Advertisement

ಇಲ್ನೋಡಿ ಕಾರ್‌; ಕೋವಿಡ್ ಸಮಯದಲ್ಲಿ ಕಾರು ಖರೀದಿ!

02:26 PM Jul 20, 2020 | mahesh |

ಕೋವಿಡ್ ನಮ್ಮೆಲ್ಲರ ಸಾಮಾಜಿಕ ಬದುಕಿನ ಚಿತ್ರಣವನ್ನು ಬದಲಾಯಿಸಿದೆ. ಕಚೇರಿ ಕೆಲಸಗಳು, ದಿನಸಿ ಖರೀದಿ, ಪ್ರಯಾಣ… ಹೀಗೆ ಎಲ್ಲದರಲ್ಲೂ ಬದಲಾವಣೆಗಳಾಗಿವೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವತ್ತ ನಮ್ಮೆಲ್ಲರ ಚಿತ್ತವಿದೆ. ದೂರಪ್ರಯಾಣ ಸದ್ಯಕ್ಕಂತೂ ಬೇಡ ಎಂಬುದು ಎಲ್ಲರ ಮಾತಾಗಿದೆ. ಅಗತ್ಯ ಬಿದ್ದಾಗ ಖಾಸಗಿ ವಾಹನಗಳಲ್ಲಿ ಪ್ರಯಾಣಿಸಲು ಜನರು ಇಚ್ಛಿಸುತ್ತಿದ್ದಾರೆ.

Advertisement

ವಾಹನ ಇಲ್ಲದವರು ಹೊಸ ವಾಹನ ಖರೀದಿಗೆ ಮುಂದಾಗುತ್ತಿದ್ದಾರೆ. ಆರ್ಥಿಕತೆ ಕುಂಠಿತಗೊಂಡಿರುವ, ಉದ್ಯೋಗ ಅಭದ್ರತೆ, ಸಂಬಳ ಕಡಿತ ಮುಂತಾದ ಸಮಸ್ಯೆಗಳಿರುವ ಈ ಸಂದರ್ಭದಲ್ಲಿ, ವಾಹನ ಖರೀದಿ ಕಷ್ಟವೇ. ಇದನ್ನು ಮನಗಂಡಿರುವ ಆಟೊ ಮೊಬೈಲ್‌ ಸಂಸ್ಥೆಗಳು, ಬಯ್‌ ನೌ ಪೇ ಲೇಟರ್‌, ಸ್ಟೆಪ್‌ ಅಪ್‌ ಇಎಂಐ ಮತ್ತು ದೀರ್ಘಾವಧಿ ಸಾಲ ಸೌಲಭ್ಯ ಸೇರಿದಂತೆ ಹಲವು ಪ್ರೋತ್ಸಾಹಕರ ನಡೆಗಳನ್ನು ಕೈಗೊಂಡಿವೆ. ಈ ಕಾಲದಲ್ಲಿ ಕಾರು ಖರೀದಿಗೆ ಹೊರಟರೆ ಯಾವ ಯಾವ ವಿಚಾರಗಳತ್ತ ಗಮನ ಹರಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

