Advertisement

ಉದ್ಯಮಿ, ನಿರ್ಮಾಪಕ ವಿ. ಕೆ. ಮೋಹನ್‌ ಆತ್ಮಹತ್ಯೆ

01:34 AM Mar 24, 2020 | mahesh |

ಕೊಲ್ಲೂರು / ಬೆಂಗಳೂರು: ಆರ್ಥಿಕ ಸಂಕಷ್ಟ ಹಾಗೂ ಕೋಟ್ಯಂತರ ರೂ. ಸಾಲ ಹಿನ್ನೆಲೆಯಲ್ಲಿ ಉದ್ಯಮಿ ಹಾಗೂ ಫೈನಾನ್ಸಿಯರ್‌ ವಿ.ಕೆ. ಮೋಹನ್‌ ಅಲಿಯಾಸ್‌ ಕಪಾಲಿ ಮೋಹನ್‌ (62) ಅವರು ಸೋಮವಾರ ಮುಂಜಾನೆ ನೇಣಿಗೆ ಶರಣಾಗಿದ್ದಾರೆ. ಅದಕ್ಕೂ ಮೊದಲು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನು ಉದ್ದೇಶಿಸಿ ಸೆಲ್ಫಿ ವಿಡಿಯೋ ಮಾಡಿದ್ದು, ಅದು ವೈರಲ್‌ ಆಗಿದೆ.

Advertisement

ರವಿವಾರ ತಡರಾತ್ರಿ ಎರಡು ಗಂಟೆ ಸುಮಾರಿಗೆ ಪೀಣ್ಯ ಸಮೀಪದ ಬಸವೇಶ್ವರ ಬಸ್‌ ನಿಲ್ದಾಣದಲ್ಲಿರುವ
ಸುಪ್ರೀಂ ಹೋಟೆಲಿನ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಮೂಲದ ಮೋಹನ್‌ ಸದಾಶಿವನಗರದಲ್ಲಿ ವಾಸವಾಗಿದ್ದು, ಹಿರಿಯ ನಟ ದಿ| ಡಾ ರಾಜ್‌ ಕುಮಾರ್‌ ಕುಟುಂಬಕ್ಕೆ ಆತ್ಯಾಪ್ತರಾಗಿದ್ದಾರೆ. ಹಲವು ಸಿನೆಮಾಗಳ ವಿತರಕರಾಗಿ ಹಾಗೂ ನಿರ್ಮಾಪಕರಾಗಿಯೂ ಕೆಲಸ ನಿರ್ವಹಿಸಿದ್ದರು.

ಪೀಣ್ಯ ಸಮೀಪ ಬಸವೇಶ್ವರ ಬಸ್‌ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳು ಹಾಗೂ ಕೊಠಡಿಗಳನ್ನು ಬಾಡಿಗೆ ಪಡೆದುಕೊಂಡು ಸುಪ್ರೀಂ ಎಂಬ ಹೊಟೇಲ್‌ ಅನ್ನು ನಡೆಸುತ್ತಿದ್ದು, ಕೋಟ್ಯಂತರ ರೂ. ಹೂಡಿಕೆ ಮಾಡಿದ್ದರು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಲಾಭ ಇರಲಿಲ್ಲ. ಜತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ದಾಣಕ್ಕೆ ಹೋಗುತ್ತಿರಲಿಲ್ಲ. ಹೀಗಾಗಿ ಸಾಮಾನ್ಯವಾಗಿ ಪ್ರಯಾಣಿಕರಿಲ್ಲದೆ ಭಣಗುಡುತ್ತಿದ್ದವು. ಪರಿಣಾಮ ಕೋಟ್ಯಂತರ ರೂ. ಸಾಲ ತೀರಿಸಲು ಕಷ್ಟವಾಗಿತ್ತು. ಅಲ್ಲದೆ, ಸಾಲ ಕೊಟ್ಟ ಬ್ಯಾಂಕ್‌ ಅಧಿಕಾರಿಗಳು ಹೊಟೇಲ್‌ ಜಪ್ತಿ ಮಾಡುವುದಾಗಿ ಎಚ್ಚರಿಸಿದ್ದರು ಎನ್ನಲಾಗಿದೆ. ಈ ವಿಷಯವನ್ನು ಆಪ್ತರ ಬಳಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ಹೇಳಿದರು.

