Advertisement

ಕೋಲಾರದ ಬೀದಿಯಿಂದ ‘ಕೊಸ್ಕಿ’ಯವರೆಗೆ….; ಯಶಸ್ವಿ ಉದ್ಯಮಿಯೊಬ್ಬರ ಯಶೋಗಾಥೆ

03:46 PM Aug 18, 2022 | ಕೀರ್ತನ್ ಶೆಟ್ಟಿ ಬೋಳ |

16 ವರ್ಷದ ಬಾಲಕನಿಗೆ ಅಂದು ದಿಕ್ಕು ತೋಚದಂತಾಗಿತ್ತು. ಆಗ ತಾನೆ ಹತ್ತನೇ ತರಗತಿ ಓದು ಮುಗಿದು ಪಿಯುಸಿ ಆರಂಭವಾಗಿತ್ತು. ಆದರೆ ಅಂದು ಮನೆಗೆ ಬಂದ ಅಪ್ಪ, ನೀನು ಇನ್ನು ಶಾಲೆಗೆ ಹೋಗುವುದು ಬೇಡ, ಅಂಗಡಿ ನೋಡಿಕೋ ಎಂದಿದ್ದರು. ಕಷ್ಟದ ದಿನಗಳನ್ನು ನೋಡುತ್ತಿದ್ದ ಅಪ್ಪನಿಗೆ ಹಿರಿಯ ಮಗನಾಗಿ ಸಹಾಯ ಮಾಡಲೇಬೇಕು, ಆದರೆ ತನಗಿನ್ನೂ ಓದಬೇಕು… ಹೀಗೆಂದು ಹೇಳುತ್ತಿದ್ದ ಉಮರ್ ಅಖ್ತರ್ ಕಣ್ಣಲ್ಲಿ ನೀರು ಜಿನುಗಿತ್ತು. ಅಂದಹಾಗೆ ಅಂದು ಅಷ್ಟೊಂದು ಕಷ್ಟದ ದಿನಗಳನ್ನು ಕಂಡ ಉಮರ್ ಈಗ 35 ಕೋಟಿ ರೂ ಒಡೆಯ. ಪ್ರಸಿದ್ದ ವಸ್ತ್ರ ಮಳಿಗೆ ‘ಕೊಸ್ಕಿ’ಯ ಯಜಮಾನ ಈ ಉಮರ್ ಅಖ್ತರ್.

Advertisement

ಬೆಂಗಳೂರಿನ ಸೀರೆ ವಿತರಕ ಸೈಫುಲ್ಲಾ ಅಖ್ತರ್ ಅವರ ಆರು ಮಂದಿ ಮಕ್ಕಳಲ್ಲಿ ಮೊದಲನೇ ಮಗ ಈ ಉಮರ್. ಸೈಫುಲ್ಲಾ ಅವರು ಬೆಂಗಳೂರು ಮತ್ತು ಹೈದರಾಬಾದ್ ನ ಚಿಲ್ಲರೆ ವ್ಯಾಪಾರಸ್ಥರಿಗೆ ಸೀರೆಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ ಒಂದು ಕೆಟ್ಟ ದಿನ ಅವರ ಜೀವನವನ್ನೇ ಬದಲಾಯಿಸಿತು. ಅದೇನೋ ಸಮಸ್ಯೆಯಾಗಿ ಹೈದರಾಬಾದ್ ನ ವ್ಯಾಪಾರಸ್ಥರು ತಮ್ಮಅಂಗಡಿಗಳನ್ನು ಮುಚ್ಚಿದರು. ಆದರೆ ಸೈಫುಲ್ಲಾಗೆ ನೀಡಬೇಕಾಗಿದ್ದ ಎಂಟು ಲಕ್ಷ ರೂ ಅಲ್ಲೆ ಬಾಕಿಯಾಯ್ತು. ಸೈಫುಲ್ಲಾ ಸಾಲದಿಂದ ಸೀರೆ ತಂದು ಹೈದರಬಾದ್ ಗೆ ಮಾರುತ್ತಿದ್ದರು. ಆದರೆ ಅಲ್ಲಿಂದ ಹಣ ಬಾರದ ಕಾರಣ ಇಲ್ಲಿ ಸಂಕಷ್ಟ ಎದುರಾಯಿತು. ಕ್ರೆಡಿಟ್ ನಲ್ಲಿ ಸೀರೆ ನೀಡಿದ್ದ ವ್ಯಾಪಾರಿಗಳು ಹಣಕ್ಕೆ ಒತ್ತಾಯಿಸುತ್ತಿದ್ದರು. ಇವು ಸೈಫುಲ್ಲಾ ಕುಟುಂಬಕ್ಕೆ ಅತ್ಯಂತ ಕೆಟ್ಟ ದಿನಗಳು. ಈ ವೇಳೆ ಅವರಿಗೆ ಭರವಸೆಯ ಬೆಳಕು ಕಂಡಿದ್ದು ಚಿನ್ನದ ನಾಡು ಕೋಲಾರದಲ್ಲಿ.

