ಬೆಂಗಳೂರು: ದಸರಾ ಪ್ರಯುಕ್ತ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಬೂದುಗುಂಬಳ, ನಿಂಬೆಹಣ್ಣು ಬೆಲೆ ಗಗನಕ್ಕೇರಿದೆ. ದಸರಾಗೆ ಪ್ರತಿ ವರ್ಷ ತಮಿಳುನಾಡು, ಆಂಧ್ರಪ್ರದೇಶದಿಂದ ಬೂದಗುಂಬಳಕಾಯಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈ ಬಾರಿ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದರಿಂದ ಬೂದಗುಂಬಳಕಾಯಿ ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳಗೊಂಡಿದೆ.
ಪ್ರತಿ ಕೆಜಿಗೆ 15 ರಿಂದ 20 ರೂ.ವರೆಗೆ ಮಾರಾಟವಾಗುತ್ತಿದ್ದ ಬೂದಗುಂಬಳ, ಈಗ 25 ರಿಂದ 30 ರೂ.ಗೆ ಏರಿದೆ. ಒಂದು ಕಾಯಿಗೆ 80 ರೂ.ನಿಂದ 120 ರೂ.ವರೆಗೆ ಬೆಲೆ ಏರಿಕೆಯಾಗಿದೆ. ನಿಂಬೆಹಣ್ಣಿನ ದರದಲ್ಲೂ ಭಾರೀ ಏರಿಕೆಯಾಗಿದ್ದು, ಸಣ್ಣ ಗಾತ್ರದ್ದು 3 ರೂ., ದಪ್ಪ ಗಾತ್ರದ್ದು 5 ರೂ. ಇದೆ. ಬಾಳೆ ಕಂದು ಕೂಡ 100 ರೂ. ಗಡಿ ದಾಟಿದೆ. ದಸರಾಗೆ ಬೂದಗುಂಬಳ, ನಿಂಬೆಹಣ್ಣು ಸಹಜವಾಗಿ ಹೆಚ್ಚಾಗಿ ಖರೀದಿಸಲಾಗುವುದು.
ಹೀಗಾಗಿ, ಮಾರುಕಟ್ಟೆಗಳಲ್ಲಿ ಡಿಮ್ಯಾಂಡ್ ಹೆಚ್ಚಾಗಿಯೇ ಇದೆ. ಇನ್ನು, ಕಡ್ಲೆಪುರಿ ಒಂದು ಸೇರಿಗೆ 6 ರಿಂದ 10 ರೂ.ವರೆಗೆ ಮಾರಾಟವಾಗುತ್ತಿದೆ. ಗುರುವಾರದಿಂದಲೇ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬಾಳೆ ಕಂದು, ಬೂದುಗುಂಬಳ, ಕಡ್ಲೆಪುರಿ, ತೆಂಗಿನಕಾಯಿ ಸೇರಿ ಪೂಜಾ ಸಾಮಗ್ರಿಗಳ ಮಾರಾಟ ಪ್ರಾರಂಭವಾಗಿದೆ. ಕೆ.ಆರ್. ಮಾರುಕಟ್ಟೆ, ಮಡಿವಾಳ, ಯಶವಂತಪುರ ಸೇರಿ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಹೂ, ಹಣ್ಣು, ತರಕಾರಿ, ಬೂದಗುಂಬಳಕಾಯಿ, ಬಾಳೆ ಕಂದುಗಳು ರಾಶಿಗಟ್ಟಲೇ ಬಂದಿದ್ದು, ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ.
ಹೂ ಮತ್ತು ಹಣ್ಣುಗಳ ಬೆಲೆ ಹೆಚ್ಚಳವಾಗಿದ್ದು, ಕನಕಾಂಬರ ಕೆ.ಜಿ.ಗೆ 1,200 ರೂ., ಮಲ್ಲಿಗೆ 800 ರೂ., ಸೇವಂತಿಗೆ 250 ರೂ., ಮಳ್ಳೆ ಹೂವು 800 ರೂ., ಕಾಕಡ 400 ರೂ., ಗುಲಾಬಿ 160 ರೂ., ಸು ಗಂಧ ರಾಜ 300 ರೂ. ಇದ್ದು, ಹಣ್ಣುಗಳ ಬೆಲೆಯಲ್ಲಿಯೂ ಏರಿಕೆ ಕಂಡಿದೆ.
