Advertisement

ಅಂತೂ ಸೆರೆ ಸಿಕ್ಕ ನೀರವ್‌ ಮೋದಿ

12:30 AM Mar 21, 2019 | |

ಲಂಡನ್‌: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡದೆ ಪಲಾಯನಗೈದಿದ್ದ ಉದ್ಯಮಿ ನೀರವ್‌ ಮೋದಿಯನ್ನು ಲಂಡನ್‌ನಲ್ಲಿ ಸ್ಕಾಟ್‌ಲ್ಯಾಂಡ್‌ ಯಾರ್ಡ್‌ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಲೋಕಸಭೆ ಚುನಾವಣೆ ಘೋಷಣೆಯಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಸ್ವರ್ಣೋದ್ಯಮಿಯನ್ನು ಭಾರತಕ್ಕೆ ಕರೆತರುವ ಪ್ರಯತ್ನದಲ್ಲಿ ಇದು ಮಹತ್ವದ ಜಯವಾಗಿದೆ. ಮಂಗಳವಾರವಷ್ಟೇ ನೀರವ್‌ ವಿರುದ್ಧ ವಾರಂಟ್‌ ಹೊರಡಿಸಲಾಗಿತ್ತು.

Advertisement

ಬಂಧನದ ಬಳಿಕ ಬುಧವಾರ ಆತನನ್ನು ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಜಾಮೀನು ನಿರಾಕರಿಸಲಾಗಿದೆ. ಜಾಮೀನು ಅರ್ಜಿ ಸಲ್ಲಿಸಿದ ನೀರವ್‌, ತಾನು ತನಿಖೆಗೆ ಸಹಕರಿಸುತ್ತಿದ್ದೇನೆ. ತೆರಿಗೆ ಪಾವತಿ ಮಾಡಲು ಸಮ್ಮತಿಸಿದ್ದೇನೆ ಹಾಗೂ ಪ್ರಯಾಣದ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದೇನೆ ಎಂದಿದ್ದಾನೆ. ಜಾಮೀನು  ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಾರ್ಚ್‌ 29ರ ವರೆಗೆ ನೀರವ್‌ ಮೋದಿ ಕಂಬಿ ಎಣಿಸಲಿದ್ದಾನೆ. ಅಲ್ಲದೆ, ನೀರವ್‌ಗೆ ಜಾಮೀನು ನೀಡಿದರೆ ಪುನಃ ಕೋರ್ಟ್‌ಗೆ ಹಾಜರಾಗದೇ ಇರುವ ಸಾಧ್ಯತೆ ಇದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಲಂಡನ್‌ ಕೋರ್ಟ್‌ ನೀರವ್‌ ಬಂಧನಕ್ಕೆ ವಾರಂಟ್‌ ಹೊರಡಿಸಿತ್ತು. ವೆಸ್ಟ್‌ ಎಂಡ್‌ನ‌ ಸೆಂಟರ್‌ ಪಾಯಿಂಟ್‌ ಅಪಾರ್ಟ್‌ಮೆಂಟ್‌ ಬಳಿಯೇ ಈತನನ್ನು ಬಂಧಿಸಲಾಗಿದ್ದು, ಇಲ್ಲಿ ವಾಸಿಸುತ್ತಿದ್ದಾನೆ ಎಂಬುದು ಕೆಲವೇ ದಿನಗಳ ಹಿಂದೆ ಬಹಿರಂಗಗೊಂಡಿತ್ತು. ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ನಲ್ಲೇ ಉದ್ಯಮಿ ವಿಜಯ್‌ ಮಲ್ಯ ಪ್ರಕರಣ ಕೂಡ ದಾಖಲಾಗಿತ್ತು. ಅದೇ ರೀತಿಯ ಪ್ರಕ್ರಿಯೆ ಈಗ ನೀರವ್‌ ಮೋದಿ ಪ್ರಕರಣದಲ್ಲೂ ನಡೆಯಲಿದೆ. ಈ ತಿಂಗಳ ಆರಂಭದಲ್ಲಷ್ಟೇ ಭಾರತ ಮನವಿಯನ್ನು ಇಂಗ್ಲೆಂಡ್‌ ಗೃಹ ಸಚಿವಾಲಯ ಅನುಮೋದಿಸಿದ್ದರಿಂದ, ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು.

ನಾನು 24 ಗಂಟೆಗಳ ಕಾವಲುಗಾರ. ನಿಮ್ಮಂತೆ ನಾನೂ ಕೂಡ ಎಚ್ಚರದಲ್ಲಿರುವುದೇ ನನ್ನ ಕೆಲಸ. ಯಾವುದೇ ರೀತಿಯ ತಪ್ಪುಗಳಾಗದಂತೆ ಜಾಗ್ರತೆ ವಹಿಸುತ್ತೇನೆ.
– ನರೇಂದ್ರ ಮೋದಿ, ಪ್ರಧಾನಮಂತ್ರಿ

