Advertisement

ಉದ್ಯಮಿ ಅಪಹರಣ ಪ್ರಕರಣ ಸುಖಾಂತ್ಯ

11:41 AM Jan 24, 2017 | Team Udayavani |

ಬೆಂಗಳೂರು: ಹಣಕ್ಕಾಗಿ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸಿದ್ದಾಪುರ ಠಾಣೆ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿ ಉದ್ಯಮಿಯನ್ನು ರಕ್ಷಿಸಿದ್ದಾರೆ.

Advertisement

ಜ.18ರಂದು ಸಂಜೆ ಸಹಕಾರ ನಗರ ನಿವಾಸಿ ರಿಯಲ್‌ ಎಸ್ಟೇಟ್‌ ಉದ್ಯಮಿ ವೆಂಕಟಸುಬ್ಟಾರೆಡ್ಡಿ (42) ಅಪಹರಣಕ್ಕೊಳಗಾಗಿದ್ದು, ಈ ಬಗ್ಗೆ ಅವರ ಪತ್ನಿ ಕೃಷ್ಣವೇಣಿ ಅವರು ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಲಕ್ಕಸಂದ್ರದ ಶರವಣ (23), ನಾರಾಯಣ ಘಟ್ಟದ ನಿವಾಸಿ ಪ್ರಶಾಂತ್‌ (29), ಸಿದ್ದಾಪುರದ ವಿಮಲ್‌  (25), ಸತೀಶ್‌ (22), ವಿನಾಯಕನಗರದ ರಾಜವೇಲು (22) ಎಸ್‌.ಆರ್‌.ನಗರದ ಹರೀಶ್‌ ಕುಮಾರ್‌ (22) ಎಂಬುವರನ್ನು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಮಹೇಶ್‌ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಬಲೆ ಬೀಸಲಾಗಿದೆ. ಬಂಧಿತರ ಪೈಕಿ ಕೆಲವರು ಕಾರು ಚಾಲಕರಾಗಿದ್ದು, ಉಳಿದವರು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಏನಿದು ಘಟನೆ?: ಆಂಧ್ರಪ್ರದೇಶ ಮೂಲದ ವೆಂಕಟಸುಬ್ಟಾರೆಡ್ಡಿ ಅವರು ಏಳೆಂಟು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಇವರ ಕುಟುಂಬ ಸಹಕಾರ ನಗರದಲ್ಲಿ ನೆಲೆಸಿದೆ. ವೆಂಕಟಸುಬ್ಟಾರೆಡ್ಡಿ ನಗರದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸುತ್ತಿದ್ದರು. ಜ. 18ರಂದು ಸಂಜೆ ವೆಂಕಟಸುಬ್ಟಾ ರೆಡ್ಡಿ ಹೊಸೂರು ಮುಖ್ಯರಸ್ತೆಯ ಸಿದ್ದಾಪುರದ ಜಂಕ್ಷನ್‌ ಬಳಿ ಪಾದಚಾರಿ ರಸ್ತೆಯಲ್ಲಿ ನಿಂತು ಇಬ್ಬರು ಸ್ನೇಹಿತರೊಂದಿಗೆ ಹಣಕಾಸಿನ ವಿಚಾರವಾಗಿ ಜಗಳವಾಡುತ್ತಿದ್ದರು.

ಇದನ್ನು ಕಂಡ ಆರೋಪಿಗಳು ಸ್ಥಳಕ್ಕೆ ಹೋಗಿದ್ದು, ಹಣಕಾಸಿನ ವಿಚಾರಕ್ಕೆ ಜಗಳವಾಗುತ್ತಿರುವುದು ತಿಳಿದಿದೆ. ಬಳಿಕ ಆರೋಪಿಗಳು ಜಗಳ ಬಿಡಿಸಿ ಉದ್ಯಮಿ ವೆಂಕಟಸುಬ್ಟಾರೆಡ್ಡಿ ಸ್ನೇಹಿತರನ್ನು ಸ್ಥಳದಿಂದ ಕಳುಹಿಸಿದ್ದರು.  ಬಳಿಕ ವೆಂಕಟಸುಬ್ಟಾರೆಡ್ಡಿ ಅವರನ್ನು ಅಪಹರಿಸಿದರೆ ಹಣ ಸಿಗುತ್ತದೆ ಎಂದುಕೊಂಡು ಆಟೋ ಹತ್ತಿ ಮನೆಗೆ ಹೋಗಲು ಯತ್ನಿಸಿದ ಅವರನ್ನು ಇಂಡಿಕಾ ಕಾರಿನಲ್ಲಿ ಅಪಹರಿಸಿ ಆನೇಕಲ್‌ನ ಚಂದಾಪುರದ ಸಮೀಪದ ನಾರಾಯಣ ಘಟ್ಟದ ನಿರ್ಜಪ್ರದೇಶಕ್ಕೆ ಕರೆದೊಯ್ದಿದ್ದರು.

