ಬೆಂಗಳೂರು: ಕೋವಿಡ್ 19 ಸೋಂಕು ತಡೆಗೆ ಲಾಕ್‌ಡೌನ್ ಘೋಷಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಸ್ವಾಗತಿಸಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ದೇಶ ಎದುರಿಸುತ್ತಿರುವ ಆರ್ಥಿಕ ಹಿಂಜರಿಕೆ ಪರಿಸ್ಥಿತಿ ಎದುರಿಸಲು 1.2 ಲ.ಕೋ. ರೂ. ಪ್ಯಾಕೇಜ್, ಎಂಎಸ್‌ಎಂಇ, ಜಿಎಸ್‌ಟಿ ಮತ್ತು ಇತರರಿಗೆ ಪರಿಹಾರ ಘೋಷಿಸಿರುವುದನ್ನು ಶ್ಲಾಘಿಸಿದೆ.
ಈ ಸಂಬಂಧ ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಸರಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಜತೆಗೆ ವ್ಯಾಪಾರ, ಉದ್ಯೋಗದಾತರು, ನಾಗರಿಕರ ಹಿತ ಕಾಪಾಡುವ ದೃಷ್ಟಿಯಿಂದ ಕೆಲವು ಸಲಹೆಗಳನ್ನು ನೀಡಿದ್ದಾರೆ.
ರಾಜ್ಯಕ್ಕೆ ನೀಡಬೇಕಾದ ಕೇಂದ್ರದ ಪಾವತಿ ಷೇರುಗಳನ್ನು ತತ್‌ಕ್ಷಣ ಬಿಡುಗಡೆ ಮಾಡಬೇಕು. 25 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 6 ತಿಂಗಳುಗಳವರೆಗೆ ಎಂಎಟಿ ಪಾವತಿಯಿಂದ ವಿನಾಯಿತಿ ನೀಡಬೇಕು ಇಲ್ಲವೇ ಎಂಎಸ್‌ಎಂಇಗಳಿಗೆ ಎಂಎಟಿ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ದೀರ್ಘಾವಧಿಯ ಮರುಪಾವತಿ ಅವಧಿಯೊಂದಿಗೆ ಅವಧಿಯ ಸಾಲಗಳ ಮರು ಹೊಂದಿಸುವುದು, ಮೂರು ತಿಂಗಳುಗಳವರೆಗೆ ಬಡ್ಡಿ ಪಾವತಿ ವಿನಾಯಿತಿ, 2020ರ ಜೂನ್‌ವರೆಗೆ ಹಣಕಾಸು ವರ್ಷವನ್ನು ಮುಂದೂಡುವುದು, ಕನಿಷ್ಠ ವೇತನವನ್ನು ಒಂದು ವರ್ಷದೊಳಗೆ ಪಾವತಿಸುವಲ್ಲಿ ಸಡಿಲಿಕೆ, ವಿದ್ಯುತ್, ನೀರು ಬಳಕೆ ಮೇಲೆ ಆರು ತಿಂಗಳುಗಳವರೆಗೆ ನಿಗದಿತ ಶುಲ್ಕ ಸಂಗ್ರಹಿಸದಂತೆ ರಾಜ್ಯ ಸರಕಾರಕ್ಕೆ ಸಲಹೆ ನೀಡಬೇಕು ಎಂದು ಕೋರಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಉದ್ದಿಮೆಗಳಿಗೆ ಕೆಳಕಂಡಂತೆ ವೇತನ ನೀಡಲು ಅನುಮತಿ ನೀಡಬೇಕು. ಮುಖ್ಯವಾಗಿ 15,000ರೂ.ಗಳಿಗಿಂತ ಕಡಿಮೆ ವೇತನವಿದ್ದವರಿಗೆ ಪೂರ್ಣ ವೇತನ ನೀಡಲು ಉದ್ದಿಮೆಗಳು ಒಪ್ಪಬೇಕು. 15,000 ರೂ. ಗಳಿಂದ 50,000 ರೂ. ವರೆಗಿನ ವೇತನದವರಿಗೆ ಲಾಕ್‌ಡೌನ್‌ಯಲ್ಲಿ ಶೇ. 50ರಷ್ಟು ವೇತನ ಮತ್ತು 50,000 ರೂ.ಗಳಿಗಿಂತ ಹೆಚ್ಚಿನ ವೇತನದಾರರಿಗೆ ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ವೇತನ ನೀಡದಿರಲು ಅನುಮತಿ ನೀಡಬೇಕು ಎಂದು ಕೋರಿದ್ದಾರೆ. ಆರು ತಿಂಗಳಗಳವರೆಗೆ ಸ್ಥಿರ ವೆಚ್ಚ ಸರಿದೂಗಿಸಲು ಎಂಎಸ್‌ಎಂಇಗಳಿಗೆ ಬಡ್ಡಿರಹಿತ ಸಾಲ. ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ದಿನಾಂಕ ವಿಸ್ತರಿಸಬೇಕು. ಜಿಎಸ್‌ಟಿ ಮರುಪಾವತಿಯನ್ನು ತ್ವರಿತಗೊಳಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.