ಬಾಲಿ (ಇಂಡೋನೇಶ್ಯ): ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಕೂಟದ ನಾಕೌಟ್ ಪ್ರವೇಶಿಸಿದ್ದಾರೆ. ಆದರೆ ಗ್ರೂಪ್ ಹಂತದ ದ್ವಿತೀಯ ಪಂದ್ಯದಲ್ಲಿ ಸೋಲನುಭವಿಸಿದ ಕೆ. ಶ್ರೀಕಾಂತ್ ಮುನ್ನಡೆ ಖಾತ್ರಿಯಾಗಿಲ್ಲ.
ಕಳೆದ ವರ್ಷದ ಫೈನಲಿಸ್ಟ್ ಆಗಿರುವ ಪಿ.ವಿ. ಸಿಂಧು ಗುರುವಾರದ ಗ್ರೂಪ್ ಮುಖಾಮುಖೀಯಲ್ಲಿ ಜರ್ಮನಿಯ ವ್ಯೋನ್ ಲೀ ಅವರನ್ನು 21-10, 21-13 ನೇರ ಗೇಮ್‌ಗಳಲ್ಲಿ ಮಣಿಸಿ ಸತತ 2ನೇ ಗೆಲುವು ಸಾಧಿಸಿದರು. ಕೊನೆಯ ಗ್ರೂಪ್ ಪಂದ್ಯದಲ್ಲಿ ಅವರು ಅಗ್ರ ಶ್ರೇಯಾಂಕದ ಥಾಯ್ಲೆಂಡ್‌ನ ಪೋರ್ಣಪವೀ ಚೊಚುವಾಂಗ್ ಅವರನ್ನು ಎದುರಿಸಲಿದ್ದಾರೆ.
ಗ್ರೂಪ್ “ಎ’ ವಿಭಾಗದಲ್ಲಿ ಲಕ್ಷ್ಯ ಸೇನ್ ಒಲಿಂಪಿಕ್ಸ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ಅವರೆದುರು 15-21, 14-21 ಅಂತರದ ಸೋಲನುಭವಿಸಿಯೂ ಮುನ್ನಡೆಯುವಲ್ಲಿ ಯಶಸ್ವಿಯಾಗಿದ್ದಾರೆ. “ಎ’ ವಿಭಾಗದ ಮತ್ತಿಬ್ಬರು ಆಟಗಾರರಾದ ಕೆಂಟೊ ಮೊಮೊಟ ಮತ್ತು ರಾಸ್ಮಸ್ ಗಾಯಾಳಾಗಿ ಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದರಿಂದ ಲಕ್ಷ್ಯ ಸೇನ್ ನಾಕೌಟ್ ಪ್ರವೇಶ ಸುಲಭಗೊಂಡಿತು. ಅವರೀಗ ಗ್ರೂಪ್ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ.
ಇದನ್ನೂ ಓದಿ:ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?
“ಬಿ’ ವಿಭಾಗದ ದ್ವಿತೀಯ ಪಂದ್ಯದಲ್ಲಿ ಕೆ. ಶ್ರೀಕಾಂತ್ ಅವರನ್ನು 3 ಬಾರಿಯ ಜೂನಿಯರ್ ವಿಶ್ವ ಚಾಂಪಿಯನ್ ಕುನ್ಲವುತ್ ವಿತಿದ್ಸರಣ್ 21-18, 21-7 ಅಂತರದಿಂದ ಮಣಿಸಿದರು.
ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಕೂಟದಿಂದ ಹಿಂದೆ ಸರಿದಿದೆ. ರಾಂಕಿರೆಡ್ಡಿ ಗಾಯಾಳಾದುದೇ ಇದಕ್ಕೆ ಕಾರಣ.