ನೇಣಿಗೆ ಶರಣು:
ಶನಿವಾರ ಸಂಜೆ ತಮ್ಮ ಹೊಟೇಲಿಗೆ ಬಂದು ತಮ್ಮ ಆಪ್ತ ಕೆಲಸಗಾರರ ಜತೆ ಚರ್ಚಿಸಿದ್ದಾರೆ. ಎರಡು ದಿನಗಳಿಂದ ಮನೆಗೆ ಬಾರದಿರುವುದಕ್ಕೆ ಪುತ್ರ ಹಾಗೂ ಆಪ್ತ ಸಹಾಯಕ ರವಿವಾರ ರಾತ್ರಿ ಹೊಟೇಲಿಗೆ ಬಂದಾಗ, ತನಗೆ ಅಪಾರ ಪ್ರಮಾಣದ ಸಾಲ ಇದೆ ಎಂದು ಹೇಳಿಕೊಂಡಿದ್ದರು. ಬಳಿಕ ಇಬ್ಬರ ಜತೆ ಅಲ್ಲೇ ಊಟ ಮಾಡಿದ್ದರು. ಅನಂತರ ಪುತ್ರ ಹಾಗೂ ಆಪ್ತ ಸಹಾಯಕ ಮನೆಗೆ ತೆರಳುತ್ತಿದ್ದಂತೆ, ಮೋಹನ್‌ ಕೊಠಡಿಯಲ್ಲಿ ಮಲಗಲು ಹೋಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ವೈರ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ವಚ್ಛತಾ ಸಿಬಂದಿ ಬಾಗಿಲು ಬಡಿದಾಗ ಪ್ರತಿಕ್ರಿಯೆ ಸಿಗದ ಕಾರಣ ಮತ್ತೂಂದು ಕೀ ಬಳಸಿ ಕೊಠಡಿಯೊಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

Advertisement

ಕೂಡಲೇ ಗಂಗಮ್ಮನಗುಡಿ ಪೊಲೀಸರು ಮತ್ತು ಡಿಸಿಪಿ ಎನ್‌. ಶಶಿಕುಮಾರ್‌ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಂಗಮ್ಮನಗುಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಹಾಲಾಡಿ ಶ್ರೀವಾಸ ಶೆಟ್ಟಿ, ಬಿ.ಎಂ.ಸುಕುಮಾರ ಶೆಟ್ಟಿ, ರಘುಪತಿ ಭಟ್‌, ಸುನಿಲ್‌ ಕುಮಾರ್‌, ವಿಧಾನ ಪರಿಷತ್‌ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ, ಮಾಜಿ ಸಚಿವರಾದ ವಿನಯ ಕುಮಾರ್‌ ಸೊರಕೆ, ಮಾಜಿ ಶಾಸಕರಾದ ಎ.ಜಿ.ಕೊಡ್ಗಿ, ಕೆ.ಗೋಪಾಲ ಪೂಜಾರಿ ಸಹಿತ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸೆಲ್ಫಿ ವೀಡಿಯೋದಲ್ಲಿ ಸಿಎಂ, ಸಾರಿಗೆ ಸಚಿವರಿಗೆ ಮನವಿ
“ಪೀಣ್ಯದ ಬಸವೇಶ್ವರ ಬಸ್‌ ನಿಲ್ದಾಣ ಟೆಂಡರ್‌ ಕೂಗಿದ್ದು, ಅತಿ ಹೆಚ್ಚು ಸಿಂಗಲ್‌ ಟೆಂಡರ್‌ ಕೂಗಿದ್ದೇನೆ. ಇದುವರೆಗೂ ಬಸ್‌ ಬಿಟ್ಟಿಲ್ಲ. ಅದರಿಂದ ತುಂಬ ನೋವು ಅನುಭವಿಸುತ್ತಿದ್ದೇನೆ. ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಸವದಿ ಅವರಿಗೂ ಕೇಳಿಕೊಳ್ಳುತ್ತಿದ್ದೇನೆ. ನಾನು ಮನೆ, ಮಠ ಮಾರಿಕೊಂಡಿದ್ದೇನೆ. ಬೆಂಗಳೂರಿನಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ. ಬಸ್‌ ನಿಲ್ದಾಣದಿಂದಲೇ ಕೋಟ್ಯಂತರ ರೂ. ಕಳೆದುಕೊಂಡಿದ್ದೇನೆ. 7 ವಾರದಿಂದ ಬ್ಯಾಂಕ್‌ ಲೋನ್‌ ಕಟ್ಟಿಲ್ಲ. ಬಾಡಿಗೆ ಕೂಡ ಕಟ್ಟುತ್ತಿಲ್ಲ. ಬಸ್‌ ಬಿಡುವವರೆಗೂ ತನ್ನ ಬಾಡಿಗೆ ಮನ್ನಾ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ’ ಎಂದು ವೀಡಿಯೋ ಮಾಡಿದ್ದರು.

ವಕ್ವಾಡಿ ಪರಿಸರದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ಸಹಾಯ, ಅನೇಕ ದೇಗುಲಗಳ ಜೀರ್ಣೋದ್ಧಾರ ಕಾರ್ಯಕ್ಕೆ ಧನ ಸಹಾಯ ಮಾಡುತ್ತಿದ್ದರು. ಸುಮಾರು 18 ವರ್ಷಗಳಿಂದ ವಕ್ವಾಡಿಯ ಅವರ ಮನೆಯಲ್ಲಿ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆ ನಡೆಸುತ್ತಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ, ದಿ| ಹಿರಿಯ ಖ್ಯಾತ ನಟ ಡಾ| ರಾಜ್‌ ಕುಮಾರ್‌ ಸಹಿತ ಅನೇಕ ಗಣ್ಯರ ಸಮಕ್ಷಮದಲ್ಲಿ ವಕ್ವಾಡಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next