ಕೋಲಾರದ ಸಣ್ಣ ವ್ಯಾಪಾರಿಯೊಬ್ಬರು ಕಡಿಮೆ ಬೆಲೆಗೆ ತನ್ನ ಅಂಗಡಿ ಮಾರಾಟ ಮಾಡುತ್ತಿದ್ದಾರೆ ಎಂಬ ಸುದ್ದಿ ಸೈಫುಲ್ಲಾ ಕಿವಿಗೆ ಬಿದ್ದಿತ್ತು. ಸ್ವಂತ ಅಂಗಡಿಯೊಂದನ್ನು ಮಾಡಿಕೊಂಡರೆ ಏನಾದರೂ ಮಾಡಬಹುದು ಎಂದುಕೊಂಡ ಸೈಫುಲ್ಲಾಗೆ ದೊಡ್ಡ ಸಮಸ್ಯೆಯಾಗಿದ್ದು ಹಣ. ಹೌದು, ಈಗಾಗಲೇ ಎಂಟು ಲಕ್ಷ ಕಳೆದುಕೊಂಡಿದ್ದ ಸೈಫುಲ್ಲಾ ಹಣಕ್ಕಾಗಿ ಪರದಾಡಿದರು. ಆದರೆ ಸ್ನೇಹಿತರು, ಬಂಧುಗಳಿಂದ ಹಣ ಪಡೆದುಕೊಂಡ ಸೈಫುಲ್ಲಾ  ಒಂದು ಕಂತಿನ ಹಣ ಕಟ್ಟಿ ಅಂಗಡಿ ಪಡೆದರು. ಆದರೆ ಈ ಪ್ರಕ್ರಿಯೆಯಲ್ಲಿ ಹನ್ನೊಂದನೇ ತರಗತಿಗೆ ಹೋಗುತ್ತಿದ್ದ ಮಗ ಉಮರ್ ನ ಶಿಕ್ಷಣಕ್ಕೆ ಕುತ್ತು ಬಂದಿತ್ತು.

ನೀನಿನ್ನು ಓದಿದ್ದು ಸಾಕು, ಕೋಲಾರದ ಅಂಗಡಿ ನೋಡಿಕೋ ಎಂದು ಸೈಫುಲ್ಲಾ ಮಗನಿಗೆ ಹೇಳಿದ್ದರು. ಇದರಿಂದ ಕಂಗಾಲಾದ ಉಮರ್ ಒಂದು ಉಪಾಯ ಮಾಡಿದ್ದ. ನಾನು ಕೋಲಾರದಲ್ಲೇ ಓದುತ್ತೇನೆ, ಅಲ್ಲೇ ಅಂಗಡಿ ಮತ್ತು ಶಿಕ್ಷಣ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದ.

ಹೀಗೆ 1991ರಲ್ಲಿ ತನ್ನ 16ನೇ ವಯಸ್ಸಿನಲ್ಲಿ ಉಮರ್ ಉದ್ಯಮ ಪ್ರಯಾಣ ಆರಂಭಿಸಿದ. ಕೋಲಾರಕ್ಕೆ ಹೋದ ಉಮರ್ ದಿನನಿತ್ಯ ಕಾಲೇಜಿಗೆ ಹೋಗಲಿಲ್ಲ. ಕೇವಲ ಪರೀಕ್ಷೆಗೆ ಮಾತ್ರ ಹೋಗುತ್ತಿದ್ದ. ಕೋಲಾರದ ವ್ಯವಹಾರವನ್ನೇ ತಾನೇ ನೋಡಿಕೊಳ್ಳಬೇಕಾದ ಕಾರಣ ಸೀರೆ ಗಳನ್ನು ತರಲು ದೇಶದ ಹಲವು ಭಾಗಗಳಿಗೆ ಹೋಗಬೇಕಾಗಿತ್ತು.

