Advertisement

2021:ಭಾರತೀಯ ಕ್ರಿಕೆಟಿಗೆ ಬಿಡುವಿಲ್ಲದ ವರ್ಷ: ಏಶ್ಯಕಪ್‌, ಟಿ20 ವಿಶ್ವಕಪ್ ಜತೆಗೆ 43 ಪಂದ್ಯ

08:05 AM Nov 19, 2020 | keerthan |

ಹೊಸದಿಲ್ಲಿ: ಕೋವಿಡ್‌-19 ಕಾರಣದಿಂದ ಈ ವರ್ಷ ಜಾಗತಿಕ ಕ್ರಿಕೆಟಿಗೆ ದೊಡ್ಡದೊಂದು ಬ್ರೇಕ್‌ ಬಿದ್ದಿರಬಹುದು, ಆದರೆ 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ದೊಡ್ಡ ಮಟ್ಟದಲ್ಲೇ ಸಾಗುವ ಎಲ್ಲ ಸೂಚನೆ ಲಭಿಸಿದೆ. ಭಾರತ ಕೂಡ ಸತತವಾಗಿ ಕ್ರಿಕೆಟ್‌ ಸರಣಿಗಳಲ್ಲಿ ಪಾಲ್ಗೊಳ್ಳಲಿದ್ದು, ಬಿಡುವಿಲ್ಲದಷ್ಟು ಪಂದ್ಯಗಳನ್ನಾಡಲಿದೆ.

Advertisement

ಒಂದು ಲೆಕ್ಕಾಚಾರದ ಪ್ರಕಾರ ಟೀಮ್‌ ಇಂಡಿಯಾ 2021ರಲ್ಲಿ 14 ಟೆಸ್ಟ್‌, 16 ಏಕದಿನ, 23 ಟಿ20 ಪಂದ್ಯಗಳ ಜತೆಗೆ ಏಶ್ಯಕಪ್‌ ಮತ್ತು ಟಿ20 ವಿಶ್ವಕಪ್‌ ಪಂದ್ಯಾವಳಿಗಳಲ್ಲಿ ಆಡಲಿದೆ. ಕೆಲವು ಸರಣಿಗಳ ಏಕದಿನ ಹಾಗೂ ಟಿ20 ಪಂದ್ಯಗಳನ್ನು ಇನ್ನಷ್ಟೇ ನಿರ್ಧರಿಸಬೇಕಿದೆ.

ಒಟ್ಟಾರೆ ಜನವರಿಯಿಂದ ಡಿಸೆಂಬರ್‌ ತನಕ ಭಾರತ ಕ್ರಿಕೆಟ್‌ ಪ್ರೇಮಿಗಳಿಗೆ ಹಬ್ಬವೋ ಹಬ್ಬ. ಮಳೆಗಾಲ ಸೇರಿದಂತೆ ಪ್ರತೀ ತಿಂಗಳಲ್ಲೂ ಕ್ರಿಕೆಟ್‌ ಕ್ರಿಕೆಟ್‌ ಕ್ರಿಕೆಟ್‌!

ಆವರ್ತನ ಪದ್ಧತಿ ಹೆಚ್ಚು ಅನುಕೂಲಕರ

“ಹೌದು, ಒಂದು ವರ್ಷದ ಅವಧಿಯಲ್ಲಿ ಇಷ್ಟೊಂದು ಪಂದ್ಯಗಳನ್ನು ಆಡುವುದು ಕಷ್ಟ. ಆದರೆ ಫ್ಯೂಚರ್‌ ಟೂರ್‌ ಪ್ರೋಗ್ರಾಂಗೆ (ಎಫ್ಟಿಪಿ) ನಾವು ಗೌರವ ನೀಡಲೇ ಬೇಕು. ನಮ್ಮಲ್ಲಿ ಪ್ರತಿಭಾನ್ವಿತ ಕ್ರಿಕೆಟಿಗರ ದೊಡ್ಡ ಪಡೆಯೇ ಇದೆ. ಈ ಸಂದರ್ಭದಲ್ಲಿ ಆವರ್ತನ ಪದ್ಧತಿ ಹೆಚ್ಚು ಅನುಕೂಲಕರವಾಗಿ ಪರಿಣಮಿಸಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

