ಕಲಬುರಗಿ: ಸತತ ಬರಗಾಲದಿಂದ ತತ್ತರಿಸಿರುವ ರೈತನ ನೆರವಿಗೆ ಧಾವಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಪಂದಿಸುವ ಬದಲು ರಾಜಕೀಯ ಮಾಡುತ್ತಿವೆ. ರೈತರ ಸಾಲ ಮನ್ನಾ ಮಾಡುವಲ್ಲಿ ಒಬ್ಬರಿಗೊಬ್ಬರು ಬೊಟ್ಟು ಮಾಡುತ್ತಿದ್ದಾರೆ.
2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಆ ಮರುಕ್ಷಣದಲ್ಲಿಯೇ ರೈತರ ಸಾಲ ಮನ್ನಾ ಆಗಲಿದೆ ಎಂದು ಜಿಲ್ಲಾ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಹೇಳಿದರು.
ಅಫಜಲಪುರ ತಾಲೂಕಿನ ದೇವಲ್‌ಗಾಣಗಾಪುರದಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು ಸಹಕಾರ ಸಂಘಗಳಲ್ಲಿನ 25 ಸಾವಿರ ರೂ. ಸಾಲ ಮನ್ನಾ ಮಾಡಿ ಮೇಲ್ಪಂಕ್ತಿ ಹಾಕಿದ್ದರು.
ಇದನ್ನು ಜನ ಇನ್ನೂ ಮರೆತಿಲ್ಲ. ಬರುವ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲಿಸಲು ಜನ ಉತ್ಸುಕತೆಹೊಂದಿದ್ದಾರೆ. ಈ ನಿಟ್ಟಿನಲ್ಲಿ ಸದಸ್ಯತ್ವ ಬಲಗೊಳ್ಳುವುದು ಅಗತ್ಯವಾಗಿದೆ ಎಂದರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸ್ವತ್ಛ ಹಾಗೂ ಪಾರದರ್ಶಕ ಆಡಳಿತ ನೀಡಿದ್ದರು.
ಈಗಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಜೆಡಿಎಸ್‌ಗೆ ಬೆಂಬಲಿಸಿ ಅಧಿಕಾರಕ್ಕೆ ತನ್ನಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಸೈಯದ್ ಜಾಫರ್ ಹುಸೇನ್ ಸದಸ್ಯತ್ವ ಉದ್ಘಾಟನೆ ನೆರವೇರಿಸಿದರು. ಅಫಜಲಪುರ ತಾಲೂಕಿನ ಸದಸ್ಯತ್ವ ಉಸ್ತುವಾರಿ ವಹಿಸಿಕೊಂಡಿರುವ ಅವ್ವಣ್ಣಗೌಡ ಪಾಟೀಲಕಿರಸಾವಳಗಿ ಮಾತನಾಡಿದರು.
ಜೆಡಿಎಸ್ ಅಫಜಲಪುರ ತಾಲೂಕಾ ಮುಖಂಡ ಗೋವಿಂದ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಸುನೀಲ ಹೊಸಮನಿ, ಸುಭಾಷ ಬಿದನೂರ,ರಾಜೇಶ್ವರಿ ಸೋನಾರ, ದಿಗಂಬರ ದೇವಖಾತೆ, ಮಲ್ಲಿಕಾರ್ಜುನ ನಾಟೀಕಾರ, ಸುನೀಲ ಭೋವಿ, ಶ್ರೀಕಾಂತ ಮಿಣಜಗಿ, ಬಸವರಾಜ ನಾಟೀಕಾರ, ಬೀರಪ್ಪ ಪೂಜಾರಿ, ಶ್ರೀಮಂತ ಮುದಕಣ ಹಾಜರಿದ್ದರು.