Advertisement

ಕೋಲಾರದಲ್ಲಿ ಉಮರ್ ನ ತಂದೆ ಖರೀದಿಸಿದ ಆ ಅಂಗಡಿಯ ಹೆಸರು ಮಿನಾ ಬಜಾರ್ ಎಂದಿತ್ತು. ಆ ಹೆಸರನ್ನೇ ಮುಂದುವರಿಸಿದ ಇವರು ವ್ಯಾಪಾರ ಆರಂಭಿಸಿದರು. ಕೆಲವು ತಿಂಗಳು ಹಲವು ಸಂಕಷ್ಟಗಳು ಎದುರಾಗಿದ್ದವು. ಆದರೆ ನಂತರ ಕುಟುಂಬ ಸುಸೂತ್ರವಾಗಿ  ನಡೆಯುವಷ್ಟು ಲಾಭ ಬರಲು ಆರಂಭವಾಯಿತು. ಎಲ್ಲಾ ಸಾಲಗಳು ತೀರುವ ಹೊತ್ತಿಗೆ ಉಮರ್ ಕಾಲೇಜಿಗೆ ಬಂದಿದ್ದ. ಅವರ ಕುಟುಂಬದಲ್ಲಿ ಪದವಿ ಪಡೆದ ಮೊದಲನೇಯಾತ ಉಮರ್.

ಇತ್ತ ಮಿನಾ ಬಜಾರ್ ನ ವ್ಯವಹಾರಗಳು ತಕ್ಕ ಮಟ್ಟಿಗೆ ನಡೆಯುತ್ತಿದ್ದವು. ಇದನ್ನು ಇನ್ನಷ್ಟು ವಿಸ್ತರಿಸುವಷ್ಟು ಲಾಭ ಇರಲಿಲ್ಲ. ಎಂಬಿಎ ಕಲಿಯುವ ಮನಸ್ಸಿದ್ದರೂ, ಕೋಲಾರದಲ್ಲಿ ಆ ವ್ಯವಸ್ಥೆ ಇರದ ಕಾರಣ ಉಮರ್ ಎಂಕಾಂ ಮಾಡಿದರು. ಆದರೆ ಕಾಲೇಜಿಗೆ ಮೊದಲ ರಾಂಕ್ ಬಂದ ಮಗನ ಸಾಧನೆ ಕಂಡ ಸೈಫುಲ್ಲಾ, ಒಂದು ದಿನ ಉಮರ್ ನನ್ನು ಕರೆದು, ನೀನು ಬಹಳ ಬುದ್ಧಿವಂತ, ನಿನಗೆ ಏನು ಮಾಡಬೇಕೋ ಅದನ್ನು ಮಾಡು, ನಿನ್ನ ತಮ್ಮ ಕೋಲಾರದ ಅಂಗಡಿ ನೋಡಿಕೊಳ್ಳಲಿ ಎಂದರು. ಅದರೆ ವಿಧಿ ಬೇರೆಯೇ ಯೋಜನೆ ರೂಪಿಸಿತ್ತು.

