ ಕಾರ್ಡ್‌ ಹಾಜರುಪಡಿಸಿ ಓಟ್‌ ಹಾಕಬೇಕು. ಆದರೆ, ಇದಕ್ಕಾಗಿ ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಹೆಸರು ಇರಬೇಕು.

ಎಂ-3 ಇವಿಎಂ ಬಳಕೆ
ಚುನಾವಣೆ ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳಲ್ಲಿ ಎಂ-3 ಇವಿಎಂಗಳನ್ನು ಬಳಸಲಾಗುತ್ತಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಎಂ-3 ಇವಿಎಂಗಳನ್ನು ಬಳಸುತ್ತಿರುವುದು ರಾಜ್ಯದಲ್ಲಿ ಇದೇ
ಮೊದಲು. 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ
ಪ್ರಾಯೋಗಿಕವಾಗಿ ಬಳಸಲಾಗಿತ್ತು. ಈ ಉಪ ಚುನಾವಣೆಯಲ್ಲಿ ತಲಾ 8,370 ಕಂಟ್ರೋಲ್‌ ಯೂನಿಟ್‌,
ಬ್ಯಾಲೆಟ್‌ ಯೂನಿಟ್‌ (ಇವಿಎಂ) ಹಾಗೂ ವಿವಿಪ್ಯಾಟ್‌ ಬಳಸಲಾಗುತ್ತಿದೆ.

884 ಸೂಕ್ಷ್ಮ ಮತಗಟ್ಟೆಗಳು
15 ಕ್ಷೇತ್ರಗಳಲ್ಲಿನ 4,185 ಮತಗಟ್ಟೆಗಳ ಪೈಕಿ 884 ಮತಗಟ್ಟೆಗಳನ್ನು ಸೂಕ್ಷ್ಮಮತಗಟ್ಟೆಗಳೆಂದು
ಗುರುತಿಸಲಾಗಿದೆ. ಇದರಲ್ಲಿ 414 ಮತಗಟ್ಟೆಗಳಲ್ಲಿ ಕೇಂದ್ರ ಸಶಸOಉ ಪೊಲೀಸ್‌ ಪಡೆ ನಿಯೋಜಿಸಲಾಗಿದ್ದರೆ, 805 ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್‌ಗಳನ್ನು ನಿಯುಕ್ತಿಗೊಳಿಸಲಾಗಿದೆ. 206ರಲ್ಲಿ ವೆಬ್‌ ಕ್ಯಾಮರಾ ಮತ್ತು 259 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫ‌ರ್‌ಗಳನ್ನು ನಿಯೋಜಿಸಲಾಗಿದೆ.

ಯಾವೊಬ್ಬ ಮತದಾರನೂ ತನ್ನ ಹಕ್ಕಿನಿಂದ ವಂಚಿತನಾಗಬಾರದು ಎಂಬುದು ಚುನಾವಣಾ
ಆಯೋಗದ ಆಶಯ. ಮತದಾನ ಪ್ರತಿಯೊಬ್ಬ ಪ್ರಜೆ ಹಾಗೂ ಅರ್ಹ ಮತದಾರನ ಹಕ್ಕು, ಕರ್ತವ್ಯ ಹಾಗೂ
ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಿ. ಯಾವುದೇ ಆಮಿಷ, ಒತ್ತಡ ಅಥವಾ ಬೆದರಿಕೆಗಳಿಗೆ ಒಳಗಾಗದೆ ನಿರ್ಭೀತ, ಮುಕ್ತವಾಗಿ ಮತ ಚಲಾಯಿಸಬೇಕು. ನೂರಕ್ಕೆ ನೂರು ಮತದಾನ ಆಗಬೇಕು ಎಂಬುದು ನಮ್ಮ ಮನವಿ.
● ಸಂಜೀವ್‌ ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next