ಹೊಸದಾ ಅಥವಾ ಸೆಕೆಂಡ್‌ ಹ್ಯಾಂಡೋ?: ಸೆಕೆಂಡ್‌ ಹ್ಯಾಂಡ್‌ ಕಾರು ಸಹಜವಾಗಿ ಕಡಿಮೆ ಬೆಲೆಗೆ ಸಿಗುತ್ತದೆ. ಬ್ಯಾಂಕುಗಳಲ್ಲಿ ಎರಡೂ ಬಗೆಯ ಕಾರಿಗೂ ಸಾಲ ಸೌಲಭ್ಯ ನೀಡಲಾಗುತ್ತದೆ. ಆದರೆ ಹೊಚ್ಚ ಹೊಸ ಕಾರು ಖರೀದಿಗೆ ನೀಡುವ ಅತ್ಯಾಕರ್ಷಕ ಸೌಲಭ್ಯಗಳನ್ನು ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ನೀಡಲಾಗುವುದಿಲ್ಲ. ಅಲ್ಲದೆ ಹೊಸ ಕಾರಿನ ಸಾಲಕ್ಕೆ ಹೋಲಿಸಿದರೆ, ಸೆಕೆಂಡ್‌ ಹ್ಯಾಂಡ್‌ ಕಾರಿನ ಸಾಲಕ್ಕೆ ಬಡ್ಡಿ ಹೆಚ್ಚು. ಇವೆಲ್ಲವನ್ನೂ ಲೆಕ್ಕ ಹಾಕಿಯೇ ಕಾರು ಕೊಳ್ಳುವುದು ಸೂಕ್ತ. ಇಂದಿನ ದಿನದಲ್ಲಿ ಆಟೊಮೊಬೈಲ್‌ ಸಂಸ್ಥೆಗಳೇ ತಮ್ಮ ಸಂಸ್ಥೆಯ ಸೆಕೆಂಡ್‌ ಹ್ಯಾಂಡ್‌ ಕಾರನ್ನು ದುರಸ್ತಿಗೊಳಿಸಿ ಮಾರುತ್ತಿವೆ. ಹಾಗಾಗಿ, ಸರ್ವೀಸ್‌, ಮೇಂಟೆನೆನ್ಸ್ ವಿಚಾರಗಳತ್ತ ಗ್ರಾಹಕರು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ವ್ಯಾಲ್ಯೂ ಫಾರ್‌ ಮನಿ ಕಾರುಗಳು ಈ ವ್ಯವಸ್ಥೆಯಡಿ ಸಿಗುತ್ತವೆ.

ಸಾಲದ ಸಮಾಚಾರ: ಕಾರು ಖರೀದಿದಾರರು ಸಾಲದ ಮೊರೆ ಹೋಗುವ ಮೊದಲು ತಮ್ಮ ಕ್ರೆಡಿಟ್‌ ಸ್ಕೋರ್‌ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ, ಬ್ಯಾಂಕುಗಳು ಸಾಲ ಸ್ಯಾಂಕ್ಷನ್‌ ಮಾಡುವ ಮುನ್ನ ಖಾತೆದಾರರ ಸಾಲ ಮರು ಪಾವತಿ ಮಾಡುವ ಸಾಮರ್ಥ್ಯವನ್ನು ಪತ್ತೆ ಹಚ್ಚಲು ಕ್ರೆಡಿಟ್‌ ಸ್ಕೋರಿನ ಮೊರೆ ಹೋಗುತ್ತವೆ. ಅದರ ಆಧಾರದ ಮೇಲೆಯೇ ಹಲವು ಬಗೆಯ ಆಫ‌ರ್‌ಗಳನ್ನು ಕೊಡುತ್ತವೆ. ಕ್ರೆಡಿಟ್‌ ಸ್ಕೋರ್‌ 750ರ ಮೇಲಿದ್ದರೆ ಉತ್ತಮ ಆಫ‌ರ್‌ಗಳು ಉಂಟು. ಗ್ರಾಹಕನ ಒಟ್ಟು ಇಎಂಐ ಕಂತುಗಳ ಮೊತ್ತ, ಆತನ ಸಂಬಳದ ಶೇ.40ರಷ್ಟಿರಬೇಕು. ಆದರೆ ಅದೇನೂ ಕಡ್ಡಾಯವಲ್ಲ ಎನ್ನುವುದು ಪರಿಣಿತರ ಅಭಿಪ್ರಾಯ ವಾಗಿದೆ.