ಒಂದು ದಿನ ಉಮರ್ ನನ್ನು ಬಳಿಗೆ ಕರೆದ ಅಜ್ಜ, ನಮ್ಮ ಅಂಗಡಿಯನ್ನು ದುಬೈನಲ್ಲೂ ಮಾಡಬೇಕು ಎಂದರು. ವಿಮಾನದಲ್ಲಿ ಪ್ರಯಾಣ ಮಾಡಬಹುದು ಎಂಬ ಆಸೆಯಿಂದ ಉಮರ್ ಕೂಡಾ ಓಕೆ ಎಂದಿದ್ದರು. ಆದರೆ ಅಜ್ಜನೊಂದಿಗೆ ದುಬೈಗೆ ತೆರಳಿದ ಉಮರ್ ಗೆ ಅಲ್ಲಿ ಸ್ವತಂತ್ರವಾಗಿ ಬ್ಯುಸಿನೆಸ್ ಮಾಡಲು ಸಾಧ್ಯವಿಲ್ಲ ಎಂದು ಗೊತ್ತಾಗಿತ್ತು. ಅಲ್ಲಿನ ಸ್ಥಳೀಯರೊಬ್ಬರನ್ನು ಪಾರ್ಟ್ನರ್ ಮಾಡಬೇಕಿತ್ತು. ಆದರೆ ಅದು ಇವರಿಗೆ ಇಷ್ಟಾಗಲಿಲ್ಲ. ಇದೇ ವೇಳೆ ಸ್ನೇಹಿತರ ಮನೆಗೆ ಊಟಕ್ಕೆ ಹೋದಾಗ ಅವರು, ‘ನಿನಗೆ ಒರಾಕಲ್ ಸಾಫ್ಟ್ ವೇರ್ ಗೊತ್ತಿದ್ದರೆ ಇಲ್ಲೇ ಕೆಲಸ ಕೊಡಿಸುತ್ತೇನೆ’ ಎಂದಿದ್ದರು. ಆದರೆ ಉಮರ್ ಗೆ ಅದರ ಬಗ್ಗೆ ಏನೂ ಗೊತ್ತಿರಲಿಲ್ಲ. ಭಾರತಕ್ಕೆ ಮರಳಿದ ಉಮರ್ ಒರಾಕಲ್ ಮತ್ತು ಜಾವಾದಲ್ಲಿ ಡಿಪ್ಲೊಮಾ ಪಡೆದರು. ಬಳಿಕ, ಅವರು ಮೈಸೂರಿನ ಸಣ್ಣ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ನೇಮಕಗೊಂಡರು. ತನ್ನ ಕೆಲಸದಿಂದ ಟೀಮ್ ಲೀಡರ್ ಆದ ಉಮರ್ ಬಳಿಕ ಅವರು ಥಾಟ್‌ವರ್ಕ್ಸ್‌ ಕಂಪನಿಗೆ ಸೇರಿದರು, ಅಲ್ಲಿ ಅವರು 10 ವರ್ಷಗಳ ಕಾಲ ಕೆಲಸ ಮಾಡಿದರು.

ಮೊದಲೆಲ್ಲಾ ಮತ್ತೊಂದು ನಗರಕ್ಕೆ ರೈಲಿನಲ್ಲಿ ಹೋಗಬೇಕಾದರೂ ಎರಡೆರಡು ಬಾರಿ ಯೋಚನೆ ಮಾಡಬೇಕಿತ್ತು. ಅದರೆ ನಾನು ಕೆಲಸಕ್ಕೆ ಸೇರಿದ ಬಳಿಕ 52 ದೇಶಗಳಿಗೆ ಪ್ರಯಾಣಿಸಿದೆ. ಇದೆಲ್ಲದರ ನಡುವೆಯೂ ನನ್ನೊಳಗಿನ ಬ್ಯುಸಿನೆಸ್ ಮ್ಯಾನ್ ಹಾಗೆಯೇ ಇದ್ದ ಎನ್ನುತ್ತಾರೆ ಉಮರ್.

2009ರಲ್ಲಿ ಅಮೆರಿಕದಲ್ಲಿದ್ದ ಉಮರ್ ಗೆ ಬೆಂಗಳೂರಿನ ಶಿವಾಜಿನಗರದಲ್ಲಿ ಅಂಗಡಿಯೊಂದು ಮಾರಾಟಕ್ಕಿದೆ ಎಂಬ ವಿಚಾರ ಗೊತ್ತಾಯಿತು. ಕೋಲಾರದ ಮಿನಾ ಬಜಾರ್ ನ್ನು ದೊಡ್ಡ ನಗರಕ್ಕೆ ತರಲು ಇದು ಸಮಯ ಎಂದ ಉಮರ್, ತನ್ನಲ್ಲಿದ್ದ 14 ಲಕ್ಷ ಉಳಿಕೆ ಹಣ ಹೂಡಲು ಮುಂದಾದ. ಆದರೆ ಮನೆಯಲ್ಲಿ ಬೆಂಬಲ ಸಿಗಲಿಲ್ಲ. ಆದರೆ ಹಠ ಬಿಡದ ಉಮರ್, ಸಹೋದರನ ಜತೆ ಸೇರಿ ಅಂಗಡಿ ಖರೀದಿಸಿದರು. ಹೀಗೆ ಶಿವಾಜಿ ನಗರದಲ್ಲಿ ಮಿನಾ ಬಜಾರ್ ತಲೆ ಎತ್ತಿತು.

