Advertisement

ತಾಲೂಕಿನಲ್ಲಿ ಮಿತಿ ಮೀರಿದ ಲಂಚದ ಹಾವಳಿ

05:22 PM Oct 01, 2019 | Suhan S |

ಸಕಲೇಶಪುರ: ತಾಲೂಕಿನ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಾವಳಿ ಮಿತಿ ಮೀರಿದ್ದು, ಬಡವರು ತಾಲೂಕಿನಲ್ಲಿ ಬದುಕಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ತಾಲೂಕು ಕಚೇರಿ ಭ್ರಷ್ಟಾಚಾರದ ಕೂಪವಾಗಿದ್ದು ಹಣವಿಲ್ಲದೇ ಇಲ್ಲಿ ಯಾವ ಕೆಲಸವೂ ಜನಸಾಮಾ ನ್ಯರಿಗೆ ಆಗುವುದಿಲ್ಲ. ತಾಲೂಕು ಕಚೇರಿಯಲ್ಲಿ ವಿಧವಾ ಪಿಂಚಣಿ, ಅಂಗವಿಕಲರ ಪಿಂಚಣಿ, ಪಡಿತರ ಚೀಟಿ, ಆದಾಯ ಹಾಗೂ ಜಾತಿ ಪ್ರಮಾಣ ಪತ್ರ, ಮತ್ತಿತರ ಕೆಲಸಗಳಿಗೆ ಲಂಚ ನೀಡುವುದು ಅನಿವಾರ್ಯವಾಗಿದೆ.

ಖಾತೆ ವರ್ಗಾವಣೆಗೂ ಲಂಚ ಕೊಡಬೇಕು: ಹೊರ ಊರಿನವರು ಇಲ್ಲಿ ಜಮೀನನ್ನು ಖರೀದಿಸಿದರೆ ತಮ್ಮ ಹೆಸರಿಗೆ ಖಾತೆ ವರ್ಗಾಯಿಸಿಕೊಳ್ಳಲು ಸುಮಾರು 25ರಿಂದ 50 ಸಾವಿರ ರೂ. ಲಂಚ ಪಡೆಯಲಾಗುತ್ತದೆ. ಇಲ್ಲದಿದ್ದಲ್ಲಿ ಅವರ ಹೆಸರಿನಲ್ಲಿ ಖಾತೆ ಆಗದಂತೆ ವಿವಿಧ ನೆಪಗಳನ್ನು ಹೇಳಿ ತಡೆಹಿಡಿಯಲಾಗುತ್ತದೆ. ಮಿನಿ ವಿಧಾನಸೌಧ, ರಾಜಸ್ವ ನಿರೀಕ್ಷಕರ ಕಚೇರಿ, ಸರ್ವೆ ಇಲಾಖೆಯ ಕಚೇರಿಗಳು ಒಂದೆಡೆ ಇರಬೇಕೆಂಬ ನಿಯಮವಿದ್ದರೂ ರಾಜಸ್ವ ನಿರೀಕ್ಷಕರ ಕಚೇರಿ ಹಾಗೂ ಸರ್ವೆ ಇಲಾಖೆ ಬೇರೆ ಬೇರೆ ಕಡೆಯಿದ್ದು ಇದನ್ನು ಮಿನಿವಿಧಾನಸೌಧಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳದ ಕಾರಣ ಲಂಚದ ಹಾವಳಿ ಮಿತಿ ಮೀರಿದೆ.

