Advertisement

ಕಾರು ಖರೀದಿ ನನ್ನ ತೀರ್ಮಾನವಲ್ಲ:ಎಚ್‌ಡಿಕೆ

06:50 AM Jun 05, 2018 | |

ಬೆಂಗಳೂರು: ನೂತನ ಸಚಿವರ ಬಳಕೆಗೆಂದು ಹೇಳಲಾಗಿರುವ 20 ಹೊಸ ಕಾರುಗಳ ಖರೀದಿ ನನ್ನ ಆದೇಶದಂತೆ ಮಾಡಿದ್ದಲ್ಲ. ಬದಲಿಗೆ ಹಿಂದಿನ ಸರ್ಕಾರದಲ್ಲಿ ವಿಧಾನಸಭೆಯ ಸ್ಪೀಕರ್‌ ಹಾಗೂ ವಿಧಾನಪರಿಷತ್ತಿನ ಸಭಾಪತಿಯವರ ಆದೇಶದಂತೆ ಖರೀದಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Advertisement

ನ್ಯಾಷನಲ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸ ಕಾರುಗಳ ಖರೀದಿ ಬೇಡ ಎಂದು ಆದೇಶ ಹೊರಡಿಸಿದ ಬೆನ್ನಲ್ಲೇ ಶಾಸಕರ ಭವನದಲ್ಲಿ ಹೊಸ ಕಾರುಗಳನ್ನು ನಿಲ್ಲಿಸಿರುವ ವಿಷಯ ಗಮನಕ್ಕೆ ಬಂತು. ಮುಖ್ಯಮಂತ್ರಿ ಆದೇಶಕ್ಕೆ ಬೆಲೆ ಇಲ್ವಾ ಎಂದು ಆಶ್ಚರ್ಯವಾಗಿ ವಾಸ್ತವ ಏನೆಂದು ಪರಿಶೀಲಿಸಿದಾಗ ಈ ಸತ್ಯ ಗೊತ್ತಾಯಿತು ಎಂದರು.

ಅದೇ ರೀತಿ ಬಿಡಿಎಯಿಂದ 20 ಕಾರುಗಳ ಖರೀದಿಯ ಕಡತ ನನ್ನ ಬಳಿ ಬಂದಿತ್ತು. ಅದನ್ನು ತಡೆ ಹಿಡಿದಿದ್ದೇನೆ. ವಿಧಾನಸೌಧದ ಕಚೇರಿ ದುರಸ್ತಿ ಮತ್ತು ನವೀಕರಣದ ಪ್ರಸ್ತಾವನೆಗಳನ್ನು ರಿಜೆಕ್ಟ್ ಮಾಡಿದ್ದೇನೆ. ಸಚಿವರ ವಾಸ ಮಾಡುವ ಅಧಿಕೃತ ಮನೆಗಳ ನವೀಕರಣ ಅಥವಾ ದುರಸ್ತಿ 5 ಲಕ್ಷ ರೂ. ಮಿತಿ ದಾಟಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ. ನನ್ನ ಸರ್ಕಾರದಲ್ಲಿ ನಾನೂ ವಿಶೇಷ ವಿಮಾನ ಬಳಸುವುದಿಲ್ಲ, ಬೇರೆಯವರಿಗೂ ಅದಕ್ಕೆ ಅವಕಾಶ ಇರುವುದಿಲ್ಲ. ಸಾಮಾನ್ಯ ವಿಮಾನದಲ್ಲಿ ದೆಹಲಿಗೆ ಹೋಗಿಬಂದರೆ 70 ಸಾವಿರ ರೂ. ಆಗುತ್ತದೆ. ಅದೇ ವಿಶೇಷ ವಿಮಾನದಲ್ಲಿ 40 ಲಕ್ಷ ವೆಚ್ಚ ಆಗುತ್ತದೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ. ದುಂದು ವೆಚ್ಚ, ಅನಗತ್ಯ ವೆಚ್ಚ ಮತ್ತು ಸೋರಿಕೆ ತಡೆಗಟ್ಟೆ ಸಂಪನ್ಮೂಲ ಕ್ರೂಢೀಕರಿಸುವುದೇ ನನ್ನ ಉದ್ದೇಶ ಎಂದರು.

ಕೇವಲ 54 ಗಂಟೆ ಮುಖ್ಯಮಂತ್ರಿ ಆಗಿದ್ದವರು (ಬಿ.ಎಸ್‌. ಯಡಿಯೂರಪ್ಪ) ಬಾಗಲಕೋಟೆ ಜಿಲ್ಲೆಯ ಇಳಕಲ್‌ ಪಟ್ಟಣಕ್ಕೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮಾಡಿ, ಅದಕ್ಕೆ 13.50 ಲಕ್ಷ ರೂ. ಬಿಲ್‌ ಕ್ಲೇಮ್‌ ಮಾಡಿ ಸರ್ಕಾರಕ್ಕೆ ಕಡತ ಸಲ್ಲಿಸಿದ್ದಾರೆ. ಬಹಳ ಅಂದರೆ 4ರಿಂದ 5 ಲಕ್ಷ ರೂ ಖರ್ಚು ಆಗಬಹುದು. ಆದರೆ, 13.50 ಲಕ್ಷ ರೂ. ಹೇಗೆ ಮತ್ತು ಯಾತಕ್ಕೆ ಖರ್ಚಾಯಿತು ಎಂದು ಷರಾ ಬರೆದು ಫೈಲ್‌ ಪೆಂಡಿಂಗ್‌ ಇಟ್ಟಿದ್ದೇನೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ವಿಚಾರದಲ್ಲಿ ನಾನು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’.
– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next