ಹುಣಸೂರು: ಮೈಸೂರು ಹಾಲು ಒಕ್ಕೂಟವು ನಂದಿನಿ ಬ್ರಾಂಡ್ ಹೆಸರಿನಡಿ ಗ್ರಾಹಕರಿಗೆ ಕಲಬೆರಕೆ ರಹಿತ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ನೀಡುತ್ತಿದೆ ಎಂದು ಎಚ್.ಡಿ.ಕೋಟೆ ಶಾಸಕ ಸಿ. ಅನಿಲ್‌ಚಿಕ್ಕಮಾದು ತಿಳಿದರು.
ತಾಲೂಕಿನ ಹನಗೋಡು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ಸ್ಥಾಪಿಸಿರುವ ನಂದಿನಿ ಕ್ಷೀರ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಬೆನ್ನೆಲುಬಾದ ಮೈಸೂರು ಹಾಲು ಒಕ್ಕೂಟವು ನಂದಿನಿ ಹೆಸರಿನಲ್ಲಿ ಗ್ರಾಹಕರಿಗೆ ಗುಣಮಟ್ಟದ ಹಾಲು ಹಾಗೂ ವಿವಿಧ ಉತ್ಪನ್ನಗಳನ್ನು ಉತ್ಕೃಷ್ಟ ದರ್ಜೆಯಲ್ಲಿ ತಯಾರಿಸುತ್ತಿದೆ.
ಒಕ್ಕೂಟವು ಎಫ್‌ಎಸ್‌ಎಸ್‌ಎಐ ಆಹಾರ ತಯಾರಿಕಾ ಸಂಸ್ಥೆಯ ಪರವಾನಗಿ ಪಡೆದಿದ್ದು, ಸಂಸ್ಥೆಯ ಆಹಾರ ಸುರûಾ ನಿಯಮದಡಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದರಿಂದ ಸಾರ್ವಜನಿಕರು ನಂದಿನಿ ಉತ್ಪನ್ನಗಳನ್ನೇ ಬಳಸುವುದರೊಂದಿಗೆ ಜಿಲ್ಲೆಯ ರೈತರು ಹಾಗೂ ಹೈನುಗಾರರಿಗೆ ನೆರವಾಗಬೇಕೆಂದು ಮನವಿ ಮಾಡಿದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆ.ಎಸ್.ಕುಮಾರ್ ಮಾತನಾಡಿ, ಡಾ.ಕುರಿಯನ್ ಅವರ ಕ್ಷೀರಕ್ರಾಂತಿಯಿಂದ ಗ್ರಾಮೀಣ ರೈತ ಕುಟುಂಬಗಳು ಆರ್ಥಿಕವಾಗಿ ಬಲಗೊಳ್ಳುತ್ತಿವೆ. ಇದರೊಟ್ಟಿಗೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಭಾಗದ ಮಹಿಳೆಯರು ಹಾಗೂ ಹೈನುಗಾರರು ಸಬಲೀಕರಣವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ನಂದಿನಿ ಉತ್ಪನ್ನಗಳನ್ನೇ ಖರೀದಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಕಟ್ಟನಾಯಕ, ತಾಪಂ ಮಾಜಿ ಸದಸ್ಯ ಎಚ್.ಆರ್.ರಮೇಶ್, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಈರೇಗೌಡ, ಒಕ್ಕೂಟದ ನಂದಿನಿ ಉತ್ಪನ್ನಗಳ ಮಾರಾಟ ವಿಭಾಗದ ವ್ಯವಸ್ಥಾಪಕ ಡಾ.ಜಿ.ಎಸ್ ಪ್ರಕಾಶ್, ವಿಸ್ತರಣಾಧಿಕಾರಿ ಬಿ.ಗೌತಮ್ ಇತರರು ಉಪಸ್ಥಿತರಿದ್ದರು.