Advertisement

2 ಲಕ್ಷಕ್ಕೆ ಬೇಡಿಕೆ: ಅಪಹರಣವಾದ ದಿನ ಸಂಜೆ ವೆಂಕಟಸುಬ್ಟಾ ರೆಡ್ಡಿ ಅವರ ಮೊಬೈಲ್‌ನಿಂದ ಅವರ ಪತ್ನಿ ಕೃಷ್ಣವೇಣಿ ಅವರಿಗೆ ಕರೆ ಮಾಡಿಸಿದ ಆರೋಪಿಗಳು, ಸ್ನೇಹಿತರೊಬ್ಬರಿಗೆ ಎರಡು ಲಕ್ಷ ರೂ. ನೀಡಬೇಕು. ವರು ಮನೆಗೆ ಬರುತ್ತಾರೆ. 2 ಲಕ್ಷ ರೂ. ಕೊಟ್ಟು ಕಳುಹಿಸು ಎಂದು ಹೇಳಿದ್ದರು. ಇದರಿಂದ ಅನುಮಾನಗೊಂಡ ವೆಂಕಟಸುಬ್ಟಾ ರೆಡ್ಡಿ ಅವರ ಪತ್ನಿ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಕಾರ್ಯಪ್ರವೃತ್ತರಾದ ಪೊಲೀಸರು ತಂಡ ರಚನೆ ಮಾಡಿಕೊಂಡು ಕಾರ್ಯಾಚರಣೆಗಿಳಿದಿದ್ದಾರೆ.  ಬಳಿಕ ಮತ್ತೆ ಕೃಷ್ಣವೇಣಿಗೆ ಕರೆ ಮಾಡಿಸಿದ ಆರೋಪಿಗಳು, ಸ್ನೇಹಿತ ಹಣಕ್ಕಾಗಿ ಮಾರನೇ ದಿನ ಬೆಳಗ್ಗೆ ಮನೆಗೆ ಬರುವುದಾಗಿ ಹೇಳಿಸಿದ್ದಾರೆ. ಅದರಂತೆ ಮಾರನೇ ದಿನ ಶರವಣ ಮತ್ತು ಪ್ರಶಾಂತ್‌ ಹಣ ಪಡೆಯಲು ಮನೆಗೆ ಬಂದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮತ್ತು ಉದ್ಯಮಿಯ ಮೊಬೈಲ್‌ ಟವರ್‌ ಮಾಹಿತಿ ನೋಡಿದಾಗ ಅವರು ಚಂದಾಪುರದ ನಾರಾಯಣಘಟ್ಟ ಬಳಿ ಇರುವುದು ತಿಳಿಯುತ್ತದೆ. ಅದರಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಉಳಿದ ಆರೋಪಿಗಳನ್ನು ಬಂಧಿಸಿ ಉದ್ಯಮಿ ವೆಂಕಟಸುಬ್ಟಾರೆಡ್ಡಿ ಅವರನ್ನು ರಕ್ಷಿಸಿದ್ದಾರೆ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್‌ 364 (ಎ)ಅಪಹರಣ, 384 ಸುಲಿಗೆ ಪ್ರಕರಣ ದಾಖಲಾಗಿದೆ. 

ಅನುಮಾನ ಬರಬಾರದೆಂದು ಕಡಿಮೆ ಹಣ ಕೇಳಿದರು
ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟರೆ ರಿಯಲ್‌ ಎಸ್ಟೇಟ್‌ ಉದ್ಯಮಿ ಪತ್ನಿ ಪೊಲೀಸರಿಗೆ ವಿಷಯ ತಿಳಿಸಬಹುದೆಂದು ಆತಂಕದಿಂದ ಆರೋಪಿಗಳು ಎರಡು ಲಕ್ಷ ರೂ.ಗೆ ಮಾತ್ರ ಬೇಡಿಕೆ ಇಟ್ಟಿದ್ದರು. ಯಾರಿಗೂ ಅನುಮಾನ ಬಾರದು ಎಂಬ ಕಾರಣಕ್ಕೆ ಆರೋಪಿಗಳು ವೆಂಕಟಸುಬ್ಟಾ ರೆಡ್ಡಿ ಅವರ ಮೊಬೈಲ್‌ನಿಂದ ಪತ್ನಿಗೆ ಕರೆ ಮಾಡಿಸಿ ಹಣ ಕೇಳಿಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಅಪಹರಣಕ್ಕೊಳಗಾಗಿದ್ದ ವೆಂಕಟಸುಬ್ಟಾ ರೆಡ್ಡಿ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಉದ್ಯಮಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next