ಭುವನ್‌ಗೆ ಬೆಣ್ಣೆ ದೋಸೆ ಎಂದರೆ ತುಂಬಾ ಇಷ್ಟ. ಅಮ್ಮ,”ವಿಜ್ಞಾನ ಟೀಚರ್ ಹೇಳಿರುವ ಪ್ರಾಜೆಕ್ಟ್ ಮಾಡಿದರೆ ಮಾತ್ರ ದೋಸೆ ಮಾಡಿಕೊಡುತ್ತೇನೆ’ ಎಂದಿದ್ದಾರೆ. ಭುವನ್, ಶಾಲೆಯ ಪ್ರಾಜೆಕ್ಟ್ ಮಾಡಿದನೇ? ಬೆಣ್ಣೆ ದೋಸೆ ತಿಂದನೇ?
ಸಂಜೆಯ ಟ್ಯೂಷನ್ ತರಗತಿ ಮುಗಿಸಿ ಓಡಿ ಬಂದ ಭುವನ್ “ಅಮ್ಮಾ ಹಸಿವು’ ಅನ್ನುತ್ತಲೇ ಮನೆಯೊಳಗೆ ಬಂದ. “ಏನೂ ಹೋಮ್‌ವರ್ಕ್ ಇಲ್ವಾ?’ ಎಂದು ಅಮ್ಮ ಅಡುಗೆಕೋಣೆಯಿಂದಲೇ ಕೇಳಿದರು. “ಬೇಗ ಬೇಗ ಹೋಂವರ್ಕ್ ಮುಗಿಸಿದರೆ ನಿನ್ನ ಇಷ್ಟದ ಬೆಣ್ಣೆ ದೋಸೆ ಮಾಡಿಕೊಡುವೆ’ ಎಂದು ಆಮಿ, ಒಡ್ಡಿದರು ಅಮ್ಮ.
“ಬೆಣ್ಣೆ ದೋಸೇನಾ? ನನಗೆ ಈಗ್ಲೆ ಬೇಕು.. ಹೋಮ್ ವರ್ಕ್ ಏನೂ ಕೊಟ್ಟಿಲ್ಲಮ್ಮಾ…’ ಎನ್ನುತ್ತಾ ಫುಟ್‌ಬಾಲ್ ಹಿಡಿದು ಆಡಲು ಮನೆಯಿಂದ ಹೊರಗೆ ಹೊರಟನು. ಅಷ್ಟರಲ್ಲಿ ಅಮ್ಮ “ಮೊನ್ನೆ ಹೇಳ್ತಿದ್ದೆ… ವಿಜ್ಞಾನದ ಪ್ರಾಜೆಕr… ಇದೆ ಅಂತ… ಮರೆತೆಯಾ?’ ಎಂದು ನೆನಪು ಮಾಡಿಸಿದಾಗ ಭುವನ್‌ಗೆ ನೆನಪು ಬಂತು. ಅವನು ಕೈಯಲ್ಲಿದ್ದ ಬಾಲನ್ನು ಬಿಸಾಡಿ “ಹೌದಮ್ಮ… ನನಗೆ ನೆನಪೇ ಇಲ್ಲ. ನೀನೀಗ ನೆನಪಿಸದೆ ಇರುತ್ತಿದ್ದರೆ ನಾನು ನಾಳೆ ಬೆಂಚಿನ ಮೇಲೆ ನಿಲ್ಲುವ ಶಿಕ್ಷೆಗೆ ಗುರಿಯಾಗಬೇಕಿತ್ತು..’ ಎಂದನು. ಅವನು ತನ್ನ ಕೋಣೆಯೊಳಗೆ ಬಂದು ಚೀಲದಿಂದ ಪ್ರಾಜೆಕ್ಟ್ ಗೆ ಬೇಕಾದ ಹಾಳೆ, ಗಮ್, ಪೆನ್ಸಿಲ್, ಪೆನ್ ಮುಂತಾದ ಪರಿಕರಗಳನ್ನು ತೆಗೆದಿರಿಸಿದನು.
ಅವನಿಗೆ ಯಾಕೋ ಪ್ರಾಜೆಕ್ಟ್ ಮಾಡಲು ಉದಾಸೀನ ಹತ್ತಿತು. ಆಟ ಕೈ ಬೀಸಿ ಕರೆಯುತ್ತಿತ್ತು. ಅತ್ತ ಆಟವನ್ನೂ ಆಡಲಾಗುತ್ತಿಲ್ಲ, ಇತ್ತ ಪ್ರಾಜೆಕ್ಟ್ ಮಾಡಲೂ ಮನಸ್ಸು ಬರುತ್ತಿಲ್ಲ. ಭುವನ್‌ಗೆ ಕಾಗದದಲ್ಲಿ ಕ್ರಾಫ್ಟ್ ಮಾಡುವುದೆಂದರೆ ಬಹಳ ಇಷ್ಟ. ಅವನಿಗೆ ಕಾಗದ, ಪೆನ್ಸಿಲ್ ಕಂಡಾಕ್ಷಣ ಅವನ ಕೈಗಳು ಹಾಳೆಗಳಲ್ಲಿ ಆಡಲು ಆರಂಭಿಸದವು. ಸರಸರನೆ ಕಾಗದಗಳನ್ನು ತನಗೆ ಬೇಕಾದ ಆಕೃತಿಗೆ ಕತ್ತರಿಸಿ ವಿಮಾನವನ್ನು ತಯಾರಿಸಿದ. ಅದನ್ನು ಮನೆಯೊಳಗೆ ಗಾಳಿಯಲ್ಲಿ ತೇಲಿಸಿ ಹೊಡೆಯತೊಡಗಿದನು. ಒಂದು ಕಣ್ಣನ್ನು ಮುಚ್ಚಿ “ಶೂ’ ಅಂತ ರಾಕೆಟ್ ಉಡಾವಣೆ ಮಾಡಿದಂತೆ ಪೇಪರ್ ವಿಮಾನವನ್ನು ಎತ್ತರಕ್ಕೆ ಚಿಮ್ಮಿಸಿದನು. ನಂತರ ಚಕಚಕನೆ ಇನ್ನೊಂದು ಕಾಗದದ ಹಾಳೆಯನ್ನು ಕತ್ತರಿಸಿ ದೋಣಿ ಮಾಡಿದನು.