ತರಾಟೆಗೆ ತೆಗೆದುಕೊಂಡಿದ್ದ ಅಧಿಕಾರಿ: ಮಿನಿ ವಿಧಾನಸೌಧದಲ್ಲಿರುವ ಖಜಾನೆ ಕಚೇರಿಯಲ್ಲಂತೂ ಲಂಚವಿಲ್ಲದೇ ಯಾವುದೇ ಕೆಲಸವಾಗುವುದಿಲ್ಲ. ಇತ್ತೀಚೆಗಷ್ಟೆ ಸಕಾಲ ವಿಭಾಗದ ಮುಖ್ಯಸ್ಥ ಮಥಾಯಿರವರು ಸಕಾಲ ಅಡಿಯಲ್ಲಿ ಸಲ್ಲಿಸುವ ಸೇವೆಗಳ ಬಗ್ಗೆ ತಾಲೂಕು ಕಚೇರಿಯಲ್ಲಿ ಬೋರ್ಡ್‌ ಹಾಕದಿದ್ದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೂ ಸಕಾಲ ಸೇವೆಗಳ ಬಗ್ಗೆ ಮಾಹಿತಿ ನೀಡುವ ಬೋರ್ಡ್‌ ಹಾಕಿಲ್ಲ. ಒಬ್ಬ ಸರ್ಕಾರಿ ನೌಕರ ಮತ್ತೂಂದು ಕಚೇರಿಯಲ್ಲಿ ಹಣ ಕೊಡದೇ ತನ್ನ ಕೆಲಸ ಮಾಡಿಸಿಕೊಳ್ಳುವುದು ಕಷ್ಟಕರವಾಗಿದೆ. ಸರ್ಕಾರಿ ಸಿಬ್ಬಂದಿ ಬಳಿ ಗುರುತು ಪರಿಚಯವಿದ್ದವರು ಹೋದಲ್ಲಿ ಕೆಲಸವಾಗುತ್ತದೆ ಎಂಬುದು ಸುಳ್ಳಾಗಿದೆ. ಏಕೆಂದರೆ ನೌಕರರಿಗೆ ಹಣ ಸಿಗದಿರುವುದರಿಂದ ಇವರ ಕೆಲಸಗಳನ್ನು ಮಾಡಿ ಕೊಡಲು ಮುಂದಾಗುವುದಿಲ್ಲ. ಅದೇ ನೌಕರರಿಗೆ ಗುರುತು ಪರಿಚಯವಿಲ್ಲದವರು ಹಣ ನೀಡಿ ಮಧ್ಯವರ್ತಿಗಳಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ.

ಭೂಮಾಪನಾ ಇಲಾಖೆಯಲ್ಲಿ ಭ್ರಷ್ಟಾಚಾರ: ತಾಲೂಕಿನಲ್ಲಿ ಅತಿ ದೊಡ್ಡ ಭ್ರಷ್ಟಾಚಾರದ ಕೂಪವಾಗಿರುವುದು ಭೂಮಾಪನ ಇಲಾಖೆ. ಇಲ್ಲಿ ಹಣವಿಲ್ಲದೇ ಏನು ಆಗುವುದಿಲ್ಲ. ಹಣ ನೀಡದಿದ್ದಲ್ಲಿ ಭೂಮಾಪನಾ ಇಲಾಖೆಯಿಂದ ಕಂದಾಯ ಇಲಾಖೆಗೆ ಕಂದಾಯ ಇಲಾಖೆಯಿಂದ ಭೂಮಾಪನಾ ಇಲಾಖೆಗೆ ತಿರುಗಾಡುವಷ್ಟರಲ್ಲಿ ಸಾರ್ವಜನಿಕರು ಹೈರಾಣಾಗುತ್ತಾರೆ. ಒಂದು ಪೋಡು ಮಾಡಿಕೊಡಲು ಕನಿಷ್ಠವೆಂದರೂ 50 ಸಾವಿರ ರೂ. ಖರ್ಚು ಮಾಡಬೇಕಾಗಿದೆ. ಹಣ ಕೊಡದಿದ್ದಲ್ಲಿ ಸತಾಯಿಸಿ ಕೊನೆಗೆ ಬೇಕಾಬಿಟ್ಟಿ ಕೆಲಸ ಮಾಡಿ ರೈತರನ್ನು ಮತ್ತಷ್ಟು ಆತಂಕಕ್ಕೆ ತಳ್ಳಲಾಗುತ್ತದೆ. ಹೇಮಾವತಿ ಸಂತ್ರಸ್ತರ ಮುಳುಗಡೆ ಯೋಜನೆಯಲ್ಲಂತೂ ನೈಜ ಪ್ರಮಾಣ ಪತ್ರ ಹೊಂದಿರುವ ಹಲವು ಬಡವರು ಲಂಚ ಕೊಡಲಾರದೇ ಜಮೀನನ್ನು ಪಡೆಯಲು ಮುಂದಾಗಿಲ್ಲ.

