Advertisement

ಮೃತ್ಯುಕೂಪಕ್ಕೆ ಸಿಗುವುದೆಂದು ಮುಕ್ತಿ?

10:34 AM Jan 25, 2020 | Suhan S |

ಟಿ.ದಾಸರಹಳ್ಳಿ: ಬೆಂಗಳೂರು ಬೆಳೆದಂತೆಲ್ಲಾ ಅದಕ್ಕೆ ಹೊಂದಿಕೊಂಡ ಪ್ರದೇಶಗಳೂ ಕ್ಷಿಪ್ರವಾಗಿ ಬೆಳವಣಿಗೆಯಾಗುತ್ತಿವೆ. ಆದರೆ, ಅದಕ್ಕೆ ಪೂರಕವಾದ ಸೌಲಭ್ಯಗಳು ಸಿಗುತ್ತಿಲ್ಲ. ಪರಿಣಾಮ ಸ್ಥಳೀಯರು “ಬೆಳವಣಿಗೆ ಬೆಲೆ’ ತೆರಬೇಕಾಗಿದೆ. ಆ ಪ್ರದೇಶಗಳ ಸಾಲಿನಲ್ಲಿ ಮಾಗಡಿ ಮುಖ್ಯರಸ್ತೆ ಕೂಡ ಒಂದು.

Advertisement

ಬೆಂಗಳೂರು-ಮಾಗಡಿ ಮುಖ್ಯರಸ್ತೆಯಲ್ಲಿ ವಾಹನದಟ್ಟಣೆ ಮಿತಿ ಮೀರಿದೆ. ನಿತ್ಯ ಈ ಕಿರಿದಾದ ರಸ್ತೆಯಲ್ಲಿ ಅಪಘಾತಗಳು ಮಾಮೂಲು. ಕಳೆದ ವರ್ಷ ಇದೊಂದೇ ಮಾರ್ಗದಲ್ಲಿ 30ಕ್ಕೂ ಹೆಚ್ಚು ಜನ ಬಲಿ ಆಗಿದ್ದಾರೆ. ಹಲವಾರು ವರ್ಷಗಳಿಂದ ವಿಸ್ತರಣೆಯಾಗದೆ ನೆನೆಗುದಿಗೆ ಬಿದ್ದಿರುವ ರಸ್ತೆಯನ್ನು ತುರ್ತಾಗಿ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬ ಕೂಗು ವಾಹನ ಸವಾರರಿಂದ ಕೇಳಿಬರುತ್ತಿದೆ.