ಎಲ್ಲೆಡೆ ಪ್ಲಾಸ್ಟಿಕ್ ದರ್ಬಾರ್: ಪ್ಲಾಸಿಕ್ ಕೊಳ್ಳದಿರಿ ಮತ್ತು ಮಾರಾಟ ಮಾಡದಿರಿ ಎಂದು ಬಿಬಿಎಂಪಿ ಎಷ್ಟೇ ಜಾಗೃತಿ ಮೂಡಿಸಿದರೂ, ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸಿಕ್ ನಿಷೇಧವಾಗಿಲ್ಲ. ದಸರಾ ಹಬ್ಬದ ಪ್ರಯುಕ್ತ ಕೆ.ಆರ್. ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳು ರಾರಾಜಿಸುತ್ತಿದ್ದು, ಸಾರ್ವಜನಿಕರು ರಾಜಾರೋಷವಾಗಿ ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ. ಈ ಮಧ್ಯೆ, ಮಾರುಕಟ್ಟೆಗಳಲ್ಲಿ ಹಸಿ ತ್ಯಾಜ್ಯ ವಿಲೇವಾರಿ ಸವಾಲಾಗಿದೆ. ನಿತ್ಯ ಸಾವಿರಾರು ಟನ್ ಹೂವು-ಹಣ್ಣು ಹಸಿ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಸಮರ್ಪಕ ವಿಲೇವಾರಿಯಾಗದೆ ಸಾರ್ವಜನಿಕರಿಗೆ ಓಡಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಹೂವಿನ ಸಗಟು ದರ (ಕೆ.ಜಿ.ಗಳಲ್ಲಿ)
ಕನಕಾಂಬರ-1,000-1200
ಮಲ್ಲಿಗೆ- 800-1000 ರೂ.
ದುಂಡು ಮಲ್ಲಿಗೆ 800-1000 ರೂ.
ಕಾಕಡ-400-500 ರೂ.
ಗುಲಾಬಿ-160-180 ರೂ.
ಸುಗಂಧ ರಾಜ-250-300 ರೂ.
ಸೇವಂತಿಗೆ 160-250 ರೂ.
ಚೆಂಡು ಹೂ ವು 30-45 ರೂ.
ಸೇವಂತಿ ಹೂವು (ಮಾರು) 60-80 ರೂ.
ಹಣ್ಣುಗಳು ದರ
ಮೊಸಂಬಿ 80-100 ರೂ.
ಸೇಬು 100-120 ರೂ.
ದ್ರಾಕ್ಷಿ 120-200 ರೂ.
ದಾಳಿಂಬೆ 160-200 ರೂ.
ಏಲಕ್ಕಿ ಬಾಳೆ 80 ರೂ.
ಪೈನಾಪಲ್ 80-100 ರೂ.
ಮಲ್ಲಿಗೆ, ದುಂಡು ಮಲ್ಲಿಗೆ ಹೂವು ತಮಿಳುನಾಡಿನಿಂದ ಬರುತ್ತಿದೆ. ಉಳಿದಂತೆ ಕೋ ಲಾರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಆನೇಕಲ್ ಹೀಗೆ ಬೆಂಗಳೂರು ಸುತ್ತಮುತ್ತಲಿನಿಂದ ಮಾರುಕಟ್ಟೆಗೆ ಬರುತ್ತಿದೆ. ವ್ಯಾಪಾರ ಭರ್ಜರಿಯಾಗಿದೆ.
-ಮಹೇಶ್, ಕೆ.ಆರ್. ಮಾರುಕಟ್ಟೆಯ ಸಗಟು ಹೂವಿನ ವ್ಯಾಪಾರಿ
ಗಣೇಶ ಹಬ್ಬಕ್ಕೆ ಹೋಲಿಸಿದರೆ ಹೂಗಳ ಬೆಲೆ ಸ್ಥಿರವಾಗಿದೆ. ಆದರೆ ನಿಂಬೆಹಣ್ಣು, ಬೂದುಗುಂಬಳಕಾಯಿ, ಬಾಳೆ ಕಂದು, ಹಣ್ಣುಗಳ ಬೆಲೆ ಏರಿಕೆಯಾಗಿದೆ. ಮಳೆ ಬರುತ್ತಿರುವುದರಿಂದ ಕೊಂಡುಕೊಳ್ಳಲು ತೊಂದರೆ ಆಗುತ್ತಿದೆ.
-ಶಿವುಕುಮಾರ್, ಗ್ರಾಹಕ
* ಮಂಜುನಾಥ್ ಗಂಗಾವತಿ