Advertisement

ಹಣ ನೀಡದಿದ್ದರೆ ಇ- ಖಾತೆ ಆಗೋಲ್ಲ: ಪುರ ಸಭೆಯಲ್ಲಂತೂ ಭ್ರಷ್ಟಾಚಾರ ಮಿತಿ ಮೀರಿದ್ದು, ತಮ್ಮ ಆಸ್ತಿಗಳಿಗೆ ಇ-ಖಾತಾ ಮಾಡಿಸಿಕೊಳ್ಳಲು 3ರಿಂದ 10 ಸಾವಿರ ರೂ. ಲಂಚ ನೀಡಬೇಕಾಗಿದೆ. ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಂತೂ ಲಂಚವಿಲ್ಲದೇ ಯಾವುದೇ ಆಸ್ತಿಗಳು ನೋಂದಣಿಯಾಗುವುದಿಲ್ಲ. ತಾಲೂಕು ಪಂಚಾಯಿತಿ, ಸೆಸ್ಕ್ ಲೋಕೋಪಯೋಗಿ ಇಲಾಖೆ, ಜಿಪಂ ಎಂಜಿನಿಯರಿಂಗ್‌ ಇಲಾಖೆ ಸೇರಿದಂತೆ ಎಲ್ಲೆಡೆ ಗುತ್ತಿಗೆದಾರರು ಕಮಿಷನ್‌ ಹಣ ನೀಡದೇ ಯಾವುದೆ ಕೆಲಸ ಮಾಡುವ ಹಾಗಿಲ್ಲ.

ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ: ಎಆರ್‌ಟಿಒ ಕಚೇರಿಯಲ್ಲೂ ಮಧ್ಯವರ್ತಿಗಳದ್ದೇ ಹಾವಳಿಯಾಗಿದೆ. ಪಟ್ಟಣದ ಕ್ರಾಫ‌ರ್ಡ್‌ ಆಸ್ಪತ್ರೆಯಲ್ಲೂ ಲಂಚ ಕೆಲಸ ಮಾಡುತ್ತಿದೆ. ನರ್ಸ್‌ಗಳಿಗೆ ಲಂಚ ನೀಡಿದಲ್ಲಿ ಉತ್ತಮ ಸೇವೆ ದೊರಕುತ್ತದೆ ಇಲ್ಲದಿದ್ದಲ್ಲಿ ರೋಗಿಗಳನ್ನು ಕಡೆಗಣಿಸಲಾಗುತ್ತದೆ. ಸಿಡಿಪಿಒ, ಕೃಷಿ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯಲ್ಲೂ ಇತ್ತೀಚೆಗೆ ಲಂಚದ ಹಾವಳಿ

ಪ್ರಾರಂಭವಾಗಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲೂ ಸಹ ಲಂಚದ ಪಿಡುಗು ಇದೆ. ಪಟ್ಟಣ ವ್ಯಾಪ್ತಿಯಲ್ಲಿರುವ ಕಚೇರಿಗಳು ಮಾತ್ರವಲ್ಲದೇ ಗ್ರಾಮ ಪಂಚಾಯಿತಿ ಕಚೇರಿಗಳೂ ಭ್ರಷ್ಟಾಚಾರದ ಕೇಂದ್ರಗಳಾಗಿದೆ. ಲಂಚವಿಲ್ಲದೇ ಯಾವುದೇ ಕೆಲಸವಾಗವುದಿಲ್ಲ. ಬಡವರು ಹಣ ಕೊಟ್ಟರೂ ಕೆಲಸಗಳಾಗುತ್ತಿಲ್ಲ. ಬಹುತೇಕ ಎಲ್ಲಾ ಇಲಾಖೆಗಳಲ್ಲೂ ಲಂಚದ ಹಾವಳಿ ಮುಗಿಲು ಮುಟ್ಟಿದ್ದು, ಅಧಿಕಾರಿಗಳು ಜನ ಸಾಮಾನ್ಯರು ಮಧ್ಯವರ್ತಿಗಳನ್ನು ಆಶ್ರಯಿಸದೆ ನೇರವಾಗಿ ಕಚೇರಿಗೆ ಬಂದು ಕೆಲಸ ಮಾಡಿಸಿಕೊಂಡು ಹೋಗಲಿ ಎಂದು ಕಾಟಾಚಾರಕ್ಕೆ ಹೇಳುತ್ತಾರೆ.

