Advertisement
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆಯೋಜಿಸಿದ್ದ ಈ ವರ್ಷದ ಮೊದಲ “ಮ್ಯಾಂಗೋ ಪಿಕ್ಕಿಂಗ್ ಟೂರಿಸಂ’ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ ಗ್ರಾಮದ ಪ್ರಗತಿಪರ ಮಾವು ಬೆಳೆಗಾರ ರಾಮಚಂದ್ರಶೆಟ್ಟಿ ಅವರ ಮಾವಿನ ತೋಟಕ್ಕೆ ಸುಮಾರು 110 ಗ್ರಾಹಕರನ್ನು ಎರಡು ಬಸ್‌ಗಳಲ್ಲಿ ಕರೆದೊಯ್ಯಲಾಯಿತು.
Related Articles
Advertisement
ಗ್ರಾಹಕರು ದಿಲ್ ಖುಷ್: ತೋಟದಲ್ಲಿಯೇ ತಮಗೆ ಇಷ್ಟವಾದ ಹಣ್ಣು ಕೀಳಲು ಅವಕಾಶ ಸಿಕ್ಕ ಖುಷಿಯಲ್ಲಿದ್ದ ಗ್ರಾಹಕರಿಗೆ ಮಾರುಕಟ್ಟೆ ದರಕ್ಕಿಂತ ಶೇ.10ರಷ್ಟು ಕಡಿಮೆ ದರದಲ್ಲಿ ಮಾವು ಖರೀದಿ ಅವಕಾಶ ಕಲ್ಪಿಸಿದ್ದರಿಂದ ಮತ್ತಷ್ಟು ಖುಷಿಯಾದರು. ಆಲ್ಫಾನ್ಸೊ, ಮಲ್ಲಿಕಾ, ರಸಪುರಿ, ಬಂಗನಪಲ್ಲಿ ಮತ್ತಿತರ ತಳಿಯ ರಸಾಯನಿಕ ಮುಕ್ತ ಹಣ್ಣುಗಳನ್ನು ಖರೀದಿಸಿದರು.
ಪ್ರವಾಸ ತೆರಳಿದ ಪ್ರತಿ ಗ್ರಾಹಕರು ಕನಿಷ್ಠ 6ರಿಂದ 8 ಕೆ.ಜಿ.ಹಣ್ಣು ಖರೀದಿಸುವುದು ಕಡ್ಡಾಯವೆಂಬ ನಿಯಮವಿದ್ದು, ಒಂದೇ ದಿನ ಸುಮಾರು ಒಂದು ಟನ್ ಮಾವು ಮಾರಾಟ ನಡೆಯಿತು. ಜತೆಗೆ ರೈತರೇ ತಮ್ಮ ತೋಟದಲ್ಲಿ ಗ್ರಾಹಕರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಹೀಗಾಗಿ ನಗರದ ಮಂದಿ ತೋಟದಲ್ಲಿ ಮಧ್ಯಾಹ್ನದ ಊಟ ಸವಿಯುವ ಮೂಲಕ ಸಂತಸಪಟ್ಟರು.
ಬುಧವಾರ ರಾಮನಗರಕ್ಕೆ ಕಳೆದ ವರ್ಷ ವಾರಾಂತ್ಯದಲ್ಲಿ ಮಾತ್ರ ಮ್ಯಾಂಗೋ ಪಿಕಿಂಗ್ ಟೂರಿಸಂ ಆಯೋಜಿಸಲಾಗಿತ್ತು. ಆದರೆ ಈ ಬಾರಿ ವಾರದ ದಿನಗಳಲ್ಲೂ ಪ್ರವಾಸಕ್ಕೆ ಬೇಡಿಕೆ ಬಂದಿದೆ. ಹೀಗಾಗಿ ಏ.26ರ ಬುಧವಾರ ರಾಮನಗರದ ತೋಟಕ್ಕೆ ಮ್ಯಾಂಗೊ ಪಿಕ್ಕಿಂಗ್ ಟೂರಿಸಂ ಆಯೋಜಿಸಲಾಗಿದೆ. ಜತೆಗೆ ಶನಿವಾರ ಮತ್ತು ಭಾನುವಾರ (ಏ.29 ಮತ್ತು 30) ರಂದು ಶ್ರೀನಿವಾಸಪುರಕ್ಕೆ ಗ್ರಾಹಕರನ್ನು ಕರೆದೊಯ್ಯುವುದಾಗಿ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಕದಿರೇಗೌಡ ತಿಳಿಸಿದರು. ನೀವೂ ಟೂರಿಗೆ ಹೋಗಬೇಕಾ?
ಮ್ಯಾಂಗೊ ಪಿಕ್ಕಿಂಗ್ ಟೂರಿಸಂ ಜೂನ್‌ವರೆಗೆ ನಡೆಯಲಿದ್ದು, ಆಸಕ್ತ ರೈತರು ತಮ್ಮ ತೋಟಗಳಲ್ಲಿ ಆಯೋಜನೆ ಮಾಡಲು ನಿಗಮಕ್ಕೆ ಕೋರಿಕೆ ಸಲ್ಲಿಸಿದಲ್ಲಿ ಅಂತಹ ತೋಟಗಳಿಗೆ ಗ್ರಾಹಕರನ್ನು ಕರೆತರುವ ವ್ಯವಸ್ಥೆ ಮಾಡಲಾಗುವುದು. ಮ್ಯಾಂಗೋ ಪಿಕ್ಕಿಂಗ್ ಟೂರಿಸಂಗೆ ತೆರಳಲು ಆಸಕ್ತಿ ಇರುವ ಗ್ರಾಹಕರು, ನಿಗಮದ ವೆಬ್‌ಸೈಟ್‌ನಲ್ಲಿ ಯಾವ ದಿನ ಟೂರಿಸಂ ಇದೆ ಎಂಬುದನ್ನು ಖಚಿತಪಡಿಸಿಕೊಂಡು, ಆನ್‌ಲೈನ್ ಮೂಲಕವೇ 100 ರೂ. ಪಾವತಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕು.