ಹಾಸನ: ಕೋವಿಡ್ 19 ನಿಯಂತ್ರಣಕ್ಕೆ ಜಾರಿಯಾದ ಲಾಕ್‌ಡೌನ್‌ನಿಂದ ತೆಂಗಿನ ಕಾಯಿ ಮತ್ತು ಕೊಬ್ಬರಿ ಖರೀದಾರರಿಲ್ಲದೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯ ಪ್ರವೇಶಿಸಿ ಬೆಂಬಲ ಬೆಲೆಯಲ್ಲಿ ತೆಂಗು, ಕೊಬ್ಬರಿ ಹಾಗೂ ಅಡಕೆ ಖರೀದಿಸಬೇಕು ಎಂದು ಜೆಡಿಎಸ್ ಮುಖಂಡ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಾಕ್ ಡೌನ್‌ಗಿಂತ ಮೊದಲು ಒಂದು ತೆಂಗಿನ ಕಾಯಿಯ ಬೆಲೆ 20 ರೂ. ಇತ್ತು. ಆದರೆ ಈಗ 10 ರೂ.ಗೆ ಇಳಿದಿದೆ. ಒಂದು ಕ್ವಿಂಟಲ್ ಕೊಬ್ಬರಿ ದರ 13 ಸಾವಿರ ರೂ.ಗಳಿಂದ 8 ಸಾವಿರಕ್ಕೆ ಇಳಿದೆ. ಹಾಗೆಯೇ ಅಡಕೆ ಧಾರಣೆಯೂ 4 ಸಾವಿರ ರೂ.ನಿಂದ 2 ಸಾವಿರ ರೂ.ಗೆ ಕುಸಿದಿದೆ ಎಂದರು.
ತೆಂಗಿನ ಕಾಯಿ ಕೇಳುವವರೇ ಇಲ್ಲ: ತೆಂಗಿನ ಕಾಯಿ ಪುಡಿ ಮಾಡುತ್ತಿದ್ದ ಕಾರ್ಖಾನೆಗಳು ಮುಚ್ಚಿ ಹೋಗಿವೆ. ಮದುವೆ ಮತ್ತು ಶುಭ ಸಮಾರಂಭಗಳು ನಿಂತು ಹೋಗಿದ್ದರಿಂದ ತೆಂಗಿನ ಕಾಯಿಗೆ ಬೇಡಿಕೆ ಇಲ್ಲ. ಹಾಸನ ಜಿಲ್ಲೆಯಲ್ಲಿ ಪ್ರತಿದಿನ ಒಂದು ಲಕ್ಷ ತೆಂಗಿನ ಕಾಯಿ ಬಳಕೆಯಾಗುತ್ತಿದ್ದವು. ಈಗ ಮಾರು ಕಟ್ಟೆಯಲ್ಲಿ ತೆಂಗಿನ ಕಾಯಿ ಕೇಳುವವರಿಲ್ಲ. ಹಾಗಾಗಿ ತೆಂಗಿನ ಕಾಯಿ ಹಾಗೂ ಕೊಬ್ಬರಿಗೆ. ಬೆಂಬಲ ಬೆಲೆ ನಿಗದಿಪಡಿಸಿ ಬೆಳೆಗಾರರಿಂದ ಸರ್ಕಾರ ನೇರ ಖರೀದಿ ಮಾಡಬೇಕು. ಕೊಬ್ಬರಿಗೆ ಕನಿಷ್ಠ 12 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಪರಿಹಾರ ಬಿಡುಗಡೆಯಾಗುತ್ತಿಲ್ಲ: ಮೆಕ್ಕೆ ಜೋಳ ಖರೀದಿದಾರರಿಗೆ ಸರ್ಕಾರ 5 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ಆದರೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸದೆ ಜೋಳದ ಬೆಳೆಗಾರರಿಗೆ ಇನ್ನೂ ಪರಿಹಾರ ಬಿಡುಗಡೆಯಾಗುತ್ತಿಲ್ಲ. ಜೋಳ, ತರಕಾರಿ, ಹೂವು ಬೆಳೆಗಾರರಿಗೆ ಪರಿಹಾರ ನೀಡುವಾಗ ಪರಿಹಾರದ ಮೊತ್ತವನ್ನು ಬ್ಯಾಂಕುಗಳು ಸಾಲದ ಮೊತ್ತಕ್ಕೆ ಕಡಿತ ಮಾಡಿಕೊಳ್ಳದೆ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂಬ ಷರತ್ತನ್ನು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಾಗ ಅಳವಡಿಸಬೇಕು ಎಂದು ಸಲಹೆ ನೀಡಿದರು.