Advertisement

ಉದ್ಯಮಿ ಆರ್‌.ಎನ್‌.ನಾಯ್ಕ ಕೊಲೆ ಪ್ರಕರಣ: ಸಾಕ್ಷ್ಯ ನುಡಿದ ಅಣ್ಣಾಮಲೈ

12:41 PM Dec 30, 2021 | Team Udayavani |

 ಉಡುಪಿ: ಅಂಕೋಲ ಉದ್ಯಮಿ ಆರ್‌.ಎನ್‌. ನಾಯ್ಕ ಕೊಲೆ ಪ್ರಕರಣದ ಪ್ರಮುಖ ಆರೋಪಿ ಭೂಗತ ಪಾತಕಿ ಬನ್ನಂಜೆ ರಾಜಾ ವಿರುದ್ಧ ಇಲ್ಲಿನ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (ಕೋಕಾ) ನ್ಯಾಯಾಲಯದಲ್ಲಿ ಕೆ.ಅಣ್ಣಾಮಲೈ ಸಾಕ್ಷ್ಯ ನುಡಿದರು.

Advertisement

ಆರ್‌.ಎನ್‌. ನಾಯ್ಕ ಕೊಲೆ ಪ್ರಕರಣದಲ್ಲಿ ಈ ಹಿಂದೆ ಕೆ. ಅಣ್ಣಾಮಲೈ ತನಿಖಾಧಿಕಾರಿ ಆಗಿದ್ದರು. ಪ್ರಸ್ತುತ ಕೆ. ಅಣ್ಣಾಮಲೈ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಮಂಗಳವಾರ ಬೆಳಗ್ಗೆ ಬೆಳಗಾವಿಗೆ ಆಗಮಿಸಿದ್ದ ಅಣ್ಣಾಮಲೈ ಎರಡು ದಿನಗಳ ಕಾಲ ಇಲ್ಲಿನ ಕೋಕಾ ನ್ಯಾಯಾಲಯಕ್ಕೆ ಹಾಜರಾಗಿ ಬನ್ನಂಜೆ ವಿರುದ್ಧ ಸಾಕ್ಷ್ಯ ನುಡಿದಿದ್ದು ಬುಧವಾರ ಪ್ರಕ್ರಿಯೆ ಮುಕ್ತಾಯಗೊಂಡಿದೆ.

ಅಣ್ಣಾಮಲೈ ಜತೆಗೆ ಹಿರಿಯ ಪೊಲೀಸ್‌ ಅಧಿಕಾರಿಗಳಾದ ಎಡಿಜಿಪಿ ಪ್ರತಾಪ್‌ ರೆಡ್ಡಿ, ಭಾಸ್ಕರ್‌ ರಾವ್‌ ಕೂಡ ಕೋರ್ಟಿಗೆ ಹಾಜರಾಗಿ ಸಾಕ್ಷ್ಯ ನುಡಿದರು. ಆರ್‌.ಎನ್‌. ನಾಯ್ಕ ಕೊಲೆ ಪ್ರಕರಣದಡಿ ಬನ್ನಂಜೆ ರಾಜಾ ಸೇರಿ 15 ಆರೋಪಿಗಳ ವಿರುದ್ಧ ಕೋಕಾ ಕೇಸ್‌ ದಾಖಲಾಗಿತ್ತು. ವಿಚಾರಣ ಸಂಬಂಧ ವಿದೇಶದಲ್ಲಿದ್ದ ಬನ್ನಂಜೆ ರಾಜಾನನ್ನು 2015ರ ಆಗಸ್ಟ್‌ ತಿಂಗಳಲ್ಲಿ ವಶಕ್ಕೆ ಪಡೆದಿದ್ದ ಪೊಲೀಸರು ಇಲ್ಲಿನ ಕೋಕಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಇದೀಗ ಪ್ರಕರಣದ ವಿಚಾರಣೆ ಅಂತಿಮ ಹಂತಕ್ಕೆ ತಲುಪಿದೆ. ಇದು ರಾಜ್ಯದ ಮೊದಲ ಕೋಕಾ ಪ್ರಕರಣವಾಗಿದೆ. ಬೆಳಗಾವಿಯ ಹಿಂಡಲಗ ಜೈಲಿನಲ್ಲಿ ಬನ್ನಂಜೆ ರಾಜಾ ಸಹಿತ 16 ಮಂದಿ ಆರೋಪಿಗಳಿದ್ದಾರೆ. ಈ ಪೈಕಿ 3 ಮಂದಿ ತಲೆಮರೆಸಿಕೊಂಡಿದ್ದಾರೆ. ಬನ್ನಂಜೆ ರಾಜನ ಪರವಾಗಿ ಉಡುಪಿಯ ನ್ಯಾಯವಾದಿ ಎಂ.ಶಾಂತಾರಾಮ ಶೆಟ್ಟಿ ವಾದ ಮಂಡಿಸುತ್ತಿದ್ದಾರೆ. ನ್ಯಾಯಾಧೀಶರಾಗಿ ಸಿಎಂ ಜೋಶಿ ಅವರು ವಿಚಾರಣೆ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next