Advertisement

ಭತ್ತ ಖರೀದಿಸಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ

05:49 AM May 21, 2020 | Team Udayavani |

ದಾವಣಗೆರೆ: ರೈತರ ಸಂಕಷ್ಟಕ್ಕೆ ರೈಸ್‌ಮಿಲ್‌ ಮಾಲೀಕರು ಸ್ಪಂದಿಸಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ.

Advertisement

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ರೈಸ್‌ಮಿಲ್‌ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈಸ್‌ಮಿಲ್‌ ಮಾಲೀಕರೊಂದಿಗೆ ಜಿಲ್ಲಾಡಳಿತ ಇರಲಿದೆ. ಯಾವುದೇ ರೀತಿಯ ನಷ್ಟ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ನಿಮ್ಮ ಬಗ್ಗೆ ಮುತುವರ್ಜಿ ವಹಿಸಲಿದ್ದು ರೈತರಿಗೆ ನೆರವಾಗಲು ಇದೊಂದು ಒಳ್ಳೆಯ ಅವಕಾಶ ಎಂದರು.

ಜಿಲ್ಲೆಯಲ್ಲಿ ರೈತರು ಸಾಕಷ್ಟು ಪ್ರಮಾಣದಲ್ಲಿ ಭತ್ತ ಬೆಳೆದಿದ್ದಾರೆ. ನಾಲ್ಕೆçದು ರೈಸ್‌ ಮಿಲ್‌ ಮಾಲಿಕರು ರೈತರಿಂದ ಭತ್ತ ಖರೀದಿಗೆ ಮುಂದಾಗಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯು ರೈತರ ಪರವಾಗಿದ್ದು, ಇದರಡಿ ಯಾವುದೇ ರೀತಿ ನಷ್ಟ ಮಾಡಿಕೊಂಡು ಭತ್ತ ಖರೀದಿಸುವ ಅವಶ್ಯಕತೆಯಿಲ್ಲ. ಬದಲಾಗಿ ರೈತರು ಬೆಳೆದಿರುವ ಉತ್ತಮ ಗುಣಮಟ್ಟದ ಭತ್ತವನ್ನೇ ಖರೀದಿಸಿ. ಸಂಕಷ್ಟದ ಸಂದರ್ಭದಲ್ಲಿ ರೈಸ್‌ ಮಿಲ್ಲರ್ಗಳಲ್ಲೇ ಯಾರಾದರೂ ಭತ್ತ ಖರೀದಿಗೆ ಮುಂದಾದರೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೆಸ್ವಾಮಿ ಮಾತನಾಡಿ, ವಿವಿಧ ತಾಲೂಕುಗಳಲ್ಲಿ ಭತ್ತ ಮಾರಾಟಕ್ಕೆ 17 ರೈತರು ನೋಂದಾಯಿಸಿಕೊಂಡಿದ್ದರು. ಲಾಕ್‌ಡೌನ್‌ ಕಾರಣ ಒಂದು ತಿಂಗಳು ಭತ್ತ ಖರೀದಿ ಆಗಿರಲಿಲ್ಲ. ಆದರೆ ಇದೀಗ ಸರ್ಕಾರ ಭತ್ತ ಖರೀದಿಗೆ ಅನುಮತಿ ನೀಡಿದ್ದು, ರೈತರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಹೊನ್ನಾಳಿಯ ನೀಲಕಂಠೇಶ್ವರ ಹಾಗೂ ಮಂಜುನಾಥ್‌ ರೈಸ್‌ ಮಿಲ್‌ ಮತ್ತು ಕುಂಬಳಗೋಡಿನ ಆಂಜನೇಯ ರೈಸ್‌ಮಿಲ್‌ ನವರು ಭತ್ತ ಖರೀದಿಗಾಗಿ ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಭತ್ತ ತುಂಬಾ ಬೆಳೆಯಲಾಗಿದ್ದು, ಬೆಲೆ ಕೂಡ ಕಡಿಮೆಯಾಗಿದೆ. ಭತ್ತ ಖರೀದಿಗೆ ಈ ಭಾಗದ ರೈತರ ಅನುಕೂಲಕ್ಕೆ ಜಿಲ್ಲೆಯಲ್ಲಿ ಕನಿಷ್ಠ 5 ಜನ ರೈಸ್‌ಮಿಲ್‌ ನವರು ಮುಂದಾಗಬೇಕಿದೆ ಎಂದು ಹೇಳಿದರು.

Advertisement

ರೈಸ್‌ ಮಿಲ್‌ ಮಾಲೀಕರ ಸಂಘದ ಅಧ್ಯಕ್ಷ ಕೋಗುಂಡೆ ಬಕ್ಕೇಶಪ್ಪ ಮಾತನಾಡಿ, ಸೋನಾ ಮಸೂರಿ, ಆರ್‌ಎನ್‌ಆರ್‌ ಭತ್ತದ ತಳಿಗಳ ಬೆಲೆ ಜಾಸ್ತಿ ಇರುತ್ತದೆ. ಮಳೆಯಿಂದಾಗಿ ಭತ್ತ ಹಸಿ ಇರಲಿದೆ. ಈ ರೀತಿಯ ಸಂದರ್ಭ ನಮಗೂ ಹೊಸದಾಗಿದೆ. ನಾವೆಲ್ಲರೂ ಚರ್ಚಿಸಿ, ನಿಮಗೆ ಸಹಕಾರ ನೀಡಲಿದ್ದೇವೆ ಎಂದು ತಿಳಿಸಿದರು.

ರೈತ ಕುಂದವಾಡ ಹನುಮಂತಪ್ಪ ಮಾತನಾಡಿ, ಮಳೆಗಾಲದಲ್ಲಿ ಭತ್ತ ಒಣಗಿಸಲು ರೈತರಿಗೆ ತುಂಬಾ ಕಷ್ಟವಾಗುತ್ತದೆ. ಭತ್ತಕ್ಕೆ 1,500 ರೂ. ಬೆಲೆ ನಿಗದಿ ಮಾಡಿ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಪ್ರಭು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next