ಭಾರತದ 2021ರ ಕ್ರಿಕೆಟ್‌ ಸರಣಿ

*ಜನವರಿ-ಮಾರ್ಚ್‌: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ 4 ಟೆಸ್ಟ್‌, 4 ಏಕದಿನ, 4 ಟಿ20 ಪಂದ್ಯಗಳ ಸರಣಿ.

* ಮಾರ್ಚ್‌-ಮೇ: 14ನೇ ಐಪಿಎಲ್‌ ಪಂದ್ಯಾವಳಿ. ಇದು ಅಂತಾರಾಷ್ಟ್ರೀಯ ಸರಣಿ ಅಲ್ಲದೇ ಹೋದರೂ ಭಾರತದ ಬಹುತೇಕ ಕ್ರಿಕೆಟಿಗರು ಇದರಲ್ಲಿ ಪಾಲ್ಗೊಳ್ಳುತ್ತಾರೆ.

* ಶ್ರೀಲಂಕಾ ಪ್ರವಾಸ: ಐಪಿಎಲ್‌ ಮುಗಿದ ಕೂಡಲೇ ಭಾರತ ತಂಡದ ಶ್ರೀಲಂಕಾ ಪ್ರವಾಸ ಆರಂಭವಾಗಲಿದೆ. ಅಲ್ಲಿ 3 ಏಕದಿನ, 5 ಟಿ20 ಪಂದ್ಯಗಳ ಸರಣಿಯ ಜತೆಗೆ ಏಶ್ಯ ಕಪ್‌ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ.

* ಜಿಂಬಾಬ್ವೆ ಪ್ರವಾಸ: ಶ್ರೀಲಂಕಾ ಸರಣಿ ಮುಗಿದೊಡನೆ 3 ಪಂದ್ಯಗಳ ಏಕದಿನ ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ.

* ಜುಲೈ-ಸೆಪ್ಟಂಬರ್‌: 5 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಇಂಗ್ಲೆಂಡಿಗೆ ತೆರಳಲಿದೆ.

* ಅಕ್ಟೋಬರ್‌: ಟೀಮ್‌ ಇಂಡಿಯಾ ಇಂಗ್ಲೆಂಡಿನಿಂದ ಬಂದೊಡನೆಯೇ ತವರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಲಿದೆ. ಇದರಲ್ಲಿ 3 ಏಕದಿನ, 5 ಟಿ20 ಪಂದ್ಯಗಳಿವೆ.

* ಟಿ20 ವಿಶ್ವಕಪ್‌: 2021ರ ಅತೀ ದೊಡ್ಡ ಕ್ರಿಕೆಟ್‌ ಕೂಟವೆಂದರೆ ಟಿ20 ವಿಶ್ವಕಪ್‌. ಇದು ಅಕ್ಟೋಬರ್‌-ನವೆಂಬರ್‌ನಲ್ಲಿ ಭಾರತದಲ್ಲಿ ಸಾಗಲಿದೆ.

* ನವೆಂಬರ್‌-ಡಿಸೆಂಬರ್‌: ನ್ಯೂಜಿಲ್ಯಾಂಡ್‌ ತಂಡದ ಆಗಮನ. 2 ಟೆಸ್ಟ್‌, 3 ಟಿ20 ಪಂದ್ಯಗಳು ನಡೆಯಲಿವೆ.

* ದಕ್ಷಿಣ ಆಫ್ರಿಕಾ ಪ್ರವಾಸ: ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು 3 ಟೆಸ್ಟ್‌, 3 ಟಿ20 ಪಂದ್ಯಗಳನ್ನಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next