Advertisement

ಎತ್ತುಗಳ ಖರೀದಿ ಬಲು ಜೋರು

02:43 PM Jun 02, 2022 | Team Udayavani |

ಹಾವೇರಿ: ಕಳೆದೆರಡು ವರ್ಷ ಕೊರೊನಾದಿಂದ ಮುಂಗಾರು ಹಂಗಾಮಿನ ವೇಳೆ ಉಳುಮೆ ಎತ್ತುಗಳ ಖರೀದಿಗೆ ಪರದಾಡಿದ್ದ ರೈತರು, ಈ ಸಲ ಮುಂಗಾರು ಪೂರ್ವದಲ್ಲಿ ಬಿದ್ದಿರುವ ಉತ್ತಮ ಮಳೆಯಿಂದ ಹರ್ಷಗೊಂಡು ಎತ್ತುಗಳ ಖರೀದಿಗೆ ಮುಂದಾಗಿದ್ದಾರೆ.

Advertisement

ಜಿಲ್ಲೆಯಲ್ಲಿ ಉತ್ತಮ ಹದ ಮಳೆಯಾಗಿ ಈಗ ಬಿಡುವು ಕೊಟ್ಟಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈಗ ಮುಂಗಾರು ಪೂರ್ವ ಸಿದ್ಧತೆಗೆ ಅನುಕೂಲವಾಗಿದ್ದು, ರೈತರು ಹೊಲದ ಕಡೆ ಮುಖ ಮಾಡುವಂತೆ ಮಾಡಿದೆ. ಕಳೆದ ಎರಡು ವರ್ಷ ಮುಂಗಾರು ಹಂಗಾಮು ಆರಂಭದ ಸಂದರ್ಭದಲ್ಲಿ ಕೊರೊನಾ ಅಟ್ಟಹಾಸದಿಂದ ರೈತರು ಸೇರಿದಂತೆ ಯಾರೂ ಮನೆಯಿಂದ ಹೊರಗೆ ಬರುವಂತಿರಲಿಲ್ಲ. ಇದರಿಂದ ಉಳುಮೆಗೆ ಎತ್ತುಗಳನ್ನು ಖರೀದಿಸಲು, ಹೈನುಗಾರಿಕೆಗೆ ಆಕಳು, ಎಮ್ಮೆ ಖರೀದಿಗೆ ತೊಂದರೆಯಾಗಿತ್ತು. ಸದ್ಯ ಕೊರೊನಾ ಕಾಟ ದೂರವಾಗಿರುವುದರಿಂದ ರೈತರು ಮುಂಗಾರು ಹಂಗಾಮಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ನಗರದ ಎಪಿಎಂಸಿ ಜಾನುವಾರು ಸಂತೆಗೆ ಜೀವಕಳೆ ಬಂದಂತಾಗಿದ್ದು, ಅಕ್ಕಪಕ್ಕದ ಧಾರವಾಡ, ಗದಗ, ದಾವಣಗೆರೆ, ಬಳ್ಳಾರಿ, ದೂರದ ತೆಲಂಗಾಣ, ಆಂಧ್ರದಿಂದಲೂ ಎತ್ತುಗಳ ಖರೀದಿಗೆ ರೈತರು ಬರುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಉಂಟಾಗಿದೆ. ಅಲ್ಲದೇ, ಜಿಲ್ಲೆಯ ರೈತರ ದನಕರುಗಳಿಗೆ ಭರ್ಜರಿ ದರ ಸಿಗುತ್ತಿದೆ. ಅದೇ ರೀತಿ, ಎತ್ತುಗಳ ದರವೂ ಹೆಚ್ಚಿದ್ದು, ರೈತರು ಚೌಕಾಶಿ ಮಾಡಿ ಖರೀದಿ ಮಾಡುತ್ತಿದ್ದಾರೆ.

ಜಿಲ್ಲೆಯ ರಾಣಿಬೆನ್ನೂರು, ಹಂಸಭಾವಿ, ಅಕ್ಕಿಆಲೂರು ಮತ್ತು ಹಾವೇರಿಯಲ್ಲಿ ಪ್ರತಿ ವಾರ ಜಾನುವಾರು ಸಂತೆ ನಡೆಯುತ್ತದೆ. ಈ ಪೈಕಿ ಹಾವೇರಿ ಸಂತೆ ದೊಡ್ಡಮಟ್ಟದಲ್ಲಿ ನಡೆಯುತ್ತಿದ್ದು, ಕಳೆದ ಎರಡೂ¾ರು ವಾರಗಳಿಂದ ಜಾನುವಾರುಗಳ ಭರ್ಜರಿ ಮಾರಾಟ ನಡೆದಿದೆ. ಎತ್ತುಗಳ ಖರೀದಿ ಮತ್ತು ಮಾರಾಟ ಮಾಡುವ ರೈತರೆಲ್ಲ ಹಾವೇರಿಯತ್ತ ಬರುತ್ತಿದ್ದಾರೆ.