ಕಾಗದದಲ್ಲಿ ಇನ್ನೇನೋ ಆಕೃತಿ ತಯಾರಿಸಲು ಹೊರಟವನಿಗೆ ಅಮ್ಮನ ದನಿ ಎಚ್ಚರಿಸಿತು. “ಭುವನ್ ಪ್ರಾಜೆಕ್ಟ್ ಮುಗೀತಾ?’. ಅಯ್ಯೊ, ಪೇಪರ್ ಕ್ರಾಫ್ಟ್ ಮಾಡುತ್ತಾ ಪ್ರಾಜೆಕ್ಟ್ ಮಾಡೋದೇ ಮರೆತುಹೋಗಿತ್ತು. ತನ್ನ ಆಕೃತಿಗಳನ್ನೆಲ್ಲಾ ಅಮ್ಮನಿಗೆ ಕಾಣದಂತೆ ಬಚ್ಚಿಡಬೇಕೆಂದು ಹೊರಟನು. ಆದರೆ, ಅಷ್ಟರಲ್ಲಿ ತಡವಾಗಿತ್ತು. ಅಮ್ಮ ಒಳಗೆ ಬಂದುಬಿಟ್ಟಿದ್ದರು. “ಏನಿದು?’ ಅಂತ ಸುತ್ತಲೂ ನೋಡಿದರು. ಪ್ರಾಜೆಕ್ಟ್ ಮಾಡುವುದು ಬಿಟ್ಟು ಇನ್ನೇನೋ ಮಾಡುತ್ತಿರುವುದನ್ನು ಕಂಡು “ನಿನಗೆ ದೋಸೆ ಮಾಡಿಕೊಡುವುದಿಲ್ಲ. ಆಟ ಆಡುತ್ತಿದ್ದೀಯಲ್ಲಾ’ ಎಂದರು ಅಮ್ಮ. ಭುವನ್ ಮುಖ ಬಾಡಿತು. ಅಮ್ಮ ಸಿಟ್ಟಿನಿಂದ ಕೋಣೆಯಿಂದ ಹೊರಕ್ಕೆ ಹೋದರು.
ತನ್ನ ಇಷ್ಟದ ದೋಸೆ ತಿನ್ನಬಹುದೆಂದು ಕಾದು ಕುಳಿತಿದ್ದ ಭುವನ್‌ಗೆ ನಿರಾಸೆಯಾಗಿತ್ತು. ಅವನು “ಸಾರಿ ಅಮ್ಮಾ…’ ಎನ್ನುತ್ತಾ ಅಮ್ಮನ ಬಳಿ ಹೋದ. ಅಮ್ಮ, ಅವನ ತಲೆಗೂದಲಲ್ಲಿ ಕೈಯಾಡಿಸುತ್ತಾ “ಕಾಗದದಲ್ಲಿ ಎಷ್ಟು ಚೆನ್ನಾಗಿ ವಿಮಾನ, ದೋಣಿ, ಮನೆ ಮಾಡಿದ್ದೀಯಾ…’ ಎಂದರು. ಅಮ್ಮನ ಕೋಪ ಮಾಯವಾಗಿದ್ದನ್ನು ಕಂಡು ಭುವನ್‌ಗೆ ಖುಷಿಯಾಯಿತು. ಅಷ್ಟರಲ್ಲಿ ಅಡುಗೆ ಮನೆಯಿಂದ ದೋಸೆಯ ವಾಸನೆಯೂ ಬಂದಿತ್ತು. “ಹಸಿವಾಗ್ತಿದೆ ಅಂದೆಯಲ್ಲ…ನಿನ್ನ ಇಷ್ಟದ ಬೆಣ್ಣೆದೋಸೆ ಮಾಡಿದ್ದೀನಿ. ತಿಂದು ನಂತರ ಪ್ರಾಜೆಕ್ಟ್ ಮಾಡುವಿಯಂತೆ…’ ಎಂದು ದೋಸೆಯ ತಟ್ಟೆಯನ್ನು ಅವನ ಮುಂದಿಟ್ಟರು. ಭುವನ್ ಒಂದೊಂದೇ ದೋಸೆಯನ್ನು ಗಬಗಬನೆ ತಿನ್ನಲು ಪ್ರಾರಂಭಿಸಿದನು.
– ರಜನಿ ದುಬೈ