Advertisement

20 ಸಾವಿರ ರೂ.ಗೆ ಹೆಣ್ಣು ಮಗು ಮಾರಿದ ಪಾಪಿ ಪೋಷಕರು

02:47 PM Nov 22, 2021 | Team Udayavani |

ಕಂಪ್ಲಿ: ನವಜಾತ ಹೆಣ್ಣು ಶಿಶು ಮಾರಾಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಮಸಾಗರ ಗ್ರಾಮದ ದಂಪತಿ ಚಿತ್ರದುರ್ಗ ಜಿಲ್ಲೆ ಹಿರಿಯೂರಿನಿಂದ 20 ಸಾವಿರ ರೂ. ನೀಡಿ ಹೆಣ್ಣು ಮಗುವನ್ನು ಪಡೆದಿದ್ದು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ರಾಮಸಾಗರ ಗ್ರಾಮದ ನಿವಾಸಿ ಮೌಲಮ್ಮ-ರಾಮಾಂಜಿನಿ ದಂಪತಿಗೆ 20 ವರ್ಷವಾದರೂ ಮಕ್ಕಳಾಗಿರಲಿಲ್ಲ. ವರ್ಷದ ಹಿಂದೆ ಗ್ರಾಮದಲ್ಲಿ ಬಾಡಿಗೆಯಿದ್ದ ಮಣಿಯಮ್ಮ ಎನ್ನುವ ಮಹಿಳೆ ಸೆ.1ರಂದು ಈ ದಂಪತಿಗೆ ಕರೆ ಮಾಡಿ 20 ಸಾವಿರ ರೂ. ತೆಗೆದುಕೊಂಡು ಹಿರಿಯೂರಿಗೆ ಬಂದರೆ ಹೆಣ್ಣು ಮಗುವನ್ನು ಕೊಡಿಸುವುದಾಗಿ ಹೇಳಿದ್ದಾಳೆ. ಅದೇ ದಿನ ಹಿರಿಯೂರಿನ ಆಸ್ಪತ್ರೆ ಹತ್ತಿರ ಮಣಿಯಮ್ಮ ಹಣ ಪಡೆದು ನವಜಾತ ಹೆಣ್ಣು ಶಿಶುವನ್ನು ನೀಡಿದ್ದಾಳೆ. ನಂತರ ದಂಪತಿ ಸ್ವಗ್ರಾಮಕ್ಕೆ ಬಂದು ಮಗುವನ್ನು ಸಾಕುತ್ತಿದ್ದರು.

ಮಗುವಿಗೆ ಚುಚ್ಚುಮದ್ದು ಹಾಕಿಸಲು ಅಂಗನವಾಡಿ ಕಾರ್ಯಕರ್ತೆ ಕಲಾವತಿ ಹತ್ತಿರ ತರಲಾಗಿದೆ. ಗರ್ಭಿಣಿಯಾಗಿರದ ಮೌಲಮ್ಮನಿಗೆ ಮಗು ಹೇಗೆ ಬಂತೆಂದು ಅನುಮಾನಿಸಿದ ಕಲಾವತಿ ಅಂಗನವಾಡಿ ಮೇಲ್ವಿಚಾರಕಿ ಉಷಾ ಸಿಂಗ್‌ ಹಾಗೂ ಡಿಸಿಪಿಒ ಕಚೇರಿ ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್‌ ಗಮನಕ್ಕೆ ತಂದಿದ್ದಾರೆ. ನ.4ರಂದು ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಮೌಲಮ್ಮ ದಂಪತಿಯನ್ನು ವಿಚಾರಿಸಿದಾಗ ಮಗು ಮಾರಾಟದ ವಿಷಯ ಬೆಳಕಿಗೆ ಬಂದಿದೆ. ಇದೀಗ ಮಗುವನ್ನು ಬಳ್ಳಾರಿ ಬಾಲಕಿಯರ ಸರ್ಕಾರಿ ಬಾಲಮಂದಿರದ ಆವರಣದಲ್ಲಿನ ಅಮೂಲ್ಯ ಶಿಶು ಮಂದಿರದ ವಶಕ್ಕೆ ನೀಡಲಾಗಿದೆ.

ಇದನ್ನೂ ಓದಿ:ಆರಗ ಜ್ಞಾನೇಂದ್ರ ತೀರ್ಥಹಳ್ಳಿಗೆ ಮಾತ್ರ ಗೃಹಸಚಿವರಾಗಿದ್ದಾರೆ: ಕಿಮ್ಮನೆ ರತ್ನಾಕರ್ ವಾಗ್ದಾಳಿ

ನ.12ರಂದು ಬಳ್ಳಾರಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಆದೇಶದಂತೆ ಎಸ್‌ ಜೆಪಿ ಯೂನಿಟ್‌ನ ಲಲಿತಮ್ಮ, ಕಾನೂನು ಪರಿವೀಕ್ಷಣಾಧಿಕಾರಿ ಈಶ್ವರರಾವ್‌, ಮೌಲಮ್ಮ ಮನೆಗೆ ಬಂದು ಮಾಹಿತಿ ಸಂಗ್ರಹಿಸಿದ್ದಾರೆ. ಹಣದಾಸೆಗೆ ಪಾಲಕರಿಂದ ಮಗು ಪಡೆದ ಮಣಿಯಮ್ಮ, ಹೆತ್ತ ಮಗುವನ್ನು ಮಾರಾಟ ಮಾಡಿದ ಪಾಲಕರು, ಖರೀದಿ ಮಾಡಿದ ಮೌಲಮ್ಮ ದಂಪತಿ ಹಾಗೂ ಇತರರ ವಿರುದ್ಧ ನ.16ರಂದು ಬಾಲನ್ಯಾಯಾಲಯ ಕಾಯ್ದೆಯಡಿಯಲ್ಲಿ ಬಳ್ಳಾರಿ ಗ್ರಾಮಾಂತರ ಸಿಡಿಪಿಒ ಎಸ್‌. ಉಷಾ ಕಂಪ್ಲಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next