ಸ್ಥಳೀಯ ಹಾನಗಲ್ಲ ರಸ್ತೆಯಲ್ಲಿರುವ ಜಾನುವಾರು ಮಾರುಕಟ್ಟೆ ಆವರಣವೆಲ್ಲ ಭರ್ತಿಯಾಗಿ ಕಿಲೋ ಮೀಟರ್‌ವರೆಗೂ ರಸ್ತೆ ಪಕ್ಕದಲ್ಲೇ ಎತ್ತುಗಳ ಖರೀದಿಯಲ್ಲಿ ರೈತರು ತೊಡಗಿಕೊಳ್ಳುತ್ತಿದ್ದಾರೆ. ಮುಂಗಾರು ಕೃಷಿ ಚಟುವಟಿಕೆ ಇನ್ನೇನು ಶುರುವಾಗಲಿದ್ದು, ಈಗಿನಿಂದಲೇ ಎತ್ತುಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಸುತ್ತಮುತ್ತಲಿನ ಜಿಲ್ಲೆಗಳಿಂದ ಇಲ್ಲಿಗೆ ಎತ್ತುಗಳ ಖರೀದಿಗೆ ಬರುತ್ತಿರುವುದರಿಂದ ಬೇಡಿಕೆ ಹೆಚ್ಚಿದ್ದು, ಎತ್ತುಗಳನ್ನು ಮಾರಾಟ ಮಾಡುವ ರೈತರಿಗೆ ಉತ್ತಮ ದರ ಸಿಗುತ್ತಿದೆ. ಇದರಿಂದ ವಾರದಿಂದ ವಾರಕ್ಕೆ ಜಾನುವಾರು ಮಾರುಕಟ್ಟೆಗೆ ಬರುವ ರೈತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ.

Advertisement

ಯಂತ್ರೋಪಕರಣ ಬಾಡಿಗೆ ದರ ಏರಿಕೆ: ಡೀಸೆಲ್‌ ದರ ಹೆಚ್ಚಾಗಿರುವ ಪರಿಣಾಮ ಯಂತ್ರೋಪಕರಣಗಳ ಬಾಡಿಗೆ ದರವೂ ದುಬಾರಿಯಾಗಿದೆ. ಇದರಿಂದ ಬಡ, ಸಣ್ಣ ಹಿಡುವಳಿದಾರರು ಎತ್ತುಗಳನ್ನೇ ನೆಚ್ಚಿಕೊಳ್ಳುತ್ತಿದ್ದಾರೆ. ದುಬಾರಿ ಬಾಡಿಗೆ ಕೊಟ್ಟು ಯಂತ್ರಗಳ ಮೂಲಕ ಉಳುಮೆ ಮಾಡುವುದಕ್ಕಿಂತ ಎತ್ತುಗಳನ್ನು ಖರೀದಿಸುವುದೇ ವಾಸಿ ಎಂಬ ಅಭಿಪ್ರಾಯಕ್ಕೆ ಬರುತ್ತಿದ್ದಾರೆ. ಈಗ ಕೃಷಿ ಯಂತ್ರೋಪಕರಣಗಳ ಬಾಡಿಗೆ ದರ ದುಪ್ಪಟ್ಟಾಗಿದೆ. ಇದೇ ವೇಳೆ ರಸಗೊಬ್ಬರ, ಬಿತ್ತನೆ ಬೀಜದ ದರವೂ ಹೆಚ್ಚಿರುವುದರಿಂದ ರೈತರು ಎತ್ತುಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಆದ್ದರಿಂದ, ಇಲ್ಲಿಯ ಎಪಿಎಂಸಿ ಜಾನುವಾರು ಸಂತೆಯಲ್ಲಿ ಜನಜಾತ್ರೆಯೇ ಕಂಡುಬರುತ್ತಿದೆ.

ಜಿಲ್ಲೆಯಲ್ಲಿ ಉತ್ತಮ ಹದ ಮಳೆಯಾಗಿ ಈಗ ಮಳೆರಾಯ ಬಿಡುವು ಕೊಟ್ಟಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಬಿತ್ತನೆಗಾಗಿ ಹೊಲ ಸಿದ್ಧಪಡಿಸಿಕೊಳ್ಳಲು ಎತ್ತುಗಳ ಖರೀದಿಗೆ ಬಂದಿದ್ದೇವೆ. ಎತ್ತುಗಳ ಬೆಲೆಯೂ ಹೆಚ್ಚಾಗಿದೆ. ಯಂತ್ರೋಪಕರಣಗಳ ಬಾಡಿಗೆ ದರವೂ ಹೆಚ್ಚಾಗಿದೆ. ಯಂತ್ರೋಪಕರಣಕ್ಕೆ ಬಾಡಿಗೆ ಕೊಟ್ಟು ಕೃಷಿ ಮಾಡಿದ್ರೆ ಏನೂ ಲಾಭ ಆಗಲ್ಲ. ಹೀಗಾಗಿ, ಎತ್ತುಗಳನ್ನು ಖರೀದಿಸುತ್ತಿದ್ದೇವೆ. ಮಂಜಪ್ಪ ಅರಳಿ, ರೈತ

Advertisement

Udayavani is now on Telegram. Click here to join our channel and stay updated with the latest news.

Next