ಶಿವಾಜಿ ನಗರದ ಈ ಸೀರೆ ಮಳಿಗೆ ಬೇಗನೇ ಪ್ರಸಿದ್ಧಿ ಪಡೆಯಿತು. 2011ರಲ್ಲಿ  ಎಲ್ಲವೂ ಸರಿಯಿದೆ ಎನ್ನುವಷ್ಟರಲ್ಲಿ ಉಮರ್ ಗೆ ಅಪಘಾತವಾಗಿ ಎರಡೂ ಕಾಲುಗಳು ಫ್ರಾಕ್ಚರ್ ಆಗುತ್ತವೆ. ಏನೂ ಕೆಲಸವಿಲ್ಲದೆ ಆಸ್ಪತ್ರೆಯಲ್ಲಿ ಮಲಗಿದ್ದ ಉಮರ್, ಮೊಬೈಲ್ ನಲ್ಲಿ ಏನನ್ನೋ ಹುಡುಕುವಾಗ ಕಾಮರಾಜ ರಸ್ತೆಯಲ್ಲಿ ಒಂದು ಅಂಗಡಿ ಜಾಗ ಖಾಲಿಯಿದೆ ಎಂದು ಗೊತ್ತಾಯಿತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಉಮರ್ ತಮ್ಮನೊಟ್ಟಿಗೆ ನೇರ ಆ ಅಂಗಡಿ ಜಾಗಕ್ಕೆ ಹೋದ. ತನ್ನ ಮಿನಾ ಬಜಾರ್ ಗೆ ಹೇಳಿ ಮಾಡಿಸಿದ ಜಾಗ ಎಂದುಕೊಂಡ ಉಮರ್, ವ್ಯವಹಾರ ಮಾತನಾಡಿದ. ಅಂಗಡಿಯ ಬಾಡಿಗೆ ಉಮರ್ ನ ಸಂಬಳಕ್ಕಿಂತ ಹೆಚ್ಚಿತ್ತು. ಯಜಮಾನನಿಗೆ ಮಾತನಾಡಿ ಸ್ವಲ್ಪ ಬಾಡಿಗೆ ಏನೋ ಕಡಿಮೆ ಮಾಡಿಕೊಂಡ. ಆದರೆ ಅಪ್ಪ ಒಪ್ಪಲಿಲ್ಲ. ಇಂತಹ ಸಾಹಸ ನಮಗೆ ಬೇಡ ಎಂದು ಬಿಟ್ಟರು. ಆದರೆ ಉಮರ್ ಹೆಜ್ಜೆ ಮುಂದಿಟ್ಟಾಗಿತ್ತು. ಆ ಅಂಗಡಿ ಖರೀದಿಸಿಬಿಟ್ಟ.

2013ರಲ್ಲಿ ಉಮರ್ ಚಿಕ್ಕಪೇಟೆಯಲ್ಲಿ ಮತ್ತೊಂದು ಅಂಗಡಿ ಆರಂಭಿಸಿದರು. ಉಮರ್ ಬೆಂಗಳೂರಿನಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡುತ್ತಿದ್ದರೆ, ಅತ್ತ ಕೋಲಾರದಲ್ಲಿದ್ದ ಅಪ್ಪ ಮತ್ತು ತಮ್ಮ ಅಲ್ಲಿನ ಅಂಗಡಿ ಮುಚ್ಚಿ ಬೆಂಗಳೂರಿಗೆ ಬಂದುಬಿಟ್ಟರು. ಇತ್ತ ಐಟಿ ಕಂಪನಿಯೊಂದರಲ್ಲಿ ಹತ್ತು ವರ್ಷ ಕೆಲಸ ಮಾಡಿದ್ದ ಮತ್ತೋರ್ವ ತಮ್ಮ ಕೂಡಾ ಕೆಲಸ ಬಿಟ್ಟು ಇವರ ವ್ಯವಹಾರಕ್ಕೆ ಕೈ ಜೋಡಿಸಿದ. ಇದು ಉಮರ್ ಗೆ ಆನೆ ಬಲ ಒದಗಿಸಿತು.