ಆದರೆ ವಾಸ್ತವವಾಗಿ ಜನಸಾಮಾನ್ಯರಿಗೆ ಹಲವು ಕಚೇರಿ ಗಳಲ್ಲಿ ಸರಿಯಾದ ಮಾಹಿತಿ ದೊರಕುವುದಿಲ್ಲ. ಈ ಹಿನ್ನೆಲೆಯಲ್ಲಿ ಅನಿರ್ವಾಯವಾಗಿ ಜನಸಾಮಾನ್ಯರು, ಕೂಲಿ ಕಾರ್ಮಿಕರು ಕಚೇರಿ ಕೆಲಸಗಳಿಗೆ ಮಧ್ಯವರ್ತಿಗಳನ್ನು ಆಶ್ರಯಿಸಬೇಕಾಗಿದೆ. ಹಲವು ಇಲಾಖೆಗಳಲ್ಲಿ ಪ್ರಾಮಾಣಿಕ ಅಧಿಕಾರಿಗಳು ನೌಕರರು ಸೇವೆ ಸಲ್ಲಿಸುತ್ತಿದ್ದು ಆದರೆ ಲಂಚವನ್ನು ನಿಲ್ಲಿಸಲು ಅಸಹಾಯಕರಾಗಿದ್ದಾರೆ. ನಿಯಮ ಪಾಲಿಸದ ನೌಕರರು: ಬಹುತೇಕ ಸರ್ಕಾರಿ ಕಚೇರಿಗಳಿಗೆ ನಿಗದಿತ ವೇಳೆಯಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸಲು ಬರುವುದಿಲ್ಲ. ಸರ್ಕಾರದಿಂದ ನಿಯಮದಂತೆ ಬೆಳಗ್ಗೆ 9.55ರಿಂದ 10.30ರ ಒಳಗೆ ಕಚೇರಿಗೆ ಹಾಜರಾಗುವ ಸಿಬ್ಬಂದಿ ಬಯೋ ಮೆಟ್ರಿಕ್‌ ನೀಡಬೇಕು ಹಾಗೂ ಸಂಜೆ 5.30ಕ್ಕೆ ಕರ್ತವ್ಯ ಮುಗಿಸಿ ಹೊರ ಹೋಗುವಾಗ ಬಯೋ ಮೆಟ್ರಿಕ್‌ ನೀಡ ಬೇಕೆಂಬ ನಿಯಮವಿದ್ದರೂ ಇದು ಪಾಲನೆಯಾಗುತ್ತಿಲ್ಲ.

ಅಧಿಕಾರಿಗಳಿಗೆ ಕಾಯುವುದು ಅನಿವಾರ್ಯ: ಹಲವು ಕಚೇರಿಗಳಲ್ಲಿ 10.30ಕ್ಕೆ ಸರಿಯಾಗಿ ಆಗಮಿಸುವ ಹಲವು ಸಿಬ್ಬಂದಿ ಬಯೋ ಮೆಟ್ರಿಕ್‌ ನೀಡಿ ಪುನಃ ಉಪಹಾರ ಅಥವಾ ಕಾಫಿಗೆಂದು ಹೊರ ಹೋಗುತ್ತಾರೆ. ಕನಿಷ್ಠ ಅರ್ಧಗಂಟೆ ಕಾμ ಹಾಗೂ ಉಪಾಹಾರಕ್ಕೆಂದು ತೆರಳುವ ಈ ಸಿಬ್ಬಂದಿಯನ್ನು ಜನರು ಕಾಯುತ್ತಲೇ ಇರಬೇಕಾಗುತ್ತದೆ. ಹಾಗೂ ಹೀಗೂ ಕೆಲಸ ಆರಂಭಿಸಿದರೆ ಮತ್ತೆ ಊಟದ ಸಮಯವಾಗುತ್ತದೆ. ಊಟ ಮಾಡಿಕೊಂಡು ಕೆಲ ಸಮಯ ಕೆಲಸ ಮಾಡಿ ಮತ್ತೆ ಕಾಫಿಗೆಂದು ಹೊರ ಹೋಗುವ ಸಿಬ್ಬಂದಿ ಬರಿ ಕಾಲ ಹಗರಣದಲ್ಲೆ ಇರುತ್ತಾರೆ. ಕೆಲವು ಸಿಬ್ಬಂದಿ ಕಚೇರಿ ಕೆಲಸದ ಸಮಯದಲ್ಲೇ ಮೊಬೈಲ್‌ ನಲ್ಲಿ ಕಾಲ ಕಳೆಯುತ್ತಿರುತ್ತಾರೆ. ತಾಲೂಕನ್ನು ಲಂಚ ಮುಕ್ತವಾಗಿ ಮಾಡಲು ಶಾಸಕರು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಜನರ ಹಿತ ಕಾಪಾಡಬೇಕಾಗಿದೆ.

 

-ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next