Advertisement

ವಿದ್ಯಾಪೀಠಕ್ಕಾಗಿ ಪಿಗ್ಮಿ ಕಟ್ಟುತ್ತಿದ್ದ ಉದ್ಯಮಿಗಳು

10:52 PM Dec 29, 2019 | Lakshmi GovindaRaj |

ಬೆಂಗಳೂರು: ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯವರ ಕನಸಿನ ಕೂಸು ಪೂರ್ಣಪ್ರಜ್ಞಾ ವಿದ್ಯಾಪೀಠ ನಿರ್ಮಾಣಕ್ಕಾಗಿ ನಗರದ ಉದ್ಯಮಿಗಳು ನಿತ್ಯ ತಲಾ ನಾಲ್ಕಾಣೆ ಪಿಗ್ಮಿ ಕಟ್ಟುತ್ತಿದ್ದರು! “ನಗರದ ಕತ್ರಿಗುಪ್ಪೆಯಲ್ಲಿದ್ದ ಸಣ್ಣ ಜಾಗವನ್ನು ಧಾರ್ಮಿಕ ಕೇಂದ್ರವನ್ನಾಗಿ ಮಾಡಬೇಕು. ಆ ಮೂಲಕ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕಲ್ಪಿಸಬೇಕು ಎಂಬ ಉದ್ದೇಶವನ್ನು ಪೇಜಾವರ ಶ್ರೀಗಳು ಹೊಂದಿದ್ದರು.

Advertisement

ಅದಕ್ಕಾಗಿ ನಗರದ ಉದ್ಯಮಿಗಳು ನಿತ್ಯದ ಆದಾಯದಲ್ಲಿ ಕನಿಷ್ಠ ನಾಲ್ಕಾಣೆಯನ್ನು ಕೊಡಿ ಎಂದು ಕರೆ ನೀಡಿದರು. ಅದಕ್ಕೆ ಸ್ಪಂದಿಸಿದ ಹೋಟೆಲ್‌ ಮತ್ತಿತರ ಉದ್ಯಮಿಗಳು ನಿತ್ಯ ನಾಲ್ಕಾಣೆ ಪಿಗ್ಮಿ ಪಾವತಿಸುತ್ತಿದ್ದರು. ಅದು ನೇರವಾಗಿ ವಿದ್ಯಾಪೀಠದ ಖಾತೆಗೆ ಜಮೆ ಆಗುತ್ತಿತ್ತು. ಹೀಗೆ ಪಿಗ್ಮಿ ಕಟ್ಟುತ್ತಿದ್ದವರಲ್ಲಿ ನಾನೂ ಒಬ್ಬ’ ಎಂದು ಬಾಳೇಕುದ್ರು ರಾಮಚಂದ್ರ ಉಪಾಧ್ಯ ತಿಳಿಸಿದರು.

1966-67ರ ಸುಮಾರಿನಲ್ಲಿ ವಿದ್ಯಾಪೀಠದಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗಾಗಿ “ಪ್ರತಿ ಮನೆಯಲ್ಲಿ ನಿತ್ಯ ನೀವು ಮಾಡುವ ಅನ್ನದಲ್ಲಿ ಹಿಡಿ ಅಕ್ಕಿಯನ್ನು ತೆಗೆದಿಡಿ’ ಎಂದು ಸ್ವಾಮೀಜಿ ಪೀಠದ ಸುತ್ತಲಿದ್ದ ನಿವಾಸಿಗಳಿಗೆ ಮನವಿ ಮಾಡಿದ್ದರು. ಅದೇ ರೀತಿ, ಹೋಟೆಲ್‌ ಮತ್ತಿತರ ಉದ್ಯಮಿಗಳಿಗೂ ಸೂಚಿಸಿದ್ದರು. ಆಗ ನಮ್ಮ ಹೋಟೆಲ್‌ ತಿಗಳರ ಪೇಟೆಯಲ್ಲಿ ರಾಮವಿಲಾಸ ಎಂದಿತ್ತು. ಪ್ರತಿ ದಿನ 150ರಿಂದ 200 ರೂ. ವಹಿವಾಟು ಆಗುತ್ತಿತ್ತು.