2014 ರಲ್ಲಿ, ಉಮರ್ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಮತ್ತೊಂದು ಅಂಗಡಿಯನ್ನು ತೆರೆದರು. ಇಷ್ಟೆಲ್ಲಾ ಆಗುತ್ತಿದ್ದ ಥಾಟ್ ವರ್ಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಉಮರ್, ಕೆಲಸ ತ್ಯಜಿಸಿ ಪೂರ್ಣಾವಧಿಯ ಉದ್ಯಮಿಯಾಗಲು ಇದು ಸರಿಯಾದ ಸಮಯ ಎಂದು ನಿರ್ಧರಿಸಿದರು. ಥಾಟ್‌ವರ್ಕ್ಸ್‌ನ ಸಿಂಗಾಪುರದ ಎಂಡಿ ಆಗಿದ್ದ ಉಮರ್ ಕೆಲಸಕ್ಕೆ ರಾಜೀನಾಮೆ ನೀಡಿ ಬೆಂಗಳೂರಿಗೆ ಬಂದಿದ್ದರು.

ತನ್ನ ಮಳಿಗೆಗಳನ್ನು ರೇಡಿಯೋ ಸೇರಿ ಹಲವು ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದರು. ಆದರೆ ಬೆಂಗಳೂರಿನಲ್ಲಿ ಮಿನಾ ಬಜಾರ್ ಎಂಬ ಹಲವು ಇತರ ಅಂಗಡಿಗಳಿದ್ದವು. ಇವರ ಅಡ್ವರ್ಟೈಸ್ ಮೆಂಟ್ ಕೇಳಿದ ಜನರು ಬೇರೆ ಮಿನಾ ಬಜಾರ್ ಅಂಗಡಿಗಳಿಗೆ ಹೋಗುತ್ತಿದ್ದಾರೆಂದು ಅರಿತ ಉಮರ್, ಹೊಸ ಐಡಿಯಾ ಮಾಡಿದ್ದ. ಅಂಗಡಿ ಹೆಸರನ್ನೇ ಬದಲಿಸಿದ್ದ.

2016ರಲ್ಲಿ ಜಯನಗರದಲ್ಲಿ ಹೊಸ ಅಂಗಡಿ ಆರಂಭಿಸಿದ ಉಮರ್, ಅದಕ್ಕೆ ಹೊಸ ಹೆಸರು ನೀಡಿದ್ದ. ಅದೇ ‘ಕೊಸ್ಕಿ’. ತನ್ನ ಎಲ್ಲಾ ಅಂಗಡಿಗಳ ಹೆಸರನ್ನು ಮಿನಾ ಬಜಾರ್ ನಿಂದ ಕೊಸ್ಕಿ ಗೆ ಬದಲಾವಣೆ ಮಾಡಿದ್ದ. 2017ರಿಂದ 2018ರವರಗೆ ಫೀನಿಕ್ಸ್ ಮಾಲ್, ಮಂತ್ರಿ ಮಾಲ್ ನಲ್ಲಿ ಶಾಪ್ ತೆರೆದ ಉಮರ್, ಕಾಮರಾಜ್ ರಸ್ತೆಯಲ್ಲಿ 15 ಸಾವಿರ ಚದರ ಅಡಿಯ ಕೊಸ್ಕಿ ಟವರ್ ನಿರ್ಮಿಸಿದ. ಕೊಸ್ಕಿ ಬ್ಯುಸಿನೆಸ್ ಸದ್ಯ ಚೆನ್ನೈಗೂ ವಿಸ್ತರಿಸಿದೆ.

ಕೇವಲ 600 ಅಡಿ ಮನೆಯಲ್ಲಿ ಕಷ್ಟದ ದಿನಗಳನ್ನು ಕಳೆದಿದ್ದ ಉಮರ್ ಇದೀಗ 35 ಸಾವಿರ ಕೋಟಿಗೂ ಹೆಚ್ಚಿನ ವ್ಯವಹಾರ ನಡೆಸುತ್ತಿದ್ದಾರೆ. ಜಾಣ್ಮೆ, ವ್ಯವಹಾರ ಜ್ಞಾನ, ಸಾಹಸ ಪೃವತ್ತಿ ಇದ್ದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಉಮರ್ ಅಖ್ತರ್ ಮತ್ತು ಕೊಸ್ಕಿ ಕಥೆಯೇ ಸಾಕ್ಷಿ.

  • ಕೀರ್ತನ್ ಶೆಟ್ಟಿ ಬೋಳ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next