Advertisement
ಸಿಲಿಕಾನ್ ಸಿಟಿಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಒಂದೆಡೆ ಸಾಮಾನ್ಯ ಜನರನ್ನು ಸೇರಿದಂತೆ ಖಾಸಗಿ ಸಂಘ ಸಂಸ್ಥೆ, ನಾಗರಿಕ ವೇದಿಕೆಗಳು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿವೆ. ಮತ್ತೂಂದೆಡೆ ಜಾಗೃತಿ ಹೊಣೆ ಹೊತ್ತ ಚುನಾವಣಾ ಆಯೋಗದ ಜಾಗೃತಿ ವಿಭಾಗ (ಸ್ವೀಪ್) ಹಾಗೂ ಸ್ವಯಂ ಪ್ರೇರಣೆಯಿಂದ ಜಾಗೃತಿಗೆ ಮುಂದಾಗಬೇಕಾದ ಬಿಬಿಎಂಪಿ ಮಾತ್ರ ನೆಪ ಮಾತ್ರಕ್ಕೆ ಜಾಗೃತಿ ಕಾರ್ಯದಲ್ಲಿ ನಿರತವಾಗಿವೆ.
Related Articles
Advertisement
ಅಂಗೈ ಅಗಲದ ಚಿಕ್ಕ ಗಾತ್ರದಿಂದ ಹಿಡಿದು ನೂರಾರು ಅಡಿ ವಿಸ್ತೀರ್ಣದ ಜಾಹೀರಾತುಗಳು ಇಲ್ಲಿವೆ. ಇಲ್ಲಿ ಮತದಾನದ ಜಾಗೃತಿ ಮೂಡಿಸುವ ಫಲಕಗಳು, ಹೋಲ್ಡಿಂಗ್ಸ್, ವಿನೈಲ್‌ಗಳನ್ನು ಬಳಸುವ ಯೋಚನೆ ಹಾಗೂ ಜವಾಬ್ದಾರಿ ಬಿಬಿಎಂಪಿ ಹಾಗೂ ಸ್ವೀಪ್‌ಗೆ ಅಗತ್ಯವಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಜಾಹೀರಾತಿಗೇಕೆ ಹಿಂದೇಟು?: ಸಾರ್ವಜನಿಕರ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಬಿಬಿಎಂಪಿ ನಗರದ ಎಲ್ಲಾ ಸ್ಕೈವಾಕ್, ಸುರಂಗ ಮಾರ್ಗ ಹಾಗೂ ಬಸ್ ತಂಗುದಾಣವನ್ನು ನಿರ್ಮಿಸಿದೆ. ಈ ಪಿಪಿಪಿ ಮಾದರಿಯಲ್ಲಿ ಸ್ಕೈವಾಕ್, ಸುರಂಗ ಹಾಗೂ ಬಸ್ ತಂಗುದಾಣಗಳ ನಿರ್ಮಾಣಕ್ಕೆ ಪಾಲಿಕೆ ಜಾಗ ಮಾತ್ರ ನೀಡುತ್ತದೆ.
ಉಳಿದಂತೆ ಜಾಹೀರಾತು ಕಂಪನಿಗಳು ತಮ್ಮ ಬಂಡವಾಳ ಹಾಕಿ ಅವುಗಳನ್ನು ನಿರ್ಮಿಸುತ್ತವೆ. ಹೀಗಾಗಿ, ಮುಂದಿನ 30 ವರ್ಷಗಳ ಮಟ್ಟಿಗೆ ಆ ಕಂಪನಿಯೇ ಜಾಹೀರಾತಿಗೆ ಬಳಸಿಕೊಳ್ಳುತ್ತವೆ. ಆದರೆ, ಪಾಲಿಕೆಗೆ ಪ್ರತಿ ವರ್ಷ ನೆಲ ಬಾಡಿಗೆ ಹಾಗೂ ಜಾಹೀರಾತು ಶುಲ್ಕವನ್ನು ಮಾತ್ರ ಪಾವತಿಸುತ್ತವೆ. ಇಂಥ ವೇಳೆ ಬಿಬಿಎಂಪಿ ಹಕ್ಕು ಚಲಾಯಿಸಿ ಜಾಗೃತಿ ಫಲಕ ಅಥವಾ ಬರಹ ಹಾಕಲು ಸೂಚಿಸುವುದಿಲ್ಲ.