ಲಂಡನ್‌ನ ಆಕ್ಸ್‌ಫ‌ರ್ಡ್‌ ಸ್ಟ್ರೀಟ್‌ನಲ್ಲಿ ತಿರುಗಾಡುತ್ತಿದ್ದರೆ ನೀರವ್‌ ಮೋದಿ ಸಿಕ್ಕಿಬೀಳುವುದು ಸಹಜ. ಅಷ್ಟಕ್ಕೂ ನೀರವ್‌ರನ್ನು ಕಂಡು ಹಿಡಿದಿದ್ದು ಪ್ರಧಾನಿಯೂ ಅಲ್ಲ, ತನಿಖಾ ಸಂಸ್ಥೆಗಳೂ ಅಲ್ಲ. ಲಂಡನ್‌ನ ದಿ ಟೆಲಿಗ್ರಾಫ್ ಹಾಗೂ ಅದರ ವರದಿಗಾರ.
– ಉಮರ್‌ ಅಬ್ದುಲ್ಲಾ, ಜಮ್ಮು ಕಾಶ್ಮೀರದ ಮಾಜಿ ಸಿಎಂ

Advertisement

ನೀರವ್‌ ಪರಾರಿಯಾಗಲು ಸಹಾಯ ಮಾಡಿದ ಅವರೇ ವಾಪಸ್‌ ಕರೆತರುತ್ತಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ ಎಂಬ ಕಾರಣಕ್ಕೆ ಆತನನ್ನು ಕರೆತರಲಾಗುತ್ತಿದೆ.
– ಗುಲಾಂ ನಬಿ ಆಜಾದ್‌, ಕಾಂಗ್ರೆಸ್‌ ಮುಖಂಡ

ಮುಂದೇನು?
– ನೀರವ್‌ ಮೋದಿ ವಿರುದ್ಧ ಸಲ್ಲಿಸಲಾಗಿರುವ ಪ್ರಕರಣದಲ್ಲಿ ಇಂಗ್ಲೆಂಡ್‌ನ‌ಲ್ಲೂ ಶಿಕ್ಷೆ ಅನುಭವಿಸುವಂತಹ ಅಪರಾಧಗಳಿವೆಯೇ ಎಂದು ಪರಿಶೀಲನೆ
– ನೀರವ್‌ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಮಾನವ ಹಕ್ಕುಗಳ ಉಲ್ಲಂಘನೆ ಉಂಟಾಗುತ್ತದೆಯೇ ಎಂದು ವಿಚಾರಣೆ
– ಎಲ್ಲ ಅಂಶಗಳನ್ನೂ ಪರಿಗಣಿಸಿ ಗಡಿಪಾರು ಮಾಡುವಂತೆ ತೀರ್ಪು ನೀಡಿದರೆ ಗೃಹ ಸಚಿವಾಲಯಕ್ಕೆ ಕಡತ ರವಾನೆ
– ಗೃಹ ಸಚಿವಾಲಯದಿಂದ ಅನುಮೋದನೆ ಸಿಕ್ಕ ನಂತರ ಪುನಃ ಮೇಲ್ಮನವಿ ಸಲ್ಲಿಕೆಗೆ 14 ದಿನಗಳ ಕಾಲ ನೀರವ್‌ಗೆ ಅವಕಾಶ 

ನನಗೆ 18 ಲಕ್ಷ ವೇತನ
ಲಂಡನ್‌ನಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ತಿಂಗಳ ಸಂಬಳ 18 ಲಕ್ಷ ರೂ. ಅದಕ್ಕೆ ನಾನು ತೆರಿಗೆಯನ್ನೂ ಕಟ್ಟುತ್ತಿದ್ದೇನೆ…ಹೀಗೆಂದು ಹೇಳಿದ್ದು ಸಾವಿರಾರು ಕೋಟಿ ರೂ.ಗಳ ಸ್ವತ್ತುಗಳ ಮಾಲೀಕ ಹಾಗೂ 13 ಸಾವಿರ ಕೋಟಿ ರೂ.ಯನ್ನು ಪಿಎನ್‌ಬಿ ಬ್ಯಾಂಕ್‌ಗೆ ಮೋಸ ಮಾಡಿದ ನೀರವ್‌ ಮೋದಿ! ಇದಕ್ಕೆ ಸಾಕ್ಷಿಯಾಗಿ ನ್ಯಾಷನಲ್‌ ಇನ್ಶೂರೆನ್ಸ್‌ ನಂಬರ್‌ ಹಾಗೂ ಸಂಬಳ ಪಡೆದ ಸ್ಲಿಪ್‌ಗ್ಳನ್ನು ಕೂಡ ನೀರವ್‌ ಸಲ್ಲಿಸಿದ್ದಾರೆ. ಬಿಳಿ ಶರ್ಟ್‌ ಹಾಗೂ ಪ್ಯಾಂಟ್‌ ಧರಿಸಿ ಕೋರ್ಟ್‌ ಕಟಕಟೆಗೆ ಬಂದ ನೀರವ್‌, ತನ್ನ ಹೆಸರು ಹೇಳಿದ್ದನ್ನು ಬಿಟ್ಟು ಬೇರೆ ಯಾವುದೇ ಮಾತನಾಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next