ಅದರಲ್ಲಿ ನಾಲ್ಕಾಣೆ ಪಿಗ್ಮಿ ತುಂಬುತ್ತಿದ್ದೆ. ನನ್ನಂತೆಯೇ ನೂರಾರು ಉದ್ಯಮಿಗಳು ಹಲವು ವರ್ಷಗಳ ಕಾಲ ಹೀಗೆ ಪಿಗ್ಮಿ ತುಂಬಿದ್ದಾರೆ ಎಂದು ಅವರು ಮೆಲುಕು ಹಾಕಿದರು. ಶ್ರೀಗಳ ಆ ದೂರದೃಷ್ಟಿಯ ಫ‌ಲವಾಗಿ ಇಂದು ವಿದ್ಯಾಪೀಠವು ಹೆಮ್ಮರವಾಗಿ ಬೆಳೆದಿದೆ. ಅದರಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ದೊಡ್ಡ ಸ್ಕಾಲರ್‌ಗಳಾಗಿ ಹೊರಹೊಮ್ಮಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಉಚಿತ ಶಿಕ್ಷಣದ ಜತೆಗೆ ಉದ್ಯೋಗ, ಪೌರೋಹಿತ್ಯ ಕೂಡ ಅಲ್ಲಿ ದೊರೆಯುತ್ತಿದೆ ಎಂದು ಅವರು ಹೇಳಿದರು.

ಬದಲಾಯ್ತು ಹೋಟೆಲ್‌ ಹಣೆಪಟ್ಟಿ: ಹೋಟೆಲ್‌ ಉದ್ಯಮ ಮತ್ತು ಉಡುಪಿ ಪೇಜಾವರ ಶ್ರೀಗಳ ನಡುವೆ ಅನ್ಯೋನ್ಯ ಸಂಬಂಧವಿದೆ. ಹೋಟೆಲ್‌ ಉದ್ಯಮದಲ್ಲಿ ಉಡುಪಿ ಸದಾ ಮುಂದೆ. ಇದಕ್ಕೆ ಪೇಜಾವರ ಶ್ರೀಗಳ ಪ್ರೋತ್ಸಾಹವೇ ಕಾರಣವಾಗಿತ್ತು. ಶ್ರೀಗಳ ಜ್ಯಾತ್ಯತೀತ ಮನೋಭಾವದಿಂದಲೇ ಹೋಟೆಲ್‌ಗ‌ಳಿಗೆ ಅಂಟಿಕೊಂಡಿದ್ದ “ಸಮುದಾಯದ ಹಣೆಪಟ್ಟಿ’ ಕೂಡ ದೂರವಾಯಿತು ಎಂದೂ ತಿಳಿಸಿದರು.

Advertisement

ಆರಂಭದಲ್ಲಿ ಬಹುತೇಕ ಉಡುಪಿ ಮೂಲದ ಹೋಟೆಲ್‌ಗ‌ಳೇ ಇದ್ದವು. ಅವುಗಳ ಹೆಸರು “ಉಡುಪಿ ಬ್ರಾಹ್ಮಣ ಹೋಟೆಲ್‌’ ಎಂದು ಇರುತ್ತಿತ್ತು. ಸ್ವಾಮೀಜಿಗಳ ಪ್ರಭಾವದಿಂದ ಅವುಗಳು ಉಡುಪಿ ದರ್ಶಿನಿ, ಉಡುಪಿ ಗ್ರ್ಯಾಂಡ್‌, ಕೃಷ್ಣ ಗಾರ್ಡನ್‌ ಇತ್ಯಾದಿ ಹೆಸರುಗಳಲ್ಲಿ ಚಾಲ್ತಿಗೆ ಬಂದವು. ಹೋಟೆಲ್‌ ಮಾಲೀಕರ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಅತಿಥಿಗಳಾಗಿ ಭಾಗವಹಿಸುತ್ತಿದ್ದರು. ಉಡುಪಿಯ ಸಾವಿರಾರು ಹೋಟೆಲ್‌ ಉದ್ಯಮಿಗಳಿಗೆ ಮಾರ್ಗದರ್ಶಕರಾಗಿದ್ದರು ಎಂದೂ ಪೂರ್ಣಿಮಾ ಗಾರ್ಡನ್‌ ಹೋಟೆಲ್‌ ಮಾಲಿಕ ರಾಮಚಂದ್ರ ಉಪಾಧ್ಯ ನೆನಪು ಮಾಡಿಕೊಂಡರು.

ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆ
ಬೆಂಗಳೂರು: ಜಯನಗರದಲ್ಲಿರುವ ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆ ಕೂಡ ಪೇಜಾವರ ಶ್ರೀಗಳ ಕನಸಿನ ಕೂಸು. ಇದನ್ನು ಮೇಲ್ದರ್ಜೆಗೇರಿಸಬೇಕೆಂಬ ಆಶಯ ಪೂರ್ಣಗೊಳ್ಳಲಿಲ್ಲ. 1962ರಲ್ಲಿ ಆರಂಭಗೊಂಡ ಧರ್ಮಾರ್ಥ ಹೊರರೋಗಿಗಳ ಚಿಕಿತ್ಸಾ ಕೇಂದ್ರವು ಇಂದು 50 ಹಾಸಿಗೆಗಳುಳ್ಳ ಸುಸಜ್ಜಿತ ಆಸ್ಪತ್ರೆಯಾಗಿ ತಲೆಯೆತ್ತಿದೆ. ಇದನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ಸರ್ವಧರ್ಮೀಯರು, ಬಡ ರೋಗಿಗಳಿಗಾಗಿ ನಿರ್ಮಿಸಲಾಗಿದ್ದು, ಸಂಸ್ಥೆಯ ಕಟ್ಟಡ, ಪೀಠೊಪಕರಣಗಳು, ಔಷಧೋಪಚಾರಗಳೆಲ್ಲವೂ ಉದ್ಯಮಿಗಳು ಮತ್ತು ದಾನಿಗಳ ನೆರವಿನಿಂದ ಲಭಿಸಿದೆ.

ಪೇಜಾವರ ಶ್ರೀಗಳ ಶಿಕ್ಷಣ ಕೊಡುಗೆ
ಬೆಂಗಳೂರು: ಸಮಾಜದ ಬುದ್ದಿಮಾಂದ್ಯ ಮತ್ತು ವಿಕಲಾಂಗ ಮಕ್ಕಳ ಕಲ್ಯಾಣಕ್ಕಾಗಿ ಅರುಣ ಚೇತನ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ ಕೀರ್ತಿ ಪೇಜಾವರ ಶ್ರೀಗಳಿಗೆ ಸಲ್ಲುತ್ತದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಈ ಸಂಸ್ಥೆಯ ನಿರ್ವಹಣೆ ಮತ್ತು ಆಡಳಿತವನ್ನು ನಿವೃತ್ತ ಐಎಎಸ್‌ ಅಧಿಕಾರಿಗಳು, ಉದ್ಯಮಿಗಳು ಮತ್ತು ಸಮಾಜ ಸೇವಕರ ಸಹಕಾರದೊಂದಿಗೆ ವಿಶ್ವಸ್ಥ ಮಂಡಳಿ ನೋಡಿಕೊಳ್ಳುತ್ತಿದೆ. ಮಕ್ಕಳಿಂದ ಯಾವುದೇ ಶುಲ್ಕ ಪಡೆಯದೇ ಸಂಘ ಸಂಸ್ಥೆಗಳಿಂದ ದೇಣಿಗೆ ಪಡೆದು ಸಂಸ್ಥೆಯನ್ನು ನಡೆಸಲಾಗುತ್ತಿದೆ.

ಸಂಸ್ಥೆಯಲ್ಲಿ ಮಕ್ಕಳ ಆಸಕ್ತಿ ಮತ್ತು ಅಗತ್ಯತೆಗೆ ಅನುಸಾರವಾಗಿ ಯೋಗ, ವಾಕ್‌ ಶ್ರವಣ ಚಿಕಿತ್ಸೆ, ವಿವಿಧ ಕ್ರೀಡೆ, ಸಂಗೀತ, ಚಿತ್ರಕಲೆ, ರೇಖಾ ಚಿತ್ರ ತರಬೇತಿಗಳನ್ನು ನೀಡಲಾಗುತ್ತಿದೆ. ಇದೇ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಯೊಬ್ಬ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ, ಬೇರೆ ಶಾಲೆಗೆ ಪ್ರವೇಶ ಪಡೆದು ತನ್ನ ಜೀವನವನ್ನು ರೂಪಿಸಿಕೊಂಡಿರುವ ಯಶೋಗಾಥೆ ಅರುಣ ಚೇತನ ಸಂಸ್ಥೆಗಿದೆ. ಆರಂಭದಲ್ಲಿ ಐವರು ಮಕ್ಕಳೊಂದಿಗೆ ಪ್ರಾರಂಭವಾದ ಈ ಸಂಸ್ಥೆ ಇದೀಗ 100ಕ್ಕೂ ಹೆಚ್ಚು ಮಕ್ಕಳಿಗೆ ಆಶ್ರಯ ಮತ್ತು ಭವಿಷ್ಯ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next