ಒಂದು ವೇಳೆ ಜಾಗೃತಿ ಫಲಕ ಹಾಕಲು ಮುಂದಾದರೂ ಜಾಹೀರಾತು ಶುಲ್ಕ ನೀಡಬೇಕಾಗುತ್ತದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು. ಉಳಿದಂತೆ ಚುನಾವಣಾ ಆಯೋಗದ ಸ್ವೀಪ್ ಅಧಿಕಾರಿಗಳನ್ನು ಕೇಳಿದರೆ ಬಿಬಿಎಂಪಿಯೇ ಸ್ವಯಂ ಪ್ರೇರಣೆಯಿಂದ ಹಾಕಬೇಕು ಈ ಕುರಿತು ಮಾತನಾಡುತ್ತೇವೆ ಎಂದು ಹೇಳುತ್ತಾರೆ. ಒಟ್ಟಾರೆಯಾಗಿ ಇಬ್ಬರ ನಿರ್ಲಕ್ಷ್ಯದಿಂದ ಈ ಸಾರ್ವಜನಿಕ ಜಾಹೀರಾತು ಸ್ಥಳಗಳು ಮಾತ್ರ ಮತದಾನ ಜಾಗೃತಿಯಿಂದ ದೂರ ಉಳಿಯುತ್ತಿವೆ.
ಸ್ಕೈವಾಕ್ ಹಾಗೂ ಬಸ್ ತಂಗುದಾಣಗಳು ಪಿಪಿಪಿ ಮಾದರಿಯದ್ದಾಗಿದ್ದು, 30 ವರ್ಷಗಳ ಮಟ್ಟಿಗೆ ಖಾಸಗಿ ಕಂಪನಿಗೆ ಲೀಸ್ ಹಾಕಿರುತ್ತೇವೆ. ಅಲ್ಲಿ ಜಾಹೀರಾತನ್ನು ನಾವು ನೀಡಬೇಕೆಂದರೂ ಶುಲ್ಕ ಪಾವತಿಸಬೇಕಾಗುತ್ತದೆ. ಜತೆಗೆ ಶುಲ್ಕವು ದುಬಾರಿ ಇದ್ದು, ಜಾಗೃತಿಗೆ ಅಷ್ಟೊಂದು ಖರ್ಚು ಮಾಡಲು ಅನುದಾನ ಕೊರತೆ ಇದೆ. ಬಿಬಿಎಂಪಿ ವ್ಯಾಪ್ತಿ ಕಟ್ಟಡಗಳಿಗೆ ಜಾಗೃತಿ ಫಲಕ ಹಾಕುತ್ತೇವೆ.-ಎಸ್.ಜಿ.ರವೀಂದ್ರ, ಆಸ್ತಿ ವಿಭಾಗದ ವಿಶೇಷ ಆಯುಕ್ತ, ಬಿಬಿಎಂಪಿ ಸ್ವಯಂಪ್ರೇರಣೆಯಿಂದ ಪಾಲಿಕೆಯೇ ಚುನಾವಣಾ ಜಾಗೃತಿ ಜಾಹೀರಾತುಗಳನ್ನು ಹಾಕಬೇಕಾಗಿದೆ. ಈ ಕುರಿತು ಬಿಬಿಎಂಪಿ ಜತೆಗೆ ಮಾತುಕತೆ ನಡೆಸಿ ಶೀಘ್ರ ತೀರ್ಮಾನವೊಂದಕ್ಕೆ ಬರಲಾಗುವುದು.
-ವಿ.ಎಸ್. ವಸ್ತ್ರದ್, ಸ್ವೀಪ್ ಸಮಾಲೋಚಕ * ಜಯಪ್ರಕಾಶ್ ಬಿರಾದಾರ್