ನವದೆಹಲಿ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ಥಾಮಸ್ ಕಪ್ ವಿಜೇತ ಎಚ್.ಎಸ್.ಪ್ರಣಯ್ ಬಿಡಬ್ಲ್ಯುಎಫ್ ನೂತನ ಬ್ಯಾಡ್ಮಿಂಟನ್ ವಿಶ್ವ ರ್‍ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನಕ್ಕೇರಿದ್ದಾರೆ. ಸಿಂದು ಅಗ್ರ ಐದರೊಳಗಿನ ಹಾಗೂ ಪ್ರಣಯ್ 12ನೇ ಸ್ಥಾನ ಪಡೆದಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಕಳೆದ ಕಾಮನ್‌ವೆಲ್ತ್ ಗೇಮ್ಸ್ ಬಳಿಕ ಯಾವುದೇ ಕೂಟಗಳಲ್ಲಿ ಆಡದ ಸಿಂಧು ಸದ್ಯ 87,218 ಅಂಕ ಹೊಂದಿದ್ದು ಐದನೇ ಸ್ಥಾನ ಪಡೆದಿದ್ದಾರೆ. ಮಾಜಿ ವಿಶ್ವದ ಎರಡನೇ ರ್‍ಯಾಂಕಿನ ಆಟಗಾರ್ತಿಯಾಗಿದ್ದ ಸಿಂಧು ಮೂರು ವರ್ಷಗಳ ಬಳಿಕ ಅಗ್ರ ಐದರೊಳಗಿನ ಸ್ಥಾನಕ್ಕೇರಿದ್ದಾರೆ.
ಗಾಯದಿಂದ ಚೇತರಿಸಿಕೊಂಡಿರುವ ಸಿಂಧು ಸೋಮವಾರದಿಂದ ತರಬೇತಿ ಆರಂಭಿಸಿದ್ದಾರೆ. ಡೆನ್ಮಾರ್ಕ್ ಓಪನ್ ಕೂಟದಲ್ಲಿ ಪ್ರೀ-ಕ್ವಾರ್ಟರ್‌ಫೈನಲ್ ತಲುಪಿದ್ದ ಪ್ರಣಯ್ ರ್‍ಯಾಂಕಿಂಗ್‌ನಲ್ಲಿ ತಮ್ಮ ಸ್ಥಾನವನ್ನು ಉತ್ತಮಪಡಿಸಿಕೊಂಡು ಬರುತ್ತಿದ್ದಾರೆ. ಸದ್ಯ ಅವರು 12ನೇ ರ್‍ಯಾಂಕ್‌ನಲ್ಲಿದ್ದರೆ ಲಕ್ಷ್ಯ ಸೇನ್ (8ನೇ) ಮತ್ತು ಕಿದಂಬಿ ಶ್ರೀಕಾಂತ್ (11ನೇ) ಅವರ ರ್‍ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಡಬಲ್ಸ್‌ನಲ್ಲಿ ಎಂ.ಆರ್.ಅರ್ಜುನ್ ಮತ್ತು ಧ್ರುವ್ ಕಪಿಲ ಎರಡು ಸ್ಥಾನ ಮೇಲಕ್ಕೇರಿದ್ದು 19ನೇ ಸ್ಥಾನದಲ್ಲಿದ್ದಾರೆ. ವನಿತೆಯರ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ ಮತ್ತು ಗಾಯತ್ರೀ ಗೋಪಿಚಂದ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಜೀವನಶ್ರೇಷ್ಠ ರ್‍ಯಾಂಕಿಂಗ್ ಸಾಧನೆ ಮಾಡಿದ್ದು ಅನುಕ್ರಮವಾಗಿ 27 ಮತ್ತು 29ನೇ ಸ್ಥಾನದಲ್ಲಿದ್ದಾರೆ. ಆದರೆ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಅವರು ಡಬಲ್ಸ್‌ನಲ್ಲಿ 24ನೇ ಸ್ಥಾನಕ್ಕೆ ಜಾರಿದ್ದಾರೆ. ಸೈನಾ ನೆಹ್ವಾಲ್ ಕೂಡ ಸಿಂಗಲ್ಸ್‌ನಲ್ಲಿ ಒಂದು ಸ್ಥಾನ ಕುಸಿತ ಕಂಡಿದ್ದು 33ನೇ ಸ್ಥಾನದಲ್ಲಿದ್ದಾರೆ.