ಖರೀದಿ ಏನನ್ನು ಒಳಗೊಂಡಿರುತ್ತದೆ?: ಕಾರು ಖರೀದಿ ಎಂದರೆ, ಕೇವಲ ಕಾರನ್ನು ಮಾತ್ರವೇ ಖರೀದಿಸುವುದಲ್ಲ. ಅದರೊಡನೆ ಹಲವು ಆಕ್ಸೆಸರಿ (ಹೆಚ್ಚುವರಿ ಬಿಡಿಭಾಗಗಳು, ಸವಲತ್ತುಗಳು), ವಿಮೆ, ರಿಜಿಸ್ಟ್ರೇಷನ್‌ ಮತ್ತು ತೆರಿಗೆಯನ್ನು ಅದು ಒಳಗೊಂಡಿರುತ್ತದೆ. ಕಾರು ಖರೀದಿ ಬಜೆಟ್‌ಗೆ ಈ ಎಲ್ಲಾ ಅಂಶಗಳನ್ನೂ ಸೇರಿಸಿಯೇ ಲೆಕ್ಕ ಹಾಕಬೇಕು. ಇಲ್ಲವಾದರೆ ಅಂತಿಮವಾಗಿ ಗ್ರಾಹಕರ ಜೇಬಿಗೆ ಹೊರೆ ಬೀಳುವುದು ಗ್ಯಾರಂಟಿ. ರಿಜಿಸ್ಟ್ರೇಷನ್‌ ಮತ್ತು ತೆರಿಗೆಯನ್ನು ಯಾವ ಕಾರಣಕ್ಕೂ ತಪ್ಪಿಸಲು ಆಗುವುದಿಲ್ಲ. ಆದರೆ ವಿಮೆ ಮತ್ತು ಆಕ್ಸೆಸರಿಗಳಲ್ಲಿ ಜೇಬಿಗೆ ತಕ್ಕ ಆಯ್ಕೆಯನ್ನು ಆರಿಸಿಕೊಳ್ಳಬಹುದು.

Advertisement

ಕೊಡುಗೆ ಮತ್ತು ಸ್ಕೀಮುಗಳು: ಆಟೋ ಡೀಲರ್‌ಗಳು ಆಕರ್ಷಕ ಹಣಕಾಸು ಯೋಜನೆಗಳನ್ನು ಖರೀದಿದಾರರಿಗೆ ಒದಗಿಸುತ್ತಿವೆ. ಮೇಲ್ನೋಟಕ್ಕೆ ಇವು ಅತ್ಯಂತ ಪ್ರಯೋಜನಕಾರಿ ಎಂಬಂತೆ ತೋರಬಹುದು. ಆದರೆ ದೀರ್ಘ‌ಕಾಲದಲ್ಲಿ ಅವುಗಳಿಂದ ದುಷ್ಪರಿಣಾಮ ಉಂಟಾಗಬಹುದೇ ಎನ್ನುವುದನ್ನೂ ಯೋಚಿಸಬೇಕು.
ಉದಾಹರಣೆಗೆ, ಸ್ಟೆಪ್‌ ಅಪ್‌ ಲೋನ್‌ ಎನ್ನುವ ಸವಲತ್ತು ಮೊದಲ ವರ್ಷದಲ್ಲಿ ಕಡಿಮೆ ಮೊತ್ತದ ಕಂತಿನಲ್ಲಿ ಸಾಲ ಮರುಪಾವತಿಸುವ ಆಯ್ಕೆಯನ್ನು ಇದು ನೀಡುತ್ತದೆ. ಆದರೆ ಕಾಲಾನಂತರ ಗ್ರಾಹಕನ ಆದಾಯ ಹೆಚ್ಚಿದಂತೆಲ್ಲಾ ಕಂತಿನ ಮೊತ್ತವೂ ಹೆಚ್ಚುತ್ತಾ ಹೋಗುತ್ತದೆ. ಇಂದಿನ ದಿನದಲ್ಲಿ ಹೆಚ್ಚು ಉಳಿತಾಯ, ಕಡಿಮೆ ಖರ್ಚು ಮೂಲಮಂತ್ರವಾಗಿದೆ. ಆ ಹಿನ್ನೆಲೆಯಲ್ಲಿಯೇ ಕಾರು ಖರೀದಿಯನ್ನೂ ಮಾಡುವಂತಾದರೆ ಚೆನ್ನ.

Advertisement

Udayavani is now on Telegram. Click here to join our channel and stay updated with the latest news.

Next