ಹೊಸದಿಲ್ಲಿ: ಭಾರತದ ಶಟ್ಲರ್ ಎಚ್.ಎಸ್. ಪ್ರಣಯ್ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ರ್‍ಯಾಂಕಿಂಗ್ ಯಾದಿಯಲ್ಲಿ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ.
2022ರ ಜನವರಿ 11ರಿಂದ ಮೊದಲ್ಗೊಳ್ಳುವ ರ್‍ಯಾಂಕಿಂಗ್ ಅವಧಿಯಲ್ಲಿ ಒಟ್ಟು 22 ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಆಯೋಜಿಸಲಾಗುವುದು. ಇದು ಡಿಸೆಂಬರ್ ತನಕ ಮುಂದುವರಿಯಲಿದೆ. ಇವನ್ನು ಒಟ್ಟು 5 ಲೆವೆಲ್‌ಗಳಾಗಿ ವಿಂಗಡಿಸಲಾಗಿದೆ.
ಅಗ್ರಸ್ಥಾನದಲ್ಲಿರುವುದು ವರ್ಲ್ಡ್ ಟೂರ್ ಫೈನಲ್. ಬಳಿಕ ಸೂಪರ್-1000, ಸೂಪರ್-750, ಸೂಪರ್-500 ಮತ್ತು ಸೂಪರ್-300 ಹಂತದ ಸ್ಪರ್ಧೆಗಳಿರುತ್ತವೆ. ಇವೆಲ್ಲವೂ ಬೇರೆ ಬೇರೆ ಮೊತ್ತದ ಬಹುಮಾನ ಹಾಗೂ ರ್‍ಯಾಂಕಿಂಗ್ ಅಂಕವನ್ನು ಹೊಂದಿರುತ್ತವೆ.
ಪ್ರಣಯ್ ಸಾಧನೆ
ಎಚ್.ಎಸ್. ಪ್ರಣಯ್ ಜನವರಿಯಲ್ಲಿ ನಡೆದ ಇಂಡಿಯಾ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪುವ ಮೂಲಕ ಈ ವರ್ಷದ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಆರಂಭಿಸಿದ್ದರು. ಬಳಿಕ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್‌ನಲ್ಲೂ ಕ್ವಾರ್ಟರ್ ಫೈನಲ್‌ನಲ್ಲಿ ಹೋರಾಟ ಮುಗಿಸಿದ್ದರು.
ಜರ್ಮನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್, ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್‌ನಲ್ಲಿ ಮೊದಲ ಸುತ್ತು, ಸ್ವಿಸ್ ಓಪನ್‌ನಲ್ಲಿ ರನ್ನರ್ ಅಪ್, ಕೊರಿಯಾ ಓಪನ್ ಮತ್ತು ಥಾಯ್ಲೆಂಡ್ ಓಪನ್‌ನಲ್ಲಿ ಮೊದಲ ಸುತ್ತು, ಇಂಡೋನೇಷ್ಯಾ ಓಪನ್‌ನಲ್ಲಿ ಸೆಮಿಫೈನಲ್, ಮಲೇಷ್ಯಾ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್, ಮಲೇಷ್ಯಾ ಮಾಸ್ಟರ್ನಲ್ಲಿ ಸೆಮಿಫೈನಲ್, ಸಿಂಗಾಪುರ್ ಓಪನ್ ಹಾಗೂ ಜಪಾನ್ ಓಪನ್‌ನಲ್ಲಿ ಪ್ರಣಯ್ ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ್ದರು.