Advertisement

ಗುಂಡಿಗಳ ರಸ್ತೆಗೆ ಅಂತೂ ಮುಕ್ತಿ

12:13 PM Nov 19, 2017 | Team Udayavani |

ಧಾರವಾಡ: ನಗರದಲ್ಲಿ ಗುಂಡಿ ರಸ್ತೆ, ಧೂಳು ರಸ್ತೆ, ಕೆಸರಿನ ರಸ್ತೆ ಎಂದೇ ಹೆಸರುವಾಸಿಯಾಗಿದ್ದ ಹಳೆಯ ಎಸ್‌ಪಿ ಕಚೇರಿಯಿಂದ ಮುರುಘಾ ಮಠದ ವರೆಗಿನ ರಸ್ತೆಗೆ ಕೊನೆಗೂ ಹೈಟೆಕ್‌ ಸ್ಪರ್ಶ ಲಭಿಸಲಿದೆ. ಹಾಗಂತ ಈ ರಸ್ತೆಯನ್ನ ಬರೀ ಡಾಂಬರೀಕರಣ ಅಥವಾ ಸಿಮೆಂಟ್‌ ರಸ್ತೆಯನ್ನಾಗಿ ಮಾತ್ರ ಪರಿವರ್ತಿಸಲಾಗುತ್ತಿಲ್ಲ.

Advertisement

ಬದಲಿಗೆ ಬೆಂಗಳೂರಿನಲ್ಲಿ ಈಗಾಗಲೇ ನಿರ್ಮಿಸಿರುವ ಟೆಂಡರ್‌ಶ್ಯೂರ್‌ ರಸ್ತೆಯ ಮಾದರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ದೂರದೃಷ್ಟಿಯನ್ನಿಟ್ಟುಕೊಂಡು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾ.ಹೆ. 4ರ ಹಳೆಯ ಎಸ್‌ಪಿ ಕಚೇರಿಯಿಂದ ಮುರುಘಾ ಮಠದ ಎಪಿಎಂಸಿ ದ್ವಾರದ ವರೆಗಿನ 2.5 ಕಿಮೀ ರಸ್ತೆಯನ್ನು 23 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್‌ ರಸ್ತೆಯನ್ನಾಗಿ ನಿರ್ಮಿಸಲಾಗುತ್ತಿದೆ.

ಅತ್ಯಾಧುನಿಕ ತಂತ್ರಜ್ಞಾನ ಮತ್ತು ದೂರದೃಷ್ಟಿ ಇಟ್ಟುಕೊಂಡು ಈ ರಸ್ತೆ ನಿರ್ಮಿಸಲಾಗುತ್ತಿದೆ. ನಗರದಲ್ಲಿ ಸದ್ಯ ರಸ್ತೆ ನಿರ್ಮಿಸಿದ ನಂತರ ನೀರಿಗಾಗಿ, ಕೇಬಲ್‌ ಗಾಗಿ ಮತ್ತು ಇನ್ನಿತರ ಕಾರಣಗಳಿಗಾಗಿ ರಸ್ತೆಗಳನ್ನು ಅಗೆಯುವುದು ಸಾಮಾನ್ಯವಾಗಿ ಬಿಟ್ಟಿದೆ.

ಆದರೆ ಇದು ಟೆಂಡರ್‌ಶ್ಯೂರ್‌ ರಸ್ತೆಯಾಗಿದ್ದು, ಕೆ-ಶಿಫ್‌ ಯೋಜನೆಯಡಿ ನಿರ್ಮಾಣಗೊಳ್ಳುತ್ತಿದೆ. ಇಲ್ಲಿ ನೀರಿಗಾಗಿ, ಕೇಬಲ್‌ಗ‌ಳಿಗಾಗಿ ಪ್ರತ್ಯೇಕವಾದ ದೊಡ್ಡ ಒಳ ಕಾಲುವೆಯೇ ಇರಲಿದೆ. ಹೀಗಾಗಿ ಇನ್ನು ಮುಂದೆ ರಸ್ತೆ ಅಗೆಯುವ ಪ್ರಮೇಯವೇ ಬರುವುದಿಲ್ಲ. ಸ್ಥಳೀಯ ಗುತ್ತಿಗೆದಾರರಿಗೆ ಗುತ್ತಿಗೆಯನ್ನು ನೀಡಲಾಗಿದ್ದು, ಉತ್ತಮ ರಸ್ತೆ ನಿರ್ಮಿಸುವ ಭರವಸೆ ಇದೆ ಎಂದು ಹೇಳಿದರು. 

Advertisement

ಒಳ ರಸ್ತೆಗಳ ಅಭಿವೃದ್ಧಿ: ಹೆಬ್ಬಳ್ಳಿ ಅಗಸಿಯಿಂದ ಮುರುಘಾ ಮಠದ ವರೆಗೆ ಮಾತ್ರವಲ್ಲ, ಈ ಪ್ರದೇಶದ ಅನೇಕ ಸಣ್ಣ ರಸ್ತೆಗಳನ್ನು ಪರಿಪೂರ್ಣವಾಗಿ ನಿರ್ಮಿಸಲಾಗುತ್ತಿದೆ. ಹೀಗಾಗಿ ಇಲ್ಲಿ ಸಂಚಾರ ದಟ್ಟಣೆ ತೊಂದರೆ ಕಡಿಮೆಯಾಗಲಿದೆ.

ಹೆಬ್ಬಳ್ಳಿ ಅಗಸಿಯಿಂದ ಶಿವಾಜಿ ವೃತ್ತದ ವರೆಗಿನ ರಸ್ತೆ ಅಗಲೀಕರಣ ಅನಿವಾರ್ಯವಾಗಿದ್ದು, ಇಲ್ಲಿ ಮನೆಗಳನ್ನು ತೆಗೆಯಬೇಕಾಗಿದೆ. ಇದಕ್ಕಾಗಿ 70 ಕೊಟಿ ರೂ. ಅಗತ್ಯವಿದೆ. ಈ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ರಿಂಗ್‌ ರಸ್ತೆಯ ಅಭಿವೃದ್ಧಿಗೂ ಗಮನ ಹರಿಸಲಾಗುವುದು ಎಂದರು. 

ಹಂದಿ ಕಾರ್ಯಾಚರಣೆಗೆ ಸದ್ಯಕ್ಕೆ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿಲ್ಲ. ಬೆಳಗಾವಿ ಅಧಿವೇಶನ ಮುಗಿದ ನಂತರ ಪೊಲೀಸರು ಭದ್ರತೆ ನೀಡಲಿದ್ದು, ನಂತರ ಮತ್ತೆ ಕಾರ್ಯಾಚರಣೆ ಚುರುಕುಗೊಳಿಸಲಾಗುವುದು ಎಂದರು. ಹೊಸ್‌ ಬಸ್‌ ನಿಲ್ದಾಣದಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿದ್ದು ಗಮನಕ್ಕೆ ಬಂದಿದೆ. ಕೆಲವೇ ದಿನಗಳಲ್ಲಿ ಇದನ್ನು ಡಾಂಬರೀಕರಣ ಮಾಡಲಾಗುವುದು ಎಂದರು. 

ಶಿವಳ್ಳಿ ಬಳಿ ಈಗಾಗಲೇ ಕಾರ್ಯರೂಪಕ್ಕೆ ತರಲು ಸಜ್ಜಾಗಿರುವ ಕಸ ವಿಲೇವಾರಿ ಘಟಕಕ್ಕೆ ಮತ್ತೆ 60 ಕೋಟಿ ರೂ. ಮಂಜೂರಾಗಿದೆ. ಅಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಗ್ರಾಮಸ್ಥರು ಒಪ್ಪದೇ ಹೋದರೆ ಅವರ ಮನವೊಲಿಸಿ ನಂತರ ಕಸ ಹಾಕುತ್ತೇವೆ ಎಂದು ಸಚಿವರು ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next