ಬೀಸುವ ತಂಗಾಳಿಯಲ್ಲಿ, ಜಿನುಗುವ ಮಳೆಯಲ್ಲಿ ಕೋಲ್ಮಿಂಚಿನಂತೆ ಬಂದು ಹೃದಯ ಸೇರಿದ ಹುಡುಗಿಯೇ, ಹುಣ್ಣಿಮೆಯ ಚಂದ್ರನಿಗಾಗಿ ಸಾಗರದ ಅಲೆಗಳು ಕಾದು ಕುಳಿತಂತೆ, ನೀ ಬರುವ ದಾರಿಯನ್ನು ಕಾಯುತ್ತಲೇ ಇದ್ದೇನೆ. ಪತ್ರಿಕಾಲಯದಿಂದ ಕೆಲಸ ಮುಗಿಸಿಕೊಂಡು ಬರಬೇಕಾದರೆ ತಡರಾತ್ರಿಯಾಗಿತ್ತು. ಹಾಸ್ಟೆಲ್‌ನತ್ತ ಹೆಜ್ಜೆ ಹಾಕಲು ಸುಸ್ತಾಗಿತ್ತು. ಪ್ರತಿದಿನ ಬಸ್‌ನಿಲ್ದಾಣಕ್ಕೆ ಬಂದಾಗ ಬಸ್‌ಗಾಗಿ ಕಾಯುತ್ತ ಒಬ್ಬರು, ಇಲ್ಲವೇ ಇಬ್ಬರು ನಿಂತಿರುತ್ತಿದ್ದರು. ಆದರೆ, ಅಂದು ಬಸ್‌ನಿಲ್ದಾಣದಲ್ಲಿ ಯಾರೂ ಇರಲಿಲ್ಲ. ಅಯ್ಯೋ.. ಬಸ್ ಕೈಕೊಟ್ಟಿತಲ್ಲಾ ಎಂದುಕೊಳ್ಳುತ್ತಾ ಮುಂದೆ ಬರುತ್ತಿದ್ದಂತೆ ಮಿಣುಕು ಬೆಳಕಿನಲ್ಲಿ ಕೆಂಗುಲಾಬಿಯ ಬಟ್ಟೆಯ ಬಿಳಿ ಚಿಟ್ಟೆಯೊಂದು ನಿಂತಂತೆ ಕಾಣುತ್ತಿತ್ತು. ಸುರಿಯುತ್ತಿರುವ ಮಳೆಯನ್ನು ಬೈದುಕೊಳ್ಳುತ್ತಾ ಅತ್ತಕಡೆ ಬಂದ ತಕ್ಷಣ ಎದೆಯಲ್ಲೇನೋ ತಲ್ಲಣ. ಸುಸ್ತೆಲ್ಲವೂ ಮಾಯವಾಗಿ, ಎದೆಗೆ ನೋವಾಗದಂತೆ ಹೂವಿನ ಬಾಣವನ್ನು ಹೊಡೆದಂತಾಯಿತು.
ಇಷ್ಟು ದಿನದಲ್ಲಿ ನಿನ್ನಂಥ ಚೆಲುವೆಯನ್ನು ನಾನು ನೋಡಿರಲೇ ಇಲ್ಲ. ಕನಸಿನಲ್ಲಿ ಬರುವ ಕನ್ಯೆಯೂ ನಿನ್ನಷ್ಟು ಅಂದವಾಗಿರಲಾರಳೇನೊ. ಆಕಾಶದ ದಾರಿಯಲ್ಲಿ ವಿಹಾರಕ್ಕೆಂದು ಬಂದ ದೇವಕನ್ಯೆ, ದಾರಿ ತಪ್ಪಿ ಇಲ್ಲಿಗೆ ಬಂದಿರುವಳೇ ಎಂದೆನಿಸಿತು. ಸುರಿಯುತ್ತಿರುವ ಮಳೆಗೆ ಮೈಯೊಡ್ಡಿ ನಿಂತಿದ್ದ ನಿನ್ನನ್ನು ನೋಡಿ ಅಂದೇ ನಿರ್ಧರಿಸಿ ಬಿಟ್ಟೆ, ನಮ್ಮಮ್ಮನ ಸೊಸೆ ನೀನೇ ಎಂದು. ಮೊದಲ ನೋಟದಲ್ಲೇ ನೀನು ಅದೆಷ್ಟು ಇಷ್ಟವಾದೆ ಅಂದ್ರೆ, ಆಗಲೇ ನಿನ್ನ ಜೊತೆ ಮಾತನಾಡಿ ನನ್ನ ಪ್ರೀತಿಯನ್ನು ಹೇಳಿಕೊಂಡು ಬಿಡಬೇಕೆಂದೆನಿಸಿತು. ಮೆಲು ಧ್ವನಿಯಲ್ಲಿ, “ಮಳೆ ಬರ್ತಿದೆ, ಈ ಕಡೆಗೆ ಬನ್ನಿ’ ಎಂದು ಹೇಳಿದೆ. ನೀನು ನಿಧಾನವಾಗಿ ನನ್ನ ಕಡೆ ತಿರುಗಿದಾಗ ಎದೆಯ ಬಡಿತ ಇನ್ನೂ ಹೆಚ್ಚಾಗಿತ್ತು.
ಮಳೆಯಲಿ, ಚಳಿಯಲಿ ನಿನ್ನ ಜೊತೆ ನಿಂತಿದ್ದಕ್ಕೆ ಏನೋ ಒಂದು ಖುಷಿ. ಆಗ ನೀನು ಕೊಟ್ಟ ಸ್ಮೈಲ್ ಹೃದಯದಾಳಕ್ಕಿಳಿದು ಸಸಿಯಾಗಿದ್ದ ಪ್ರೀತಿಗೆ ನೀರೆರೆಯಿತು. ನಿನ್ನೊಂದಿಗೆ ಮಾ ತಾಡುತ್ತ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಅಷ್ಟರಲ್ಲಿ ನಿನ್ನ ಬಸ್ ಬಂದೇ ಬಿಟ್ಟಿತು. “ನಾನು ಹೊರಡ್ತೀನಿ. ಮತ್ತೆ ಸಿಗೋಣ’ ಎಂದು ನೀನು ಹೇಳಿ ಹೋದ ಮೇಲೆ, ನೆನಪಾಗಿದ್ದು ನಾನು ನಿನ್ನ ಹೆಸರನ್ನು ಕೇಳಲೇ ಇಲ್ಲವಲ್ಲ ಎಂದು.
ಮತ್ತೆ ಸಿಗೋಣ ಎಂದು ಹೇಳಿ ಹೋದ ನಿನ್ನ ಬರುವಿಕೆಗಾಗಿ ನಾನು ಪ್ರತಿದಿನ ಕಾಯುತ್ತಲೇ ಇದ್ದೇನೆ. ನಿನ್ನ ಪ್ರೇಮಕ್ಕಾಗಿ ಕಾಯುತ್ತಿರುವ ದಾರಿಹೋಕ
ಮಹಾಂತೇಶ ದೊಡವಾಡ