ರಾಜ್ಯ ಹೆದ್ದಾರಿ 85ರ ಭಾಗವಾಗಿರುವ ಮಾಗಡಿ ಮುಖ್ಯರಸ್ತೆ ಮೈಸೂರು ಹಾಗೂ ತುಮಕೂರು ರಾಷ್ಟ್ರೀಯ ಹೆದ್ದಾರಿಗಳು, ಕೆಂಪೇಗೌಡ ಬಡಾವಣೆ, ವಿವಿಧ ಜಿಲ್ಲೆಗಳ ಜತೆಗೆ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ನೈಸ್‌ ಜಂಕ್ಷನ್‌ ದೊಡ್ಡಗೊಲ್ಲರಹಟ್ಟಿ, ಕಾಚೋಹಳ್ಳಿ ಕ್ರಾಸ್‌, ಚಿಕ್ಕಗೊಲ್ಲರಹಟ್ಟಿ, ಕಡಬಗೆರೆ ಕ್ರಾಸ್‌ನಲ್ಲಿ ಸದಾ ವಾಹನದಟ್ಟಣೆ. ಬ್ಯಾಡರಹಳ್ಳಿ-ಮಾಚೋಹಳ್ಳಿ ನಡುವಿನ ಮಾರ್ಗವಂತೂ ವಾಹನ ಸವಾರರ ಪಾಲಿಗೆ ನರಕಯಾತನೆ. ಮಂಚನಬೆಲೆ, ತಿಪ್ಪಗೊಂಡನಹಳ್ಳಿ ಜಲಾಶಯಗಳು, ಮಾಗಡಿ ರಂಗನಾಥಸ್ವಾಮಿ, ಸಾವನದುರ್ಗದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಗಳಿಗಳಲ್ಲದೆ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಮುಂತಾದ ಧಾರ್ಮಿಕ ಸ್ಥಳಗಳಿಗೆ ಹೋಗುವವರು ಈ ರಸ್ತೆ ಬಳಸುತ್ತಾರೆ. ಹಾಗಾಗಿ, ವಾಹನದಟ್ಟಣೆ ವಿಪರೀತ ಆಗುತ್ತಿದ್ದು, ಅರ್ಧಗಂಟೆಯಲ್ಲಿ ಕ್ರಮಿಸಬಹುದಾದ ಸ್ಥಳಕ್ಕೆ ಕನಿಷ್ಠ ಒಂದೂವರೆ-ಎರಡು ತಾಸು ಬೇಕಾಗುತ್ತದೆ. ರಸ್ತೆಯುದ್ದಕ್ಕೂ ದೂಳಿನದ್ದೇ ಕಾರುಬಾರು. ಈ ಮಧ್ಯೆ ಎಲ್ಲೆಂದರಲ್ಲಿ ಗುಂಡಿಗಳು ಬಲಿಗಾಗಿ ಬಾಯೆ¤ರದಿವೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸುತ್ತಲೂ ಅಭಿವೃದ್ಧಿ: ಮಾಗಡಿ ಮುಖ್ಯರಸ್ತೆಯ ಎಡ- ಬಲದಲ್ಲಿರುವ ಮೈಸೂರು ಹಾಗೂ ತುಮಕೂರು ರಸ್ತೆಗಳು ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿವೆ. ತುಮಕೂರು ಹೆದ್ದಾರಿಯಲ್ಲಿ ಎತ್ತರಿಸಿದ ಟೋಲ್‌ ರಸ್ತೆಯೂ ಇದೆ. ನಾಗಸಂದ್ರದವರೆಗೆ ಮೆಟ್ರೋ ರೈಲು ಸಂಚರಿಸುತ್ತಿದ್ದು ಮುಂದಕ್ಕೂ ಮೆಟ್ರೋ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ನಾಡು ಮಾಗಡಿಗೆ ಸಾಗುವ ಮುಖ್ಯರಸ್ತೆ ವಿಸ್ತರಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಅಂದಹಾಗೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸ್ವತಃ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ ಕುಮಾರಸ್ವಾಮಿ ಉದ್ದೇಶಿತ ರಸ್ತೆ ವಿಸ್ತರಣೆ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಇಲ್ಲಿಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 14 ಗ್ರಾಮಗಳ 4043.27 ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಬಡಾವಣೆ ನಿರ್ಮಿಸುತ್ತಿದೆ. ಅಲ್ಲಿ 300 ಅಡಿ ಅಗಲದ ರಸ್ತೆ ನಿರ್ಮಿಸಲಾಗುತ್ತಿದೆ. ವಾಣಿಜ್ಯ ಸಂಕೀರ್ಣಗಳು, ಅಂಗಡಿ-ಮುಂಗಟ್ಟುಗಳು, ಮದುವೆ ಛತ್ರಗಳು, ಪೆಟ್ರೋಲ್‌ ಪಂಪ್‌ಗ್ಳು ಅಧಿಕವಾಗಿವೆ. ಗಾರ್ಮೆಂಟ್‌ ಕಾರ್ಖಾನೆಗಳು, ಪ್ರತಿಷ್ಠಿತ ವಿದ್ಯಾಸಂಸ್ಥೆ ಗಳು ಇಲ್ಲಿವೆ. ಈ ರಸ್ತೆ ಮೂಲಕ 40 ಸಾವಿರ ವಾಹನಗಳು ಸಂಚರಿಸುತ್ತವೆ ಎಂದು ಅಂದಾಜಿಸಲಾಗಿದೆ. ಸುತ್ತಲಿನ ಪ್ರದೇಶಗಳೂ ಶರವೇಗದಲ್ಲಿ ಬೆಳವಣಿಗೆ ಆಗುತ್ತಿವೆ. ಆದರೆ, ಮಾಗಡಿ ಮುಖ್ಯರಸ್ತೆ ಅಭಿವೃದ್ಧಿಗೆ ಮಾತ್ರ ಕಾಲಕೂಡಿ ಬಂದಿಲ್ಲ.

Advertisement

ನೈಸ್‌ ಜಂಕ್ಷನ್‌ ದೊಡ್ಡ ಗೊಲ್ಲರಹಟ್ಟಿಯಿಂದ ಮಾಗಡಿ ಪಟ್ಟಣದವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಸತತ ನಾಲ್ಕು ವರ್ಷಗಳಿಂದ ಶಕ್ತಿ ಮೀರಿ ಪ್ರಯತ್ನ ನಡೆಸಿದ್ದರೂ ವಿಳಂಬವಾಗಿದೆ. ಕೇಂದ್ರ ಸಚಿವ ಸದಾನಂದಗೌಡರ ನೇತೃತ್ವದಲ್ಲಿ ಲೋಕೋಪಯೋಗಿ ಸಚಿವರು, ಅಧಿಕಾರಿಗಳ ಸಭೆ ನಡೆಸಿ ಮಾಗಡಿ ಮುಖ್ಯರಸ್ತೆ ವಿಸ್ತರಣೆ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುವುದು.  –ಎಸ್‌.ಟಿ. ಸೋಮಶೇಖರ್‌, ಶಾಸಕ

 

-ಶ್ರೀನಿವಾಸ್‌ ಅಣ್ಣಯ್ಯಪ್ಪ

Advertisement

Udayavani is now on Telegram. Click here to join our channel and